ಬಾಲ್ಯವಿವಾಹ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಕೈಜೋಡಿಸಿ: ಹೇಮಂತಕುಮಾರ

H.Mallikarjun
H.Mallikarjun - Kalyanasiri
5 Min Read
ಜಾಹೀರಾತು
Join hands to build child marriage-free villages: Hemanth Kumar

ಬಾಲ್ಯವಿವಾಹ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಕೈಜೋಡಿಸಿ: ಹೇಮಂತಕುಮಾರ

ಜಾಹೀರಾತು


ಕೊಪ್ಪಳ ಜೂನ್ 05 (ಕರ್ನಾಟಕ ವಾರ್ತೆ): ಗ್ರಾಮ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸಿ, ಬಾಲ್ಯವಿವಾಹದಿಂದ ಮಕ್ಕಳ ರಕ್ಷಣೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ತಡೆಗಟ್ಟುವ ಮೂಲಕ ಬಾಲ್ಯವಿವಾಹ ಮುಕ್ತ ಗ್ರಾಮಗಳನ್ನಾಸಲು ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹೇಮಂತಕುಮಾರ ಅವರು ಹೇಳಿದರು.
 ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಬುಧವಾರ (ಜೂ. 3 ರಂದು) ಕನಕಗಿರಿ ತಾಲ್ಲೂಕಿನ ಬಸರಿಹಾಳ ಗ್ರಾಮದಲ್ಲಿ ಸಾರ್ವಜನಿಕರಿಗೆ ಹಮ್ಮಿಕೊಳ್ಳಲಾಗಿದ್ದ “ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ” ಉದ್ಘಾಟಿಸಿ ಅವರು ಮಾಡಿದವರು.
 ಭಾಗಿಯಾದವರು, ಪ್ರೋತ್ಸಾಹಿಸಿದವರು ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಈ ಕಾಯ್ದೆಯಡಿಲ್ಲಿ ಸಿಲುಕಿ ಜೈಲು ಶಿಕ್ಷೆಗೆ ಗುರಿಯಾಗಿರುವುದು ಸಹ ಜಿಲ್ಲೆಯಲ್ಲಿ ವರದಿಯಾಗಿವೆ. ಜಿಲ್ಲೆಯ ವಸತಿ ನಿಲಯಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು, ಮಕ್ಕಳಿಗೆ ಜನ್ಮ ನೀಡಿದ ಪ್ರಕರಣಗಳು ವರದಿಯಾಗಿವೆ. ಇದು ಸಮುದಾಯಗಳಲ್ಲಿ ಇನ್ನೂ ಸಹ ಜಾಗೃತಿ, ಮಾಹಿತಿಯ ಕೊರತೆಯನ್ನು ತಿಳಿಸುತ್ತಿದೆ. ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಮೀಕ್ಷೆ-5ರಲ್ಲಿ ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾದವರ ಪ್ರಮಾಣ ಜಿಲ್ಲೆಯಲ್ಲಿ 27% ಇದೆ. ಇದು ಕಳೆದ ಸಮೀಕ್ಷೆ-4ರಲ್ಲಿ ವರದಿಯಾದ ಪ್ರಮಾಣ 35.9% ಇದಿದ್ದು, ಇಳಿಕೆಯಾಗಿದ್ದರೂ ಸಹ ರಾಜ್ಯದಲ್ಲಿ ಅತಿ ಹೆಚ್ಚು ಬಾಲ್ಯವಿವಾಹಗಳು ಜರುಗುವ ಜಿಲ್ಲೆಗಳಲ್ಲಿ ಜಿಲ್ಲೆಯು ಒಂದಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
 ಹಲವಾರು ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆಯಾಗಿದ್ದರು ಬಾಲ್ಯವಿವಾಹಗಳು ಜರುಗುತ್ತಿರುವುದು ವಿಪರ್ಯಾಸಕರವಾಗಿದೆ. ಆದ್ದರಿಂದ ಗ್ರಾಮ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸಿ ತನ್ಮೂಲಕ ಮಕ್ಕಳನ್ನು ಬಾಲ್ಯವಿವಾಹದಿಂದ ರಕ್ಷಣೆ, ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯಗಳಿಂದ ಅವರ ರಕ್ಷಣೆ ಹಾಗೂ ಬಾಲ್ಯವಿವಾಹಗಳಿಂದ ಗ್ರಾಮಗಳನ್ನು ಮುಕ್ತಗೊಳಿಸುವುದು ಸರ್ಕಾರ, ಸಮುದಯ ಮತ್ತು ಪಾಲರದ್ದೂ ಸಹ ಜವಾಬ್ದಾರಿಯಾಗಿದ್ದು, ಈ ಕುರಿತು ಮಾಹಿತಿ ನೀಡಲು ಇಂತಹ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಸಾರ್ವಜನಿಕರು ಇದರ ಉಪಯೋಗಪಡೆಯುವ ಮೂಲಕ ಮಕ್ಕಳನ್ನು ರಕ್ಷಣೆ ಮಾಡುವಂತೆ ಕರೆ ನೀಡಿದರು.
