ಕೊಪ್ಪಳ ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ

H.Mallikarjun
H.Mallikarjun - Kalyanasiri
4 Min Read

Review of Panchayati Guarantee Schemes Progress in Koppal Taluk

ಕೊಪ್ಪಳ ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ
ಕೊಪ್ಪಳ ಆಗಸ್ಟ್ 28 (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ತಾಲೂಕಿನಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿರುವ ಕುರಿತು ಕೊಪ್ಪಳ ತಾಲೂಕು ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಗುರುವಾರ (ಆ.27) ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷರಾದ ಬಾಲಚಂದ್ರನ್ ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆ ಕುರಿತು ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಕೊಪ್ಪಳ ತಾಲೂಕಿನಲ್ಲಿ ಒಟ್ಟು 89,305 ಫಲಾನುಭವಿಗಳಿದ್ದು, ಈ ಪೈಕಿ 83,028 ಫಲಾನುಭವಿಗಳಿಗೆ ಜೂನ್ 2026ರವರೆಗೆ ತಲಾ ರೂ. 2,000 ರಂತೆ ಅನುದಾನ ಜಮೆಯಾಗಿದೆ ಎಂದು ತಿಳಿಸಿದರು.
ಸಮಿತಿ ಸದಸ್ಯರಾದ ಜ್ಯೋತಿ ಗೊಂಡಬಾಳ ಮಾತನಾಡಿ, ವಿವಿಧ ವಾರ್ಡ್ಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿಗಳನ್ನು ಸಲ್ಲಿಸುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. ಈ ಕುರಿತು ಕಾರ್ಯಕರ್ತೆಯರಿಗೆ ಸ್ಪಷ್ಟ ಮಾರ್ಗದರ್ಶನ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಹೊಸ ಅರ್ಜಿಗಳನ್ನು ಸ್ವೀಕರಿಸುವ ಕುರಿತು ಇಲಾಖೆಯಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೊಪ್ಪಳ ತಾಲೂಕಿನಲ್ಲಿ 1,913 ಗೃಹಲಕ್ಷ್ಮಿ ಫಲಾನುಭವಿಗಳು ಮೃತಪಟ್ಟಿದ್ದು, ಅವರ ವಿವರಗಳನ್ನು ಅಪ್‌ಡೇಟ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಜುಲೈ ತಿಂಗಳಲ್ಲಿ 13 ಫಲಾನುಭವಿಗಳು ಮೃತಪಟ್ಟಿರುವ ಮಾಹಿತಿಯನ್ನೂ ಸಭೆಗೆ ನೀಡಲಾಯಿತು. ಮೃತ ಫಲಾನುಭವಿಗಳ ಗ್ರಾಮವಾರು ಮಾಹಿತಿಯನ್ನು ಪ್ರತಿ ತಿಂಗಳ ಪ್ರಗತಿ ವರದಿಯಲ್ಲಿ ಮಂಡಿಸುವAತೆ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಾಲಚಂದ್ರನ್ ಎಸ್. ಅವರು ಅಧಿಕಾರಿಗಳಿಗೆ ಸೂಚಿಸಿದರು.
