ಹಾವು ಕಡಿತ ಸಾವು ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಧಿಕಾರಿಗಳ ಸೂಚನೆ

H.Mallikarjun
H.Mallikarjun - Kalyanasiri
3 Min Read

Deputy Commissioner directs strict measures to prevent deaths from snakebites

ಹಾವು ಕಡಿತ ಸಾವು ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಧಿಕಾರಿಗಳ ಸೂಚನೆ

ಜಾಹೀರಾತು


ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಹಾವು ಕಡಿತದಿಂದ ಸಂಭವಿಸುತ್ತಿರುವ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ಹಾವು ಕಡಿತ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಕಾರ್ಯಕ್ರಮದ (ಎನ್.ಎಸ್.ಇ.ಪಿ) ಅಡಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಆ. 25ರಂದು) ಹಾವು ಕಡಿತದಿಂದ ಸಂಭವಿಸಿದ ಮರಣಗಳ ಆಡಿಟ್ ಸಭೆ ನಡೆಯಿತು.
 ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ್ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪ್ರಸ್ತುತ ಮಳೆಗಾಲವಾಗಿರುವುದರಿಂದ ಹಾಗೂ ರೈತರು ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಂಡಿರುತ್ತಾರೆ. ಈ ಅವಧಿಯಲ್ಲಿ ಹಾವುಗಳ ಓಡಾಟವು ಸಹ ಹೆಚ್ಚಿರುತ್ತದೆ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಾವು ಕಡಿತದ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು. ಇದಲ್ಲದೇ ರಾತ್ರಿ ವೇಳೆ ಹೊರಗೆ ಹೋಗುವಾಗ ಟಾರ್ಚ್ ಬಳಸುವುದು, ಕೃಷಿ ಜಮೀನು ಮತ್ತು ಪೊದೆ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಸಂಚರಿಸುವುದು ಹಾಗೂ ಸೂಕ್ತ ಪಾದರಕ್ಷೆ ಮತ್ತು ರಕ್ಷಣಾತ್ಮಕ ಉಡುಪುಗಳನ್ನು ಬಳಸುವಂತೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕೆಂದರು.
 ಹಾವು ಕಡಿತವನ್ನು ತುರ್ತು ವೈದ್ಯಕೀಯ ಪರಿಸ್ಥಿತಿಯೆಂದು ಪರಿಗಣಿಸಿ, ಸಕಾಲದಲ್ಲಿ ಚಿಕಿತ್ಸೆ ನೀಡಬೇಕು. ಅಗತ್ಯವಿದ್ದಲ್ಲಿ ರೋಗಿಯನ್ನು ಮೇಲ್ದರ್ಜೆಯ ಆಸ್ಪತ್ರೆಗೆ ತಕ್ಷಣ ರೆಫರ್ ಮಾಡುವ ಮೂಲಕ ಸೂಕ್ತ ಚಿಕಿತ್ಸೆ ಒದಗಿಸಬೇಕು. ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳ ವೈದ್ಯಾಧಿಕಾರಿಗಳು ತಮ್ಮ ಸಂಸ್ಥೆಗಳಲ್ಲಿ ಆ್ಯಂಟಿ-ಸ್ನೇಕ್ ವೆನಮ್ (ಎ.ಎಸ್.