 ಮುಖ್ಯ ಅತಿಥಿಗಳಾಗಿ ಆಗಮಿಸಿದ ಗಂಗಾವತಿ ಪೊಲೀಸ್ ಉಪ ಅಧೀಕ್ಷಕರಾದ ನ್ಯಾಮಗೌಡ ಅವರು ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಗಟ್ಟಲು ಸರಕಾರವು ವಿವಿಧ ಕಾನೂನುಗಳನ್ನು ಜಾರಿಯಲ್ಲಿ ತಂದಿರುತ್ತದೆ. ಅವುಗಳಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ತಿದ್ದುಪಡಿ-2019 ಪ್ರಮುಖವಾದದ್ದು. ಈ ಕಾಯ್ದೆಯನ್ವಯ 18 ವರ್ಷದೊಳಗಿನ ಮಕ್ಕಳ ಮೇಲಿನ ಬೇಧಕ ಲೈಂಗಿಕ ಹಲ್ಲೆಗೆ ಕನಿಷ್ಠ 20 ವರ್ಷಗಳಿಂದ ಅಜೀವ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಲೈಂಗಿಕ ಕಿರುಕುಳ ಅಂದರೆ ಮಕ್ಕಳಿಗೆ ಶಾಬ್ಧಿಕ, ಅಂಗಿಕ, ಭಾಷಿಕ ಹಾಗೂ ಲಿಖಿತವಾಗಿ ಅವರ ಘನತೆಗೆ ಧಕ್ಕೆ ಉಂಟುಮಾಡಬಹುದಾದ ಯಾವುದೇ ಈ ರೀತಿಯ ಕೃತ್ಯಗಳಾಗಿವೆ. ಈ ಕೃತ್ಯಗಳಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಈ ರೀತಿಯ ಕೃತ್ಯಗಳಿಗೆ ಸಹಾಯ, ಪ್ರೋತ್ಸಾಹ ನೀಡಿದವರಿಗೂ ಮತ್ತು ಪ್ರಯತ್ನಪಟ್ಟವರಿಗೂ ಸಹ ಅಷ್ಟೇ ಪ್ರಮಾಣದ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಮಾಧ್ಯಮಗಳ ಪ್ರಭಾವದಿಂದ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮಕ್ಕಳು ತಿಳಿದೊ, ತಿಳಿಯದೆಯೋ ಈ ಕಾಯ್ದೆಯಲ್ಲಿ ಸಿಲುಕುತ್ತಿದ್ದಾರೆ. ಮನೆಯಲ್ಲಿನ ಸಣ್ಣ ಮಕ್ಕಳನ್ನು ಕುಟುಂಬದಲ್ಲಿನ ಸದಸ್ಯರೇ ಲೈಂಗಿಕವಾಗಿ ದುರ್ಬಳಕೆ ಮಾಡುತ್ತಿರುವ ಪ್ರಕರಣಗಳು ವರದಿಯಾಗಿವೆ. ಆದ್ದರಿಂದ ಮಕ್ಕಳ ದೇಹದ ಭಾಗಗಳಲ್ಲಿ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಷಗಳ ಕುರಿತು ಜಾಗೃತಿ ಮೂಡಿಸುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
 ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳನ್ನು ಎಲ್ಲೆಂದರಲ್ಲಿ ತೊರೆದು ಹೋಗಿ ಮಕ್ಕಳ ಪ್ರಾಣಕ್ಕೆ ಕುತ್ತು ತಂದ ಪ್ರಕರಣಗಳು ಸಹ ವರದಿಯಾಗಿವೆ. ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರಡಿಯಲ್ಲಿ ಮಗು ಬೇಡವಾದಲ್ಲಿ ಅಂತಹ ಮಗುವನ್ನು ಎಲ್ಲೆಂದರಲ್ಲಿ ಬಿಸಾಡಿ ಮಗುವಿನ ಪ್ರಾಣಕ್ಕೆ ಎರವಾಗದೇ, ಅಂತಹ ಮಗುವನ್ನು 1098 ಮೂಲಕ ಅಥವಾ ನೇರವಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಬಹುದಾಗಿದೆ. ನಂತರ ಸಮಿತಿಯು ಆ ಮಗುವನ್ನು ಕುಟುಂಬದ ವಾತಾವರಣದಲ್ಲಿ ಬೆಳೆಸಲು ಅಗತ್ಯ ಪುನರವಸತಿಗಳನ್ನು ನಿಯಮಾನುಸಾರ ಕೈಗೊಳ್ಳುತ್ತದೆ. ಅಕ್ರಮ ದತ್ತು ಶಿಕ್ಷಾರ್ಹ ಅಪರಾಧವಾಗಿದೆ. ನಿಯಮಬಾಹಿರವಾಗಿ ದತ್ತು ಪಡೆದಲ್ಲಿ ಅಂತಹ ಪಾಲಕರು ಮತ್ತು ದತ್ತು ನೀಡಿದ ಪೋಷಕರಿಗೂ ಸಹ ಶಿಕ್ಷೆಯನ್ನು ವಿಧಿಸಬಹುದಾಗಿದ್ದು, ಆದ್ದರಿಂದ ಬೇಡವಾದ ಶಿಶುಗಳನ್ನು ಎಲ್ಲಂದರಲ್ಲಿ ಬಿಸಾಡದೇ ಮಮತೆಯ ತೊಟ್ಟಿಲಿನಲ್ಲಿ ಹಾಕಿ ಅಥವಾ ಮಕ್ಕಳ ಸಹಾಯವಾಣಿ-1098ಕ್ಕೆ ಕರೆ ಮಾಡುವ ಮೂಲಕ ಅಂತಹ ಮಕ್ಕಳನ್ನು ಕಾನೂನುಬದ್ಧ ದತ್ತು ಪ್ರಕ್ರೀಯೆ ಮೂಲಕ ಕುಟುಂಬದ ವಾತಾವರಣವನ್ನು ನಿರ್ಮಸಲು ಸಹಕರಿಸುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಪನ್ಮೂಲ ವ್ಯಕ್ತಿಗಳಾದ ಶಿವಲೀಲಾ ವನ್ನೂರು ಅವರು ಮಾತನಾಡಿ, 18 ವರ್ಷದೊಳಗಿನ ಮಕ್ಕಳು ಮಾದಕ ವ್ಯಸನಕ್ಕೊಳಗಾಗುತ್ತಿದ್ದಾರೆ. ವಾಹನ ಪರವಾನಿಗೆ ಇಲ್ಲದೇ ಅಸುರಕ್ಷಿತ ಚಾಲನೆ ಮಾಡಿ ಅಪಘಾತಗಳ ಪ್ರಮಾಣ ಏರಿಕೆಯಗುತ್ತಿದ್ದು, ಇದರಿಂದ ಮಕ್ಕಳು ಮತ್ತು ವಯಸ್ಕರ ಜೀವಹಾನಿಯಾಗುತ್ತಿರುವುದು ವಿಷಾದನೀಯ. ಅಲ್ಲದೇ ಅಪ್ರಾಪ್ತ ವಯಸ್ಸಿನ ಮಕ್ಕಳು ಕಳ್ಳತನ ಮತ್ತು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಹಾಗೂ ಪೋಕ್ಸೋ ಪ್ರಕರಣಗಳಲ್ಲಿಯೂ ಸಹ 18 ರಿಂದ 21 ವಯಸ್ಕ ಪುರುಷರು ಜೀವಾವಧಿ ಶಿಕ್ಷೆಯ ಪ್ರಮಾಣವನ್ನು ಅನುಭವಿಸುವಂತಹ ಘಟನೆಗಳು ವರದಿಯಾಗಿವೆ. ಆದ್ದರಿಂದ ಪಾಲಕರು ಮಕ್ಕಳ ಚಲನ-ವಲನಗಳ ಮೇಲೆ ನಿಗಾವಹಿಸಿ ಅವರಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಿ, ಮಕ್ಕಳ ಮೇಲೆ ಹೆಚ್ಚು ಪ್ರೀತಿ, ಕಾಳಜಿಯನ್ನುವಹಿಸುವ ಮೂಲಕ ಮಕ್ಕಳು ಅಪಾಯದ ಅಂಚಿಗೆ ಸಿಲುಕುವ ಸಂದರ್ಭಗಳಿಂದ ಕಾಪಾಡುವ ಜವಾಬ್ದಾರಿ ನಮ್ಮ-ನಿಮ್ಮೆಲ್ಲರದ್ದಾಗಿದೆ ಎಂದು ಮಾಹಿತಿ ನೀಡಿದರು.