*ಗೃಹಜ್ಯೋತಿ ಯೋಜನೆ ಪರಿಶೀಲನೆ:* ಗೃಹಜ್ಯೋತಿ ಯೋಜನೆಯ ಪರಿಶೀಲನಾ ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು, ಕೊಪ್ಪಳ ತಾಲೂಕಿನಲ್ಲಿ 56,999 ಫಲಾನುಭವಿಗಳಿದ್ದಾರೆ. ಜುಲೈ 2026ರಲ್ಲಿ ರೂ. 2.84 ಕೋಟಿಗೂ ಅಧಿಕ ಸಹಾಯಧನ ವೆಚ್ಚವಾಗಿದ್ದು, ಕೊಪ್ಪಳ ವಿಭಾಗದಲ್ಲಿ ಇದುವರೆಗೆ ರೂ. 91.28 ಕೋಟಿ ವೆಚ್ಚವಾಗಿದೆ ಎಂದು ಜೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
ಮುನಿರಾಬಾದ್ ಉಪವಿಭಾಗದಲ್ಲಿ 27,914 ಫಲಾನುಭವಿಗಳಿದ್ದು, ಜುಲೈ ತಿಂಗಳಲ್ಲಿ ರೂ. 1.36 ಕೋಟಿಗೂ ಅಧಿಕ ವೆಚ್ಚವಾಗಿದ್ದು, ಇದುವರೆಗೆರೂ. 43.78 ಕೋಟಿ ವೆಚ್ಚವಾಗಿದೆ. ಶೇ.83ರಷ್ಟು ಫಲಾನುಭವಿಗಳ ಪರಿಶೀಲನಾ ಸರ್ವೆ ಪೂರ್ಣಗೊಂಡಿದ್ದು, ಮುಂದಿನ ತಿಂಗಳಲ್ಲಿ ಸಂಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಸದಸ್ಯರಾದ ದೇವರಾಜ ನಡುವಿನಮನಿ ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಬಳಕೆಯಲ್ಲಿ ಉಂಟಾಗುವ ವ್ಯತ್ಯಾಸಗಳ ಕುರಿತು ಫಲಾನುಭವಿಗಳಿಗೆ ಲೈನ್‌ಮನ್‌ಗಳ ಮೂಲಕ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು. ಅಲ್ಲದೆ, ವಾರ್ಡ್ಗಳಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್‌ಗಳ ಸುತ್ತ ಬೆಳೆದಿರುವ ಗಿಡಗಂಟಿಗಳಿAದ ವಿದ್ಯುತ್ ಸರಬರಾಜಿಗೆ ವ್ಯತ್ಯಯವಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
*ಪಡಿತರ ವಿತರಣೆಯಲ್ಲಿ ಸಮಸ್ಯೆ ನಿವಾರಣೆಗೆ ಸೂಚನೆ:* ಎಪಿಎಲ್ ಕಾರ್ಡ್ದಾರರಿಗೆ ಆಹಾರ ಧಾನ್ಯ ವಿತರಣೆ ಇರುವುದಿಲ್ಲ ಎಂಬ ಮಾಹಿತಿ ಸಾರ್ವಜನಿಕರಿಗೆ ತಿಳಿದಿದ್ದರೂ, ಅರ್ಹರು ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಎಪಿಎಲ್ ಕಾರ್ಡ್ಗಳನ್ನು ತ್ವರಿತವಾಗಿ ವಿತರಿಸುವಂತೆ ಅನುಷ್ಠಾನಾಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.
ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಇಲಾಖೆಯಿಂದ ಸಮರ್ಪಕ ಮಾರ್ಗದರ್ಶನ ನೀಡಬೇಕು ಎಂದು ದೇವರಾಜ ನಡುವಿನಮನಿ ಒತ್ತಾಯಿಸಿದರು. ಮೆಹಬೂಬ ಪಾಶಾ ಮಾತನಾಡಿ, ಪಡಿತರ ಪಡೆಯಲು ಬರುವ ಕಾರ್ಡ್ದಾರರಿಗೆ ಸರ್ವರ್ ಬ್ಯುಸಿ ಎಂಬ ಕಾರಣ ನೀಡಿ ಹಿಂದಕ್ಕೆ ಕಳುಹಿಸಲಾಗುತ್ತಿದೆ ಎಂಬ ದೂರುಗಳಿದ್ದು, ಇಂತಹ ಸಮಸ್ಯೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಬಸ್‌ಗಳ ಸ್ವಚ್ಛತೆ, ನಾಮಫಲಕ ಸರಿಪಡಿಸಲು ಸೂಚನೆ: ಸಭೆಯಲ್ಲಿ ಸಾರಿಗೆ ವ್ಯವಸ್ಥೆಯ ಬಗ್ಗೆಯೂ ಚರ್ಚೆ ನಡೆಯಿತು. ಬಸ್‌ಗಳಲ್ಲಿ ಸ್ವಚ್ಛತೆ ಇಲ್ಲದಿರುವುದು ಹಾಗೂ ಮುಂಭಾಗ ಮತ್ತು ಹಿಂಭಾಗದಲ್ಲಿ ಬೇರೆ ಬೇರೆ ನಾಮಫಲಕಗಳಿರುವುದರಿಂದ ಪ್ರಯಾಣಿಕರಿಗೆ ಗೊಂದಲ ಉಂಟಾಗುತ್ತಿದೆ. ಈ ಸಮಸ್ಯೆಗಳನ್ನು ತಕ್ಷಣ ಸರಿಪಡಿಸುವಂತೆ ಸಮಿತಿ ಸದಸ್ಯರಾದ ಮೆಹಬೂಬ ಪಾಶಾ ತಿಳಿಸಿದರು.
