ಮಾತಾಜಿಯವರ ಹೋರಾಟದ ದಾರಿ ಬಸವತತ್ವ ಸಂಘಟಕರಿಗೆ ಮಾದರಿ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

ಮಾತಾಜಿಯವರ ಹೋರಾಟದ ದಾರಿ ಬಸವತತ್ವ ಸಂಘಟಕರಿಗೆ ಮಾದರಿ

ಜಾಹೀರಾತು
Mataji's path of struggle is a model for Basavatva organizers




ಬಸವಕಲ್ಯಾಣ:ಇತ್ತೀಚಿನ ಲಿಂಗಾಯತ ಮಠಾಧೀಶರು ಮತ್ತು ಬಸವ ತತ್ವ ಪ್ರಚಾರಕ ಸಂಘಟನೆಯವರು; ತಮ್ಮ ತಮ್ಮ ಶ್ರೀ ಮಠದ ಉತ್ಸವ ಕಾರ್ಯಗಳಲ್ಲಿ ಎಷ್ಟೊಂದು ಉತ್ಸಾಹ ತೋರಿಸಿ ಅದರ ಯಶಸ್ವಿಗಾಗಿ ದುಡಿಯುವರೋ ಅಷ್ಟೊಂದು ಉತ್ಸಾಹ ಬಸವ ತತ್ವಕ್ಕೆ ಚ್ಯುತಿ ಬಂದಾಗ ತೋರಿಸದಿರುವುದು ಬೇಸರದ ಸಂಗತಿ. ಪರಮಪೂಜ್ಯ ಮಾತೆ ಮಹಾದೇವಿಯವರು ತಮ್ಮ ಐದು ದಶಕದ ಇತಿಹಾಸದಲ್ಲಿ ಬಸವತತ್ವದ ಪ್ರಚಾರ ಮತ್ತು ಪ್ರಸಾರದ ಕಾರ್ಯವನ್ನು ವೀರ ಗಣಾಚಾರಿಯಾಗಿ ಅತ್ಯಂತ ಪ್ರಾಮಾಣಿಕವಾಗಿ ಕೈಗೊಂಡರು. ಆಗ ಒಬ್ಬನೇ ಒಬ್ಬ ವೀರಶೈವ ಸ್ವಾಮಿಯು ಅಥವಾ ಸನಾತನ ಧರ್ಮದ ಕ್ರಿಮಿಯು ಲಿಂಗಾಯತ ಧರ್ಮದ ಸಿದ್ಧಾಂತವನ್ನು ಅಲ್ಲಗಳೆಯಲು ಮುಂದೆ ಬರಲು ಭಯ ಪಡುತ್ತಿದ್ದರು. ಅಷ್ಟೊಂದು ಹೋರಾಟದ ಕೆಚ್ಚನ್ನು ಮಾತಾಜಿ ಮೈಗೂಡಿಸಿಕೊಂಡಿದ್ದರು. ಮಾತಾಜಿಯವರು ಅಧ್ಯಯನಶೀಲರು, ಸಂಶೋಧಕರು, ಸಾಹಿತಿಗಳು, ಬಸವ ತತ್ವವನ್ನು ಉಸಿರಾಗಿಸಿಕೊಂಡವರು. ಎಂತದ್ಧೇ ಪ್ರಸಂಗದಲ್ಲೂ ಅವಕಾಶವಾದ ರಾಜಕಾರಣ ಮಾಡಿದವರಲ್ಲ, ಮಠದ ಕಟ್ಟಡ ಕಾರ್ಯಗಳಿಗಾಗಿ ರಾಜಕೀಯದವರ ಬಾಗಿಲು ತಟ್ಟುತ್ತಿರಲಿಲ್ಲ. ಒಬ್ಬ ಆದರ್ಶ ಬಸವಧರ್ಮ ಪ್ರಚಾರಕರಾಗಿದ್ದರು ಮತ್ತು ಧರ್ಮದ ವಿಷಯದಲ್ಲಿ ಅಷ್ಟೇ ಶ್ರದ್ಧೆಯನ್ನು ಹೊಂದಿದ್ದರು. ಗುರು ಬಸವಣ್ಣನವರು ಹೇಳಿದಂತೆ "ಆರು ಮುನಿದು ನಮ್ಮನೇನ ಮಾಡುವರು ಊರು ಮುನಿದು ನಮ್ಮನೆಂತು ಮಾಡುವರು ನಮ್ಮ ಕುನ್ನಿಗೆ ಕೂಸ ಕೊಡಬೇಡ, ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ. ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ, ನಮಗೆ ನಮ್ಮ ಕೂಡಲಸಂಗನುಳ್ಳನ್ನಕ್ಕ." ಇಂತಹ ಧೈರ್ಯವನ್ನು ಅಳವಡಿಸಿಕೊಂಡಿದ್ದರು. ಒಬ್ಬ ಮಹಿಳೆಯಾಗಿ ಅವರು ಸಾಧಿಸಿದ ಸಾಧನೆ, ಅವರು ಅನುಭವಿಸಿದ ಅವಮಾನ ಭವಿಷ್ಯ ಯಾರಿಗೂ ಸಾಧ್ಯವಾಗುವುದಿಲ್ಲ. ಕೀರ್ತಿ ವಾರ್ತೆ, ಬಿರುದು ಸನ್ಮಾನದಲ್ಲಿ ಮುಂದೆ ಬಂದು ತೋರುವ ಉತ್ಸಾಹ ಹೋರಾಟದಲ್ಲಿ ತೋರದಿರುವುದು ಇಂದಿನ ಬಸವ ತತ್ವ ಪ್ರಚಾರಕರ ನಡೆಯಾಗಿದೆ; ಅವರೆತ್ತ ಇವರೆತ್ತ?. ಶೂನ್ಯದಿಂದ ಸಂಸ್ಥೆ ಕಟ್ಟಿ, ತಮ್ಮ ಪ್ರಾಮಾಣಿಕ ಪ್ರಯತ್ನದಿಂದಲೇ ಅದ್ಭುತ ಸಂಘಟನೆಯನ್ನು ಹುಟ್ಟುಹಾಕಿ, ನೂರಾರು ಲಿಂಗಾಯತ ಗ್ರಂಥಗಳನ್ನು ಬರೆದು ಈ ಕಾಲದಲ್ಲಿ ಲಿಂಗಾಯತ ಧರ್ಮದ ಪುನರುತ್ಥಾನಕರೆನಿಸಿದರು. ಯಾವುದೇ ಹೋರಾಟವನ್ನು ಕೈಗೆತ್ತಿಕೊಂಡರೂ(ಅದು ಧರ್ಮದ ಹೋರಾಟವೇ ಇರಲಿ; ಸಮಾಜದ ಹೋರಾಟವೇ ಇರಲಿ) ಅದನ್ನು ಯಶಸ್ವಿಯ ದಡದತ್ತ ಮುಟ್ಟಿಸುವಲ್ಲಿ ಅವರು ತೋರುವ ಧೀಮಂತಿಕೆ ಸಾಮಾನ್ಯವಾದುದಲ್ಲ. ಮಾಧ್ಯಮದವರು ಯಾವುದೇ ದಿಕ್ಕಿನಿಂದ ಕಠಿಣ ಪ್ರಶ್ನೆಗಳನ್ನು ಕೇಳಿದರೂ ಎದೆಗುಂದದೇ ಉತ್ತರಿಸಿ ಮಾಧ್ಯಮದ ನಿರೂಪಕರನ್ನೇ ಬೆರಗುಗೊಳಿಸುತ್ತಿದ್ದರು. ಇಂದಿಗೂ ಮಾಧ್ಯಮ ಮಿತ್ರರು ಮಾತಾಜಿಯವರನ್ನು ನೆನೆಯುತ್ತಾರೆ. ಐದು ದಶಕಗಳ ಕಾಲ ವೈದಿಕರು ಲಿಂಗಾಯತ ಧರ್ಮದ ಮೇಲೆ ದಂಡೆತ್ತಿ ಬರುವುದು ಹೋಗಲಿ; ಒಂದೇ ಒಂದು ಶಬ್ದವೂ ಲಿಂಗಾಯತ ಧರ್ಮದ ಕುರಿತು ಮಾತಾಡುತ್ತಿರಲಿಲ್ಲ ಎಂಬುದು ಅಕ್ಷರಶಃ ಸತ್ಯ. ಪಂಚಾಚಾರ್ಯರಿಗೆ ಸವಾಲು ಹಾಕಿ ಸಂವಾದಕ್ಕೆ ಕರೆದರೆ ಏನೋ ಒಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು ಅವರ ಪಾಲಿಗೆ ಅಷ್ಟೊಂದು ಸಿಂಹ ಸ್ವಪ್ನವಾಗಿದ್ದವರು ಮಾತಾಜಿಯವರು. ಮಾತಾಜಿ ಗತಿಸಿದ ಮೇಲೆ ಅವಕಾಶವಾದಿಗಳಾಗಿ ಕೆಲವರು ಒಳಗೊಳಗೆ ವೈದಿಕದವರ ಮತ್ತು ವೀರಶೈವರ ಗುಂಪಿಗೆ ಸೇರಿದ್ದಾರೆ. ಕೆಲವೇ ಕೆಲವು ಬೆರಳೆಣಿಕೆಯಷ್ಟು ಸ್ವಾಮಿಗಳು ಇನ್ನೂ ಗಟ್ಟಿಯಾಗಿ ನಿಂತಿದ್ದಾರೆ ಎಂಬುದು ಆಶದಾಯಕ ಬೆಳವಣಿಗೆ. ಅವರ ಕೈಗಳನ್ನು ಬಲಪಡಿಸಿ ವೈದಿಕ ಸನಾತನಿ ಕನ್ನೇರಿ ಶ್ರೀ ಮತ್ತು ವೀರಶೈವವಾದಿಗಳನ್ನು ಮಟ್ಟಹಾಕಬೇಕಾದ ಅನಿವಾರ್ಯತೆ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ಬಸವ ಸಮಿತಿ, ಬಸವ ಕೇಂದ್ರ, ಭಾರತೀಯ ಬಸವ ಬಳಗ ಹಾಗೂ ಇನ್ನಿತರ ಬಸವಪರ ಸಂಘಟನೆಗಳಿಗೆ ಸೃಷ್ಟಿಯಾಗಿದೆ. ಎಲ್ಲರೂ ಒಂದೇ ವೇದಿಕೆಯಡಿಯಲ್ಲಿ ದೃಢೀಕರಣಗೊಂಡು ಮಾತಾಜಿಯವರ ಹೋರಾಟ ಮಾದರಿಯನ್ನು ಇಟ್ಟುಕೊಂಡು ಹೋರಾಟ ಮಾಡಿದರೆ ಗೆಲವು ಸಾಧ್ಯ. ಭಾಲ್ಕಿ ಶ್ರೀಗಳು ಕನ್ನೇರಿ ಶ್ರೀಗಳನ್ನು ಮಟ್ಟಹಾಕಲು ಮತ್ತು ಬಸವಕಲ್ಯಾಣಕ್ಕೆ ಬರದಂತೆ ತಡೆಯಲು ಅಂತದ್ದೊಂದು ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ. ಅವರ ಈ ಹೋರಾಟಕ್ಕೆ ನಾವು ಒಗ್ಗಟ್ಟಾಗಿ ಕೈ ಜೋಡಿಸೋಣ. ಭಾಲ್ಕಿಯ ಶ್ರೀಗಳು ವೈದಿಕ ಸನಾತನಿಗಳ ವಿರುದ್ಧದ ಹೋರಾಟಕ್ಕೆ ಯಾವುದೇ ಮಾರ್ಗವನ್ನು ಅನುಸರಿಸಿದರೂ ಅವರ ಜೊತೆಗಿದ್ದು ಹೋರಾಟವನ್ನು ಯಶಸ್ವಿಗೊಳಿಸೋಣ. ಪೂಜ್ಯರು ಇಲ್ಲಿಯವರೆಗೂ ಬಸವಧರ್ಮಕ್ಕಾಗಿಯೇ ಜೀವನ ಸವೆದಿದ್ದಾರೆ. ಅವರ ಈ ಇಳಿವಯಸ್ಸಿನ ಹೋರಾಟ ಮುಂದಿನ ಲಿಂಗಾಯತ ಧರ್ಮಿಯರಿಗೆ ದಿಕ್ಸೂಚಿಯಾಗಲಿ. ನಾವು ಈವರೆಗೆ ನಮ್ಮೊಳಗಿನ ವೀರಶೈವರ ಜೊತೆ ಸೆಣಸಾಡಿದ್ದೇವೆ. ಈಗಿನ ಹೋರಾಟ ನೇರ ವೈದಿಕರ ವಿರುದ್ಧವೇ ಆಗಿದೆ. ಆದ್ಧರಿಂದ ಪೂಜ್ಯರ ಈ ಹೋರಾಟ ಯಶಸ್ವಿಯಾಗಲು ನಾವು ಅಹರ್ನಿಶಿ ದುಡಿಯೋಣ. ಹಾಗಾದರೆ ಬನ್ನಿ ಬಸವಣ್ಣನವರನ್ನು ತಾಲಿಬಾನಗಳೆಂದು ಮತ್ತು ಬಸವತತ್ವ ಪ್ರಚಾರಕ ಸ್ವಾಮಿಗಳನ್ನು ಕೀಳುಭಾಷೆ ಬಳಸಿ ನಿಂದಿಸಿದ ಕನ್ನೇರಿ ಶ್ರೀಗಳ ವಿರುದ್ಧ ಹಮ್ಮಿಕೊಂಡ *"ಬಸವಕಲ್ಯಾಣ ಪ್ರವೇಶ ಮಾಡಲು ಕನ್ನೇರಿ ಶ್ರೀಗಳನ್ನು ಬಿಡುವುದಿಲ್ಲ"* ಎಂಬ ಚಳುವಳಿಯಲ್ಲಿ ತಪ್ಪದೇ ಭಾಗವಹಿಸಿ; ಹೋರಾಟ ಯಶಸ್ವಿಗೊಳಿಸಿ.

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ

Total Views: 0
Share This Article