ಹುಲಿಗಿಯಲ್ಲಿ ಮಲ್ಲಿಗೆ ಬೆಳೆಯ ಕ್ಷೇತ್ರೋತ್ಸವ

H.Mallikarjun
H.Mallikarjun - Kalyanasiri
3 Min Read

Field Day on Jasmine Cultivation in Huligi

ಹುಲಿಗಿಯಲ್ಲಿ ಮಲ್ಲಿಗೆ ಬೆಳೆಯ ಕ್ಷೇತ್ರೋತ್ಸವ

ಜಾಹೀರಾತು

ಕೊಪ್ಪಳ ಆಗಸ್ಟ್ 25, (ಕರ್ನಾಟಕ ವಾರ್ತೆ): ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ವತಿಯಿಂದ ಸೋಮವಾರದಂದು ಹುಲಿಗಿ ಗ್ರಾಮದ ವೀರೇಶ್ ಬಸವರಾಜ ಬೆನಕಟ್ಟಿರವರ ಮಲ್ಲಿಗೆ ತೋಟದಲ್ಲಿ ಮಲ್ಲಿಗೆ ಬೆಳೆಯ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕ್ಷೇತ್ರೋತ್ಸವದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದ ವಿಸ್ತರಣಾ ಮುಂದಾಳು  ಡಾ. ಪಿ. ಆರ್. ಬದರಿ ಪ್ರಸಾದರವರು ಮಲ್ಲಿಗೆ ಬೆಳೆಯಲ್ಲಿ ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಿದರು. ಈ ಭಾಗದಲ್ಲಿ 500 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಲ್ಲಿಗೆ ಕೃಷಿ ಮಾಡಲಾಗುತ್ತಿದ್ದು, ಮಲ್ಲಿಗೆ ದರದಲ್ಲಿ ಹೆಚ್ಚಿನ ಏರಿಳಿತಗಳಾಗುವುದರಿಂದ ರೈತರಿಗೆ ನಿಖರವಾದ ಆದಾಯ ದೊರೆಯದೇ ಇರುವುದು ಕಂಡುಬAದಿರುತ್ತದೆ. ಇದಕ್ಕಾಗಿ ಮೌಲ್ಯವರ್ಧನೆ ಮಾಡುವುದರ ಮೂಲಕ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದರು.
ಹೂವಿನ ಮಾಲೆಕಟ್ಟುವ ಯಂತ್ರ ಮತ್ತು ಸುಗಂಧ ದ್ರವ್ಯವನ್ನು ತಯಾರಿಸುವ ಘಟಕದ ಬಗ್ಗೆ ಮಾಹಿತಿ ನೀಡುತ್ತಾ ಆಸಕ್ತ ರೈತರು ಕೇಂದ್ರಕ್ಕೆ ಬಂದಲ್ಲಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನ ತೋಟಗಾರಿಕೆ ವಿಜ್ಞಾನಿಗಳು ಅಥವಾ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರಿನ ವಿಜ್ಞಾನಿಗಳನ್ನು ಕರೆಸಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಕ್ಕೆ ಭೇಟಿ ನೀಡಲು ಕರೆ ನೀಡಿದರು.
ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಶ್ರೀನಿವಾಸ ಕುಲಕರ್ಣಿ ಅವರು ಮಾತನಾಡಿ, ಈ ಭಾಗದಲ್ಲಿ ನೀರಾವರಿ ಸೌಲಭ್ಯವಿದ್ದು, ನೀವೆಲ್ಲಾ ತುಂಗಭದ್ರಾ ಅಣೆಕಟ್ಟಿಗೆ ತುಂಬಾ ಹತ್ತಿರದಲ್ಲಿರುವುದರಿಂದ ಯಶಸ್ವಿಯಾಗಿ ಮೀನು ಸಾಕಾಣಿಕೆ ಮಾಡಬಹುದು ಎಂದು ತಿಳಿಸಿದರು ಹಾಗೂ ಮೀನು ಸಾಕಾಣಿಕೆ ಮಾಡಲು ಇಲಾಖೆಯಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ನಿವೃತ್ತ ತೋಟಗಾರಿಕೆ ತಜ್ಞರು ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಕೊಪ್ಪಳ ಸದಸ್ಯರಾದ ವಾಮನಮೂರ್ತಿ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಸಮಗ್ರ ಕೃಷಿಯಲ್ಲಿ ಪುಷ್ಪ ಕೃಷಿ ಅತ್ಯಂತ ಲಾಭದಾಯಕವಾಗಿದ್ದು, ರೈತರು ಕೇವಲ ಭತ್ತವನ್ನು ಬೆಳೆಯದೆ ಪುಷ್ಪ ಕೃಷಿ ಮಾಡುವುದರ ಮೂಲಕ ಹೆಚ್ಚಿನ ಲಾಭವನ್ನು ಮತ್ತು ನಿರಂತರ ಆದಾಯವನ್ನು ಪಡೆಯಬಹುದೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಲ್ಲಿಗೆಯ ಇತರೆ ತಳಿಗಳನ್ನು ಕೂಡ ಬೆಳೆಯುವುದರ ಮೂಲಕ ವರ್ಷ ಪೂರ್ತಿ ಹೂಗಳನ್ನು ಪಡೆದು ನಿರಂತರ ಆದಾಯ ಪಡೆಯಬಹುದಲ್ಲದೆ ಜೇನು ಸಾಕಾಣಿಕೆ ಮಾಡಿದಲ್ಲಿ ಹೆಚ್ಚಿನ ಇಳುವರಿ ಮತ್ತು ಸಾವಯವ ಕೃಷಿ ಮಾಡಲು ಅನುಕೂಲವಾಗುತ್ತದೆ. ಪ್ರಸ್ತುತ ಬರದ ಈ ಪರಿಸ್ಥಿತಿಯಲ್ಲಿಯೂ ಮಲ್ಲಿಗೆ ಕೃಷಿ ಉತ್ತಮ ಲಾಭದಾಯಕ ಆಗಿರುವುದರಿಂದ ಈ ಭಾಗದ ರೈತರಿಗೆ ಅನುಕೂಲವಾಗಿದೆ. ಈ ಒಂದು ಕ್ಷೇತ್ರೋತ್ಸವದ ಮೂಲಕ ಹೆಚ್ಚಿನ ರೈತರು ಪುಷ್ಪ ಕೃಷಿಯಲ್ಲಿ ತೊಡಗಿಸಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಪ್ರಗತಿಪರ ರೈತರಾದ ವೀರೇಶರವರು ಮಾತನಾಡಿ, “ಐದಾರು ವರ್ಷಗಳಿಂದ ನಾನು ಮಲ್ಲಿಗೆ ಕೃಷಿ ಮಾಡುತ್ತಿದ್ದು, ಅತಿ ಹೆಚ್ಚಿನ ಆಳಿನ ಬೇಡಿಕೆ ಇರುವ ಈ  ಬೆಳೆ ಮಾಡಬೇಕಾದಲ್ಲಿ ಆಳುಗಳ ಲಭ್ಯತೆಯನ್ನು ನೋಡಿಕೊಂಡು ಮಾಡಬೇಕು. ಬೇರೆ ಬೇರೆ ಉದ್ಯಮವಿರುವ ಮತ್ತು ಭತ್ತ ಕೃಷಿ ಮಾಡುವ ನಾನು, ನನ್ನ ತೋಟವನ್ನು ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಿ ಕೂಲಿ ಅಳುಗಳಿಗೆ ಹಂಚಿಕೊAಡಿರುತ್ತೇನೆ. ಇದರಿಂದಾಗಿ ಗ್ರಾಮದ ಮಹಿಳೆಯರಿಗೆ ಉದ್ಯೋಗವನ್ನು ಕೊಟ್ಟಂತಾಗುತ್ತದೆ ಮತ್ತು ಕೂಲಿ ಆಳುಗಳ ನಿರ್ವಹಣೆ ಸುಲಭವಾಗಿ ನನಗೆ ಉತ್ತಮ ಲಾಭ ಬರುತ್ತಿದೆ ಎಂದು ತಿಳಿಸಿದರು. ಮಲ್ಲಿಗೆ ಬೇಸಾಯ ಕ್ರಮಗಳು ಹಾಗೂ ಮಾರುಕಟ್ಟೆ ಕುರಿತು ಮಾಹಿತಿ ನೀಡಿದರು.
ಮಲ್ಲಿಗೆ ಬಿಡಿಸುವ ಕೂಲಿಕಾರರಾದ ಈರಮ್ಮ ಹಾಗೂ ರುದ್ರಮ್ಮ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ನಾವು ಪ್ರತಿದಿನವೂ ಸುಮಾರು ನಾಲ್ಕು ಕೆ.ಜಿ. ಅಷ್ಟು ಮೊಗ್ಗನ್ನು ಬಿಡಿಸುವುದರ ಮೂಲಕ ಮೊಗ್ಗಿನ ದರದ ಆಧಾರದ ಮೇಲೆ ರೂ.500 ರಿಂದ ರೂ.2000 ವರೆಗೆ ಪ್ರತಿದಿನ ಸಂಪಾದಿಸುತ್ತೇವೆ ಎಂದು ತಿಳಿಸಿದರು.
ನಮ್ಮಲ್ಲಿ ಉದ್ಯೋಗ ಖಾತ್ರಿ ಕಾರ್ಡ್ ಇದ್ದರೂ ಕೂಡ ಮಲ್ಲಿಗೆ ಹೂವಿನ ಕಟಾವಿರುವವರೆಗೆ ನಾವು ಉದ್ಯೋಗಖಾತ್ರಿ ಕೆಲಸಕ್ಕೆ ಹೋಗುವುದಿಲ್ಲ. ಆದರೆ ಮಾರ್ಚ್ ತಿಂಗಳಿನ ನಂತರ ಮಲ್ಲಿಗೆ ಹೂವಿನ ಇಳುವರಿ ಕಡಿಮೆಯಾದಾಗ ಉದ್ಯೋಗವನ್ನು ಅರಸಿಕೊಂಡು ಹೋಗುತ್ತೇವೆ ಎಂಬ ಮಾಹಿತಿಯನ್ನು ನೀಡಿದರು. ಹೂವಿನ ಖರೀದಿದಾರರಾದ ಶರಣಪ್ಪ ಅವರು ಹೊಸಪೇಟೆಯಲ್ಲಿನ ಹೂವಿನ ಮಾರುಕಟ್ಟೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ನಾಗರಾಜು, ಅಭಿಷೇಕ, ಪರಮೇಶ್ವರಪ್ಪ, ಬಸವರಾಜ ಬ್ಯಾಳಿ ಅಲ್ಲದೆ ಅನೇಕ ರೈತರು ಮತ್ತು ರೈತ ಮಹಿಳೆಯರು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article