 ಈ ಕಾರ್ಯಕ್ರಮದಲ್ಲಿ ಮಕ್ಕಳ ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುವ ಉದ್ದೇಶವನ್ನು ಪ್ರಾಸ್ತಾವಿಕವಾಗಿ ಕನಕಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ವಿರುಪಾಕ್ಷ ಸ್ವಾಮಿ ಅವರು ಮಾತನಾಡಿದರು. ಕನಕಗಿರಿ ವಲಯದ ವೃತ್ತ ನಿರೀಕ್ಷಕರಾದ ನಾರಾಯಣ, ಕನಕಗಿರಿ ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ನಾಗೇಶ ಎಚ್., ಅಂಗನವಾಡಿ ಮೇಲ್ವಿಚಾರಕರಾದ ಚಂದ್ರಕಲಾ, ಬಸರಿಹಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಕಾರಿಗಳಾದ ಬಸವರಾಜ ಸಂಕನಾಳ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಪರಶುರಾಮ ವಜ್ರಬಂಡಿ, ಬಸರಿಹಾಳ ಸ.ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯರಾದ ಧರ್ಮಣ್ಣ ಸೇರಿದಂತೆ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಸರ್ವಸದಸ್ಯರು, ಅಂಗನವಾಡಿ ಕಾರ್ಯಕರ್ತರು, ಅಕ್ಕಪಡೆ ಪೊಲೀಸ್ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಗ್ರಾಮದ ಮಹಿಳೆಯರು & ಊರಿನ ಮುಖಂಡರು ಹಾಗೂ ಮಕ್ಕಳು ಭಾಗವಹಿಸಿದ್ದರು.
 ಕಾರ್ಯಕ್ರಮದ ನಿರೂಪಣೆ ಮತ್ತು ಪ್ರಾರ್ಥನೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತರಾದ ಪ್ರತಿಭಾ ಕಾಶಿಮಠ ಅವರು ನೆರವೇರಿಸಿದರು. ಸ್ವಾಗವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ(ಸಾಂಸ್ಥಿಕ) ರವಿ ಬಡಿಗೇರ ಅವರು ಮತ್ತು ವಂದನಾರ್ಪಣೆಯನ್ನು ಮಕ್ಕಳ ಸಹಾಯವಾಣಿ-1098ರ ಸಂಯೋಜಕರಾದ ಶರಣಪ್ಪ ಸಿಂಗನಾಳ ಅವರು ನೆರವೇರಿಸಿದರು.

Total Views: 0
Share This Article