ಕೊಪ್ಪಳ ವಿಭಾಗದ ಬಸ್‌ಗಳು ಟಣಕನಕಲ್ ಮೊರಾರ್ಜಿ ಶಾಲೆಯ ಬಳಿ ನಿಲುಗಡೆ ಮಾಡುವಂತೆ ಸೂಚಿಸಲಾಯಿತು. ಸದಸ್ಯ ಲಕ್ಷ್ಮಣ ಡೊಳ್ಳಿನ ಮಾತನಾಡಿ, ಜಿಲ್ಲಾಸ್ಪತ್ರೆ ಸ್ಥಳಾಂತರಗೊಂಡಿರುವ ಹಿನ್ನೆಲೆಯಲ್ಲಿ ಕೊಪ್ಪಳ ಡಿಪೋಗೆ ಸೇರಿದ ಬಸ್‌ಗಳು ಬೈಪಾಸ್ ಮೂಲಕ ತೆರಳದೆ ಜಿಲ್ಲಾಸ್ಪತ್ರೆ ಮುಂಭಾಗ ನಿಲುಗಡೆ ಮಾಡಿ, ಗಿಣಿಗೇರಾ ಮಾರ್ಗವಾಗಿ ಗಂಗಾವತಿಗೆ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಯೋಜನೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪುತ್ತಿದ್ದು, ಯುವನಿಧಿ ಯೋಜನೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನವಾಗುತ್ತಿಲ್ಲ ಎಂದು ಸಮಿತಿ ಸದಸ್ಯರಾದ ಜ್ಯೋತಿ ಗೊಂಡಬಾಳ ಅವರು ಹೇಳಿದರು.
ಯುವನಿಧಿ ಕುರಿತು ಗ್ರಾಮವಾರು ಹಾಗೂ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿರುವ ಬಗ್ಗೆ ಮಾಹಿತಿ ಕೇಳಿದಾಗ, ಗಂಗಾವತಿ ಮತ್ತು ಕುಷ್ಟಗಿ ಪಟ್ಟಣಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕೊಪ್ಪಳದಲ್ಲಿ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾದ ಕೂಡಲೇ ಎಲ್ಲ ಸಮಿತಿ ಸದಸ್ಯರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಅನುಷ್ಠಾನ ಸಮಿತಿ ಸದಸ್ಯರಾದ ದೇವರಾಜ ನಡುವಲಮನಿ, ಸವಿತಾ ಗೊರಂಟ್ಲಿ, ಪರಶುರಾಮ ಕೊರವರ, ಮೆಹಬೂಬ ಪಾಶಾ, ಜ್ಯೋತಿ ಗೊಂಡಬಾಳ, ಲಕ್ಷ್ಮಣ ಡೊಳ್ಳಿನ, ಅನ್ನದಾನಸ್ವಾಮಿ, ಆನಂದ ಹಿರೇಕಾಸನಕಂಡಿ, ಅನ್ವರ ಹುಸೇನ ಗಡಾದ, ಪಂಚ ಗ್ಯಾರಂಟಿ ಯೋಜನೆಗಳ ಇಲಾಖಾಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.
Total Views: 0
ಜಾಹೀರಾತು
Share This Article