ಸಿದ್ದರಾಮಯ್ಯ ಪುತ್ಥಳಿ ತೆರವು ಖಂಡಿಸಿ ಸೆ.23ರಂದು ಗಂಗಾವತಿಯಲ್ಲಿ ಪ್ರತಿಭಟನೆ

H.Mallikarjun
H.Mallikarjun - Kalyanasiri
2 Min Read

Siddaramaiah demands removal of statue, protests in Gangavathi on Sept 23

ಸಿದ್ದರಾಮಯ್ಯ ಪುತ್ಥಳಿ ತೆರವು ಖಂಡಿಸಿ ಸೆ.23ರಂದು ಗಂಗಾವತಿಯಲ್ಲಿ ಪ್ರತಿಭಟನೆ

ಗಂಗಾವತಿಯಲ್ಲಿ ಬೈಕ್ ರ್ಯಾಲಿ; ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಲು ನಿರ್ಧಾರ

 

ಗಂಗಾವತಿ: ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಹೈಕೋರ್ಟ್ ವೃತ್ತದ ಬಳಿ ಸ್ಥಾಪಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ಥಳಿಯನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿರುವುದನ್ನು ಖಂಡಿಸಿ ಗಂಗಾವತಿಯಲ್ಲಿ ಸೆ.23ರಂದು ಪ್ರತಿಭಟನೆ ನಡೆಸಲು ತಾಲೂಕು ಕುರುಬರ ಹಾಲುಮತ ಸಮಾಜ ನಿರ್ಧರಿಸಿದೆ.

ಜಾಹೀರಾತು

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದವರೆಗೆ ಪ್ರತಿಭಟನಾ ಬೈಕ್ ರ್ಯಾಲಿ ನಡೆಸಿ, ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ, ಕಲಬುರಗಿಯಲ್ಲಿ ತೆರವುಗೊಳಿಸಿರುವ ಸಿದ್ದರಾಮಯ್ಯ ಅವರ ಪುತ್ಥಳಿಯನ್ನು ಪುನಃ ಅದೇ ಸ್ಥಳದಲ್ಲಿ ಪ್ರತಿಷ್ಠಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಶ್ರೀ ಕನಕದಾಸ ಕುರುಬ ಸಂಘದ ಅಧ್ಯಕ್ಷ ವಿಠಲಾಪೂರ ಯಮನಪ್ಪ ತಿಳಿಸಿದರು.

ನಗರದ ಸಿಬಿಎಸ್ ಗಂಜ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯದಲ್ಲಿ 14 ಬಾರಿ ಬಜೆಟ್ ಮಂಡಿಸಿದ್ದು, ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಜಾತಿ-ಭೇದವಿಲ್ಲದೆ ರಾಜ್ಯದ ಎಲ್ಲ ವರ್ಗಗಳ ಜನರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಅಭಿಮಾನಿಗಳು ಕಲಬುರಗಿ ನಗರದ ವೃತ್ತವೊಂದರಲ್ಲಿ ಸಂಚಾರಕ್ಕೆ ಅಡ್ಡಿಯಾಗದ ರೀತಿಯಲ್ಲಿ ಪುತ್ಥಳಿ ಸ್ಥಾಪಿಸಿ ಅನಾವರಣಗೊಳಿಸಿದ್ದರು. ಆದರೆ ಯಾವುದೇ ಅಧಿಕೃತ ಅನುಮತಿ ಪಡೆಯದೆ ಸ್ಥಾಪಿಸಲಾಗಿದ್ದ 9 ಅಡಿ ಎತ್ತರದ ಪ್ರತಿಮೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಿದ್ದರು ಎಂದು ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಹಾಲುಮತ ಕುರುಬ ಸಮಾಜದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು, ಕಲಬುರಗಿ ಮಹಾನಗರ ಪಾಲಿಕೆ ಕೂಡಲೇ ಪುತ್ಥಳಿಯನ್ನು ಮರುಸ್ಥಾಪಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಅವರು ಅಹಿಂದ ವರ್ಗಗಳ ಪರವಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದ್ದಾರೆ ಎಂಬುದು ತಮ್ಮ ಅಭಿಪ್ರಾಯವಾಗಿದ್ದು, ಈ ವಿಚಾರವಾಗಿ ರಾಜ್ಯಾದ್ಯಂತ ಹೋರಾಟ ನಡೆಸುವ ಮುನ್ನವೇ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ವಿಠಲಾಪೂರ ಯಮನಪ್ಪ ಒತ್ತಾಯಿಸಿದರು.

ಸೆ.23ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಲುಮತ ಕುರುಬ ಸಮಾಜದ ಮುಖಂಡರು, ಯುವಕರು ಹಾಗೂ ಅಭಿಮಾನಿಗಳು ಭಾಗವಹಿಸುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು.

ಸಭೆಯಲ್ಲಿ ಸಣ್ಣಕ್ಕಿ ನೀಲಪ್ಪ, ಮೋರಿದುರುಗಪ್ಪ, ವಿರೂಪಾಕ್ಷಪ್ಪ, ಅಶೋಕಗೌಡ, ಬಿ. ಶರಣಪ್ಪ, ಬಸವರಾಜ ಉಣ್ಣಿ, ಪರಶುರಾಮ ಇಟಗಿ, ಗಡ್ಡಿ ಹನುಮಂತಪ್ಪ, ಸಿದ್ದಲಿಂಗನಗೌಡ, ಬಿ. ವೆಂಕಟೇಶ್, ಬಕ್ಕಂಡಿ ಬಸವರಾಜ, ಗಿಡ್ಡಿ ಹನುಮಂತಪ್ಪ, ಕೆ. ನಾಗೇಶಪ್ಪ, ಬಿ. ಫಕೀರಯ್ಯ, ಅಡ್ಡಿ ಶಾಮಣ್ಣ, ತಿಪ್ಪಣ್ಣ ಗಿಡ್ಡಿ ಸೇರಿದಂತೆ ಹಾಲುಮತ ಕುರುಬ ಸಮಾಜದ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article