ಶ್ರೀ ಲಕ್ಕವಾ ದೇವಿ ದೇವಸ್ಥಾನದ ಆವರಣ ಸ್ವಚ್ಛತೆಗೆ ಆಗ್ರಹ: ಕಟಗೇರಿ ಗ್ರಾಮ ಪಂಚಾಯತಿಗೆ ಮನವಿ

H.Mallikarjun
H.Mallikarjun - Kalyanasiri
2 Min Read
Demand for cleanliness of Sri Lakkawa Devi temple premises: Appeal to Katageri Gram Panchayat

ಶ್ರೀ ಲಕ್ಕವಾ ದೇವಿ ದೇವಸ್ಥಾನದ ಆವರಣ ಸ್ವಚ್ಛತೆಗೆ ಆಗ್ರಹ: ಕಟಗೇರಿ ಗ್ರಾಮ ಪಂಚಾಯತಿಗೆ ಮನವಿ

ಜಾಹೀರಾತು


ಅಥಣಿ:ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಲಕ್ಕವಾ ದೇವಿ ದೇವಸ್ಥಾನದ ಆವರಣವನ್ನು ತಕ್ಷಣವೇ ಸ್ವಚ್ಛಗೊಳಿಸುವಂತೆ ಹಾಗೂ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ, ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಕಟಗೇರಿ ಗ್ರಾಮ ಪಂಚಾಯತಿಗೆ ಮನವಿ ಪತ್ರ ಸಲ್ಲಿಸಲಾಯಿತು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ (PDO) ಅನುಪಸ್ಥಿತಿಯಲ್ಲಿ ಪಂಚಾಯತಿ ಕಾರ್ಯದರ್ಶಿಗಳು ಈ ಮನವಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಪ್ರವೀಣ ನಾಯಿಕ ಅವರು ಮಾತನಾಡಿ, “ಕಟಗೇರಿಯ ಶ್ರೀ ಲಕ್ಕವಾ ದೇವಿ ದೇವಸ್ಥಾನಕ್ಕೆ ಪ್ರತಿದಿನ ನೂರಾರು ಭಕ್ತಾದಿಗಳು ಆಗಮಿಸುತ್ತಾರೆ. ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ಸ್ವಚ್ಛತೆ ಇಲ್ಲದಿರುವುದು ವಿಷಾದನೀಯ. ಭಕ್ತರಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ಯಾವುದೇ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗದಂತೆ ಹಾಗೂ ಧಾರ್ಮಿಕ ಸ್ಥಳದ ಪವಿತ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪಂಚಾಯತಿಯು ತಕ್ಷಣವೇ ಸೂಕ್ತ ಸ್ವಚ್ಛತಾ ಕ್ರಮಗಳನ್ನು ಕೈಗೊಳ್ಳಬೇಕು. ದೇವಸ್ಥಾನದ ಸುತ್ತಮುತ್ತ ಕಸ ವಿಲೇವಾರಿಗೆ ಕಾಯಂ ವ್ಯವಸ್ಥೆ ಕಲ್ಪಿಸಬೇಕು,” ಎಂದು ಆಗ್ರಹಿಸಿದರು.
ಪ್ರತ್ಯೇಕ ಶೌಚಾಲಯ ನಿರ್ಮಾಣಕ್ಕೆ ಬಿಗಿ ಒತ್ತಾಯ:
“ಗ್ರಾಮದ ಅಭಿವೃದ್ಧಿ, ಶಾಲೆ ಹಾಗೂ ದೇವಸ್ಥಾನಗಳ ಸಲುವಾಗಿ ಪಂಚಾಯತಿಗೆ ಸಾಕಷ್ಟು ಸರ್ಕಾರಿ ಅನುದಾನ ಲಭ್ಯವಿದೆ. ಆದರೂ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕನಿಷ್ಠ ಸೌಕರ್ಯಗಳಿಲ್ಲ. ಹೀಗಾಗಿ ಪಂಚಾಯತಿ ಅನುದಾನವನ್ನು ಬಳಸಿಕೊಂಡು ಇಲ್ಲಿಗೆ ಬರುವ ಪುರುಷರು, ಮಹಿಳೆಯರು ಹಾಗೂ ವೃದ್ಧರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಮೂತ್ರಾಲಯ ಮತ್ತು ಶೌಚಾಲಯ ಸೌಲಭ್ಯವನ್ನು ತುರ್ತಾಗಿ ನಿರ್ಮಿಸಿಕೊಡಬೇಕು,” ಎಂದು ಮುಖಂಡರು ಒತ್ತಾಯಿಸಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಸಲ್ಲಿಕೆಯಾದ ಈ ಮನವಿಯನ್ನು ಸ್ವೀಕರಿಸಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ವಿಷಯದ ಗಂಭೀರತೆಯನ್ನು ಪರಿಗಣಿಸಿ ಶೀಘ್ರದಲ್ಲೇ ಸೂಕ್ತ ಹಾಗೂ ಸಕಾರಾತ್ಮಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖಂಡರಾದ ಶರಣಪ್ಪಾ ಶಿಂಧೆ, ಅನಿಲ ಭಾಮನೆ, ಮಹೇಶ ಶರ್ಮಾ, ಬಸವರಾಜ ತಂಗಡಿ ಸೇರಿದಂತೆ ಸ್ಥಳೀಯ ಸಾರ್ವಜನಿಕರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ: ಮಹೇಶ್ ಶರ್ಮಾ,

Total Views: 0
Share This Article