Dasimayya's life values remain a guiding light for society even today.ದಾಸಿಮಯ್ಯನವರ ಜೀವನ ಮೌಲ್ಯಗಳು ಇಂದಿಗೂ ಸಮಾಜಕ್ಕೆ ದಾರಿದೀಪ


ಗಂಗಾವತಿ: “ದೇವರ ದಾಸಿಮಯ್ಯನವರ ಜೀವನ ಮೌಲ್ಯಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಕಾಯಕ, ಸತ್ಯ ಮತ್ತು ಸಮಾನತೆಯ ಪ್ರತೀಕವಾಗಿರುವ ದೇವರ ದಾಸಿಮಯ್ಯನವರ ಆದರ್ಶಗಳು ಪ್ರತಿಯೊಬ್ಬರ ಬದುಕಿಗೂ ಮಾರ್ಗದರ್ಶನ ನೀಡುತ್ತವೆ” ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮುನಿರಾಬಾದ್ ಡಯಟ್ನ ಹಿರಿಯ ಉಪನ್ಯಾಸಕರಾದ ಶ್ರೀ ಮಂಜುನಾಥ ವಸ್ತ್ರದ ಅವರು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಕವಿತಾ ಶಿವಪ್ರಸಾದ ಬೆನ್ನೂರು ಅವರ ಮನೆಯಲ್ಲಿ “ಮನೆ ಮನೆಗೆ ದೇವಲ ಸ್ಪೂರ್ತಿ” ಮಾಸಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ಅಮರಮ್ಮ ಕೊಚಿ ಅವರು “ದೇವರ ದಾಸಿಮಯ್ಯನವರ ಜೀವನ ಮತ್ತು ವಚನಗಳು” ಕುರಿತು ಉಪನ್ಯಾಸ ನೀಡಿದರು.
ಉಪನ್ಯಾಸಕರಾದ ಶ್ರೀ ಆದಪ್ಪ ಪುಟ್ಟಿ ಅವರು ಮಾತನಾಡಿ, “ದೇವರ ದಾಸಿಮಯ್ಯನವರು ಆದ್ಯ ವಚನಕಾರರಾಗಿದ್ದು, ಬಸವಾದಿ ಶರಣರು ತಮ್ಮ ವಚನಗಳಲ್ಲಿ ದಾಸಿಮಯ್ಯನವರ ಶ್ರೇಷ್ಠತೆಯನ್ನು ಉಲ್ಲೇಖಿಸಿದ್ದಾರೆ. ಅವರ ಕಾಯಕನಿಷ್ಠೆ, ಸರಳತೆ, ಸತ್ಯ, ಸಮಾನತೆ ಹಾಗೂ ಸಾಮಾಜಿಕ ಕಳಕಳಿ ಇಂದಿನ ಪೀಳಿಗೆಗೆ ಮಾದರಿಯಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಾನಂದ ತಿಮ್ಮಾಪೂರ, “ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಭಾವನೆ, ನಮ್ಮ ಪೂರ್ವಜರ ಇತಿಹಾಸ ಮತ್ತು ಅವರ ಆದರ್ಶಗಳನ್ನು ತಿಳಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ಸಮಾಜದ ಹೆಚ್ಚಿನ ಬಂಧುಗಳು ತಮ್ಮ ಕುಟುಂಬದೊಂದಿಗೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಮಹನೀಯರಾದ ವೀರಭದ್ರಪ್ಪ ಹೆಬ್ಬಾಳ, ಮಲ್ಲಿಕಾರ್ಜುನ ಕಣಿಗಿ ಹಾಗೂ ಶಶಿಧರ ಕೊಳಗದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಜಾವರ್ ಕ್ಯಾಂಪ್ ದೇವಾಂಗ ಸಮಾಜದ ಉಪಾಧ್ಯಕ್ಷರಾದ ಚಿದಾನಂದಪ್ಪ ಪಪ್ತಿ, ಸಮಾಜದ ಹಿರಿಯರಾದ ರಾಮಚಂದ್ರಪ್ಪ ಹಾನಾಪುರ, ಗಿರಿಧರ್ ಬೆಟಿಗೇರಿ, ಶಂಕರ್ ಚಿಂತಾ, ಬೋಜಪ್ಪ ಅರಸಂಗಿ, ನೌಕರರ ಸಂಘದ ಪದಾಧಿಕಾರಿಗಳಾದ ವಿರೂಪಾಕ್ಷಪ್ಪ ವೀರಾಪುರ, ಮಲ್ಲಿಕಾರ್ಜುನ ಕಾಡೂರು, ಮೋಹನ್ ಹುಲಮನಿ, ನಾಗರಾಜ ಹುಚ್ಚನಗೌಡರು ಸೇರಿದಂತೆ ಸಮಾಜದ ಬಂಧುಗಳು ಉಪಸ್ಥಿತರಿದ್ದರು.



