ಅಥಣಿಯ ಬೆನ್ನಿಪೇಟೆಯಲ್ಲಿ ಅರ್ಧಕ್ಕೆ ನಿಂತ ಶೌಚಾಲಯ ಕಾಮಗಾರಿ; ಮಹಿಳೆಯರ ಪರದಾಟ, ಸಾರ್ವಜನಿಕರ ಆಕ್ರೋಶ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು




Toilet construction work stalled in Bennipete, Athani; Women protest, public outrage

ಅಥಣಿಯ ಬೆನ್ನಿಪೇಟೆಯಲ್ಲಿ ಅರ್ಧಕ್ಕೆ ನಿಂತ ಶೌಚಾಲಯ ಕಾಮಗಾರಿ; ಮಹಿಳೆಯರ ಪರದಾಟ, ಸಾರ್ವಜನಿಕರ ಆಕ್ರೋಶ

ಜಾಹೀರಾತು


ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪ್ರಮುಖ ವಾಣಿಜ್ಯ ಪ್ರದೇಶವಾದ ಬೆನ್ನಿಪೇಟೆಯಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇಲ್ಲದೆ ಜನರು ಹೈರಾಣಾಗಿದ್ದಾರೆ. ಇಲ್ಲಿನ ಶಿವಣಗಿ ಕಾಂಪ್ಲೆಕ್ಸ್ ಹಿಂಭಾಗ ಹಾಗೂ ಜಿ-ಮಾರ್ಟ್ ಎದುರಿಗೆ ನಿರ್ಮಾಣವಾಗುತ್ತಿದ್ದ ಶೌಚಾಲಯ ಕಾಮಗಾರಿ ಅರ್ಧಕ್ಕೆ ನಿಂತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಗಬ್ಬೆದ್ದು ನಾರುತ್ತಿರುವ ಪರಿಸರ: ಸಾಂಕ್ರಾಮಿಕ ರೋಗದ ಭೀತಿ
ಶೌಚಾಲಯ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಜನರು ಅನಿವಾರ್ಯವಾಗಿ ಅದೇ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದ್ದು, ವ್ಯಾಪಾರಸ್ಥರು ಮತ್ತು ದಾರಿಹೋಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಸಮೀಪಿಸುತ್ತಿರುವುದರಿಂದ ಈ ಪ್ರದೇಶದಲ್ಲಿ ಮಲೇರಿಯಾ, ಡೆಂಗ್ಯೂ ಅಂತಹ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ.
ಮಹಿಳೆಯರ ಘನತೆಗೆ ಧಕ್ಕೆ


ಅತಿ ಹೆಚ್ಚು ಜನರು ಸಂಚರಿಸುವ ಈ ಭಾಗದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸರ್ಕಾರವು ಮಹಿಳೆಯರಿಗಾಗಿ ಹತ್ತಾರು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದರೂ, ಕನಿಷ್ಠ ಶೌಚಾಲಯದಂತಹ ಮೂಲಸೌಕರ್ಯ ಒದಗಿಸದಿರುವುದು “ಮಹಿಳಾ ಸುರಕ್ಷತೆ ಮತ್ತು ಘನತೆ”ಯ ಪ್ರಶ್ನೆಯಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಕುರುಡುತನಕ್ಕೆ ಹೋರಾಟಗಾರರ ಆಕ್ರೋಶ
ಈ ಕುರಿತು ಮಾತನಾಡಿದ ಸಾಮಾಜಿಕ ಹೋರಾಟಗಾರ ಪ್ರವೀಣ್ ನಾಯಕ್, “ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸ್ವಚ್ಛ ಭಾರತದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅನುದಾನ ಬರುತ್ತಿದ್ದರೂ ಇಲ್ಲಿ ಉಪಯೋಗಕ್ಕೆ ಬರುತ್ತಿಲ್ಲ. ಮಾಧ್ಯಮಗಳಲ್ಲಿ ಈ ಹಿಂದೆ ವರದಿಯಾದರೂ ಅಧಿಕಾರಿಗಳು ಕುರುಡರಂತೆ ವರ್ತಿಸುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಆಶ್ವಾಸನೆ ನೀಡುವ ಜನಪ್ರತಿನಿಧಿಗಳು ಗೆದ್ದ ನಂತರ ಇತ್ತ ಮುಖ ಮಾಡುತ್ತಿಲ್ಲ,” ಎಂದು ಕಿಡಿಕಾರಿದ್ದಾರೆ.
ಸ್ಥಳೀಯರ ಆಗ್ರಹವೇನು?
ಅರ್ಧಕ್ಕೆ ನಿಂತಿರುವ ಶೌಚಾಲಯ ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಬೇಕು.
ಮಹಿಳೆಯರಿಗೆ ಸುಸಜ್ಜಿತ ಮತ್ತು ಸ್ವಚ್ಛವಾದ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು.
ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಲು ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಸಂಬಂಧಪಟ್ಟ ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.
ತಕ್ಷಣವೇ ಈ ಸಮಸ್ಯೆ ಬಗೆಹರಿಯದಿದ್ದರೆ ಮುಂಬರುವ ದಿನಗಳಲ್ಲಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಒಗೂಡಿ ಪುರಸಭೆಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ವರದಿ: ಮಹೇಶ್ ಶರ್ಮಾ

Total Views: 0
Share This Article