Discussion on building a developed India through research and innovation
ಸಂಶೋಧನೆ–ಆವಿಷ್ಕಾರಗಳ ಮೂಲಕ ವಿಕಸಿತ ಭಾರತ ನಿರ್ಮಾಣದ ಚರ್ಚೆ

ನಾಳೆ ಬೆಂಗಳೂರಿನಲ್ಲಿ ಒಂದು ದಿನದ ವಿಶೇಷ ಶೈಕ್ಷಣಿಕ ಕಾರ್ಯಕ್ರಮ
ಬೆಂಗಳೂರು, ಸೆ.26: ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ ಕರ್ನಾಟಕ ಹಾಗೂ ಸಿರಾಡ್ ಸಹಯೋಗದಲ್ಲಿ, ‘ವಾಯ್ಸ್ ಆಫ್ ಬೆಂಗಳೂರು ಅಕಾಡೆಮಿಷಿಯನ್ಸ್’ ಬ್ಯಾನರ್ ಅಡಿಯಲ್ಲಿ ‘ರೋಲ್ ಆಫ್ ಅಕಾಡೆಮಿಯ ಇನ್ ಎಂಪವರಿಂಗ್ ಇಂಡಿಯಾ ಥ್ರೂ ರಿಸರ್ಚ್ ಅಂಡ್ ಇನ್ನೋವೇಷನ್: ದಿ ವಿಷನ್ ಆಫ್ ವಿಕಸಿತ ಭಾರತ್’ ಎಂಬ ವಿಷಯದ ಕುರಿತು ಒಂದು ದಿನದ ವಿಶೇಷ ಶೈಕ್ಷಣಿಕ ಕಾರ್ಯಕ್ರಮವನ್ನು ಸೆ.27ರಂದು ಭಾನುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಜಯನಗರದ ಆರ್.ವಿ. ಟೀಚರ್ಸ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಎಬಿಆರ್ಎಸ್ಎಂ ಸಂಯೋಜಕರಾದ ಡಾ. ಶಿವಪೂಜಿ ಕೋಟಿ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಸಿಎಸ್ಐಆರ್ನ ಮಹಾನಿರ್ದೇಶಕರು ಹಾಗೂ ಡಿಎಸ್ಐಆರ್ ಕಾರ್ಯದರ್ಶಿ ಡಾ. ಶ್ರೀಮತಿ ಎನ್. ಕಲೈ ಸೆಲ್ವಿ ಅವರು ಮುಖ್ಯ ಅತಿಥಿಗಳಾಗಿ ಉದ್ಘಾಟಿಸಲಿದ್ದಾರೆ. ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಶ್ರೀ ಗುಂತ ಲಕ್ಷ್ಮಣ್ ಜೀ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ನ ಖಜಾಂಚಿ ಶ್ರೀ ಪಿ.ಎಸ್. ವೆಂಕಟೇಶ್ ಬಾಬು ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು, ಪ್ರಾಧ್ಯಾಪಕರು, ಸಂಶೋಧಕರು, ಶಿಕ್ಷಣ ತಜ್ಞರು, ಶೈಕ್ಷಣಿಕ ಮಾರ್ಗದರ್ಶಕರು ಹಾಗೂ ಉಪನ್ಯಾಸಕರು ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಸಂಯೋಜಕರು ತಿಳಿಸಿದ್ದಾರೆ.
ಸಂಶೋಧನೆ ಮತ್ತು ಆವಿಷ್ಕಾರಗಳ ಮೂಲಕ ಭಾರತವನ್ನು ಸಶಕ್ತಗೊಳಿಸುವುದು, ಶಿಕ್ಷಣ ಕ್ಷೇತ್ರದಲ್ಲಿ ನಾವೀನ್ಯತೆಗಳನ್ನು ಉತ್ತೇಜಿಸುವುದು, ದೇಶದ ಪ್ರಗತಿಗೆ ಶೈಕ್ಷಣಿಕ ಸಂಸ್ಥೆಗಳ ಕೊಡುಗೆ ಹಾಗೂ ‘ವಿಕಸಿತ ಭಾರತ’ದ ಕನಸನ್ನು ಸಾಕಾರಗೊಳಿಸುವಲ್ಲಿ ಶಿಕ್ಷಣ ಕ್ಷೇತ್ರದ ಪಾತ್ರ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಕಾರ್ಯಕ್ರಮದಲ್ಲಿ ವಿಚಾರ ವಿನಿಮಯ ಮತ್ತು ಚರ್ಚೆ ನಡೆಯಲಿದೆ ಎಂದು ಡಾ. ಶಿವಪೂಜಿ ಕೋಟಿ ತಿಳಿಸಿದ್ದಾರೆ.



