ತಾಯಿ-ಶಿಶು ಆರೋಗ್ಯ ರಕ್ಷಣೆಗೆ ವಿಶೇಷ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್

H.Mallikarjun
H.Mallikarjun - Kalyanasiri
2 Min Read

Give special priority to maternal and child healthcare: Deputy Commissioner Dr. Suresh Itnal

ತಾಯಿ-ಶಿಶು ಆರೋಗ್ಯ ರಕ್ಷಣೆಗೆ ವಿಶೇಷ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್

ಜಾಹೀರಾತು


ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಹಾಗೂ ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ವಿಶೇಷ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ್ ಅವರು ವೈದ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
 ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳವಾರ (ಆ. 25ರಂದು) ಹಮ್ಮಿಕೊಳ್ಳಲಾಗಿದ್ದ ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆ ಕುರಿತಾತ ‘ಜಿಲ್ಲಾ ಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಜಿಲ್ಲೆಯಲ್ಲಿ ತಾಯಿ ಮರಣ ಪ್ರಮಾಣ ಮತ್ತು ತೀವ್ರ ರಕ್ತಹೀನತೆಯನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಗರ್ಭಿಣಿಯರ ರಕ್ತದೊತ್ತಡ ಮತ್ತು ರಕ್ತಹೀನತೆ ಸಮಸ್ಯೆಗಳನ್ನು ಆಯಾ ಆರೋಗ್ಯ ಕೇಂದ್ರಗಳ ಮೂಲಕ ಪ್ರತಿ ತಿಂಗಳು ಪರೀಕ್ಷಿಸಿ, ಸೂಕ್ತ ಚಿಕಿತ್ಸೆ ಕೊಡಿಸಬೇಕು. ಗರ್ಭಿಣಿಯ ಆರೋಗ್ಯ ವಿವರವಿರುವ `ತಾಯಿ ಕಾರ್ಡ್’ ಅನ್ನು ಕಡ್ಡಾಯವಾಗಿ ನವೀಕರಿಸಬೇಕು. ಹೆರಿಗೆ ಸಂದರ್ಭದಲ್ಲಿ ಫಿಜಿಸಿಯನ್ ಹಾಜರಿರಬೇಕು. ಕುಟುಂಬಸ್ಥರು ಗರ್ಭಿಣಿಯ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಮುಚ್ಚಿಡದೆ ವೈದ್ಯರಿಗೆ ತಿಳಿಸಬೇಕು. ಈ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಜಾಗೃತಿ ಮೂಡಿಸಬೇಕು. ಆರೋಗ್ಯಾಧಿಕಾರಿಗಳು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಲ್ಲಿನ ಚಿಕಿತ್ಸೆಗಳ ಬಗ್ಗೆ ಪರಿಶೀಲಿಸಬೇಕೆಂದರು.
 ಕಡಿಮೆ ತೂಕದ ಮಕ್ಕಳನ್ನು ಆರಂಭದಲ್ಲೇ ಗುರುತಿಸಿ ಮೇಲ್ದರ್ಜೆ ಆಸ್ಪತ್ರೆಗಳಿಗೆ ದಾಖಲಿಸಲು ಆಶಾ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿ ನೀಡಬೇಕು. ಶಿಶು ಜನನದ ನಂತರ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ, ಮನೆಮದ್ದು ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ನಿಗದಿತ ಲಸಿಕೆ ಹಾಗೂ ಚುಚ್ಚುಮದ್ದುಗಳನ್ನು ತಪ್ಪದೇ ಹಾಕಿಸಿ ತಾಯಿ ಕಾರ್ಡ್ನಲ್ಲಿ ದಾಖಲಿಸಬೇಕು. ಮಕ್ಕಳಿಗೆ ಲಸೀಕಾಕರಣ, ನವಜಾತ ಶಿಶುಗಳ ಆರೈಕೆ, ಗರ್ಭೀಣಿಯರ ಆರೈಕೆ, ಮನೆಯಲ್ಲಿ ಶುಚಿತ್ವ, ಮಕ್ಕಳ ಪಾಲನೆ ಮತ್ತು ಪೋಷಣೆ ಸೇರಿದಂತೆ ತಾಯಿ ಮತ್ತು ಮಕ್ಕಳ ಆರೋಗ್ಯ ಹಿನ್ನೆಲೆಯ ಎಲ್ಲ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
 ಸಭೆಯಲ್ಲಿ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಸವಡಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ. ಪ್ರಕಾಶ ವಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರನಾಥ ಎಂ.ಎಚ್., ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಪ್ರಕಾಶ ಎಚ್., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗೋನಾಳ ಕುಮಾರಸ್ವಾಮಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಪರ್ವತಗೌಡ ಹಿರೇಗೌಡ್ರ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ತಾಲ್ಲೂಕುಗಳ ಆರೋಗ್ಯಾಧಿಕಾರಿಗಳು, ಕೊಪ್ಪಳ ಕಿಮ್ಸ್ ಸ್ತ್ರೀ ರೋಗ ವಿಭಾಗದ ಮತ್ತು ಮಕ್ಕಳ ವಿಭಾಗದ ತಜ್ಞ ವೈದ್ಯರು, ವಿವಿಧ ಆರೋಗ್ಯ ಸಂಸ್ಥೆಗಳ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article