ವಿ) ಸಮರ್ಪಕ ಪ್ರಮಾಣದಲ್ಲಿ ದಾಸ್ತಾನು ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಹಾವು ಕಡಿತದ ಪ್ರಕರಣ ಆರೋಗ್ಯ ಸಂಸ್ಥೆಗೆ ಬಂದ ಕೂಡಲೇ ರೋಗಿಯ ವಿಷದ ಪರಿಣಾಮ, ಕ್ಲಿನಿಕಲ್ ಲಕ್ಷಣಗಳು ಹಾಗೂ ಆರೋಗ್ಯ ಸ್ಥಿತಿಯನ್ನು ಮೌಲ್ಯಮಾಪನ ಮಾಡಿ, ಜಾರಿಯಲ್ಲಿರುವ ಚಿಕಿತ್ಸಾ ಮಾರ್ಗಸೂಚಿಗಳಂತೆ ಅಗತ್ಯವಿದ್ದಲ್ಲಿ ಯಾವುದೇ ವಿಳಂಬವಿಲ್ಲದೆ ಸೂಕ್ತ ಚಿಕಿತ್ಸೆಯನ್ನು ಆರಂಭಿಸಬೇಕು. ಆ್ಯಂಟಿ-ಸ್ನೇಕ್ ವೆನಮ್‌ನ ಸಮರ್ಪಕ ಲಭ್ಯತೆ, ಸರಿಯಾದ ಸಂಗ್ರಹಣೆ ಹಾಗೂ ಅಗತ್ಯವಿದ್ದಾಗ ತಕ್ಷಣ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಪ್ರತಿಯೊಂದು ಆರೋಗ್ಯ ಸಂಸ್ಥೆಯಲ್ಲೂ ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು. ಹಾವು ಕಡಿತ ಸಾವು ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
 ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ ಅವರು ಮಾತನಾಡಿ, ಹಾವು ಕಡಿತ ಪ್ರಕರಣಗಳು ಹಾಗೂ ಹಾವು ಕಡಿತದಿಂದ ಸಂಭವಿಸುವ ಸಾವುಗಳನ್ನು ಅಧಿಸೂಚಿತ ರೋಗವೆಂದು ಘೋಷಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ಕರ್ನಾಟಕ ಸರ್ಕಾರವು 2024ರ ಫೆಬ್ರವರಿ 12ರಂದು ಹೊರಡಿಸಿದ ಅಧಿಕೃತ ಅಧಿಸೂಚನೆಯ ಮೂಲಕ ಹಾವು ಕಡಿತ ಪ್ರಕರಣಗಳು ಮತ್ತು ಮರಣಗಳನ್ನು ಅಧಿಸೂಚಿತ ರೋಗಗಳ ಪಟ್ಟಿಗೆ ಸೇರಿಸಿದೆ ಎಂದು ಮಾಹಿತಿ ನೀಡಿದರು.
*ಪ್ರಕರಣಗಳ ವಿಶ್ಲೇಷಣೆ:* ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಇದುವರೆಗೆ ಹಾವು ಕಡಿತದಿಂದ 10 ಮಂದಿ ಮೃತಪಟ್ಟಿದ್ದು, ಸಭೆಯಲ್ಲಿ ಈ ಪೈಕಿ 5 ಮರಣ ಪ್ರಕರಣಗಳನ್ನು ವಿವರವಾಗಿ ಪರಿಶೀಲಿಸಲಾಯಿತು. ಪ್ರತಿ ಪ್ರಕರಣದಲ್ಲಿ ಹಾವು ಕಡಿದ ಸಮಯ, ನಂತರ ಕಂಡುಬಂದ ಲಕ್ಷಣಗಳು, ರೋಗಿಯ ಆರೋಗ್ಯ ಸ್ಥಿತಿ, ಆಸ್ಪತ್ರೆಗೆ ತೆರಳಲು ತೆಗೆದುಕೊಂಡ ಸಮಯ, ಚಿಕಿತ್ಸೆಯಲ್ಲಾದ ವಿಳಂಬ, ರೆಫರಲ್ ಪ್ರಕ್ರಿಯೆ, ಮೇಲ್ದರ್ಜೆಯ ಆಸ್ಪತ್ರೆಗೆ ರವಾನಿಸಿದ ಸಮಯ ಹಾಗೂ ನೀಡಲಾದ ಚಿಕಿತ್ಸಾ ಕ್ರಮಗಳನ್ನು ಪ್ರಕರಣವಾರು ವಿಶ್ಲೇಷಿಸಲಾಯಿತು.
 ಸಭೆಯಲ್ಲಿ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಸವಡಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ. ಪ್ರಕಾಶ ವಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರನಾಥ ಎಂ.ಎಚ್., ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಪ್ರಕಾಶ ಎಚ್., ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗೋನಾಳ ಕುಮಾರಸ್ವಾಮಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಪರ್ವತಗೌಡ ಹಿರೇಗೌಡ್ರ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ತಾಲ್ಲೂಕುಗಳ ಆರೋಗ್ಯಾಧಿಕಾರಿಗಳು, ಕೊಪ್ಪಳ ಕಿಮ್ಸ್ ತಜ್ಞ ವೈದ್ಯರು, ವಿವಿಧ ಆರೋಗ್ಯ ಸಂಸ್ಥೆಗಳ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article