Minister Dr. Yathindra Siddaramaiah appeals to the Union Minister for the release of ₹887 crore in 15th Finance Commission grants to Urban Local Bodies in Karnataka
ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗದ ₹887 ಕೋಟಿ ಅನುದಾನ ಬಿಡುಗಡೆಗೆ ಕೇಂದ್ರ ಸಚಿವರಿಗೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮನವಿ
ಬೆಂಗಳೂರು:ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಗುರುವಾರ ಬೆಂಗಳೂರಿಗೆ ಆಗಮಿಸಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ತೋಖನ್ ಸಾಹು ಅವರನ್ನು ಕುಮಾರಕೃಪ ಅತಿಥಿಗೃದಲ್ಲಿ ಭೇಟಿ ಮಾಡಿ,
ಕರ್ನಾಟಕದ ಅರ್ಹ ನಗರಾಭಿವೃದ್ಧಿ ಸಂಸ್ಥೆಗಳಿಗೆ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ) 2025-26ನೇ ಹಣಕಾಸು ವರ್ಷಕ್ಕೆ 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿರುವ ₹887 ಕೋಟಿ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
15ನೇ ಹಣಕಾಸು ಆಯೋಗದ ನಿಯಮಾವಳಿಗಳ ಪ್ರಕಾರ ಕೇಂದ್ರ ಸರ್ಕಾರ ವಿಧಿಸಿದ್ದ ಎಲ್ಲಾ ಷರತ್ತುಗಳನ್ನು ಕರ್ನಾಟಕ ಸರ್ಕಾರ ಪೂರೈಸಿದೆ. ಅಲ್ಲದೆ, ಸಚಿವಾಲಯವು ಕೋರಿದ್ದ ಎಲ್ಲಾ ಅಗತ್ಯ ದಾಖಲೆಗಳನ್ನು ಈಗಾಗಲೇ ಸಲ್ಲಿಸಲಾಗಿದೆ.
ರಾಜ್ಯ ಸರ್ಕಾರವು ಎಲ್ಲಾ ನಿಯಮಗಳನ್ನು ಪಾಲಿಸಿದ್ದರೂ, ಕೇಂದ್ರ ಸರ್ಕಾರದಿಂದ ಈವರೆಗೂ ಯಾವುದೇ ರೀತಿಯ ಅನುದಾನದ ಹಣ ಬಿಡುಗಡೆಯಾಗಿಲ್ಲ
ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ.ನಿಗದಿತ ಸಮಯದಲ್ಲಿ ಹಣ ಬಿಡುಗಡೆಯಾಗದಿದ್ದರೆ ಸ್ಥಳೀಯ ಸಂಸ್ಥೆಗಳ ಮೂಲಸೌಕರ್ಯ ಯೋಜನೆಗಳಿಗೆ ತೊಂದರೆಯಾಗಲಿದೆ.
ಈ ಅನುದಾನವು ಬಿಡುಗಡೆಯಾದರೆ ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರು ಸರಬರಾಜು,ನೈರ್ಮಲ್ಯೀಕರಣ ಮತ್ತು ಸ್ವಚ್ಛತೆ, ,ಘನತ್ಯಾಜ್ಯ ನಿರ್ವಹಣೆ, ಇತರೆ ಮೂಲಭೂತ ಕಾರ್ಯಗಳು ಹಾಗೂ ತುರ್ತು ನಾಗರಿಕ ಸೌಲಭ್ಯಗಳ ಅನುಷ್ಠಾನಗೊಳಿಸಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಕರ್ನಾಟಕದ ನಗರ ಪ್ರದೇಶಗಳ ಸುಸ್ಥಿರ ಅಭಿವೃದ್ಧಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಸಚಿವಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಬಾಕಿ ಇರುವ ₹887 ಕೋಟಿ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.
ಪೌರಾಡಳಿತ ನಿರ್ದೇಶಕರಾದ ಪಿ.ಎನ್.ರವೀಂದ್ರ ಅವರು ಉಪಸ್ಥಿತರಿದ್ದರು.


