ಕುಳಿತಲ್ಲೇ ಸಂಪಾದನೆ : ಮುನಿಯಮ್ಮ ಹೇಳಿದ ಗಳಿಕೆಯ ಲೆಕ್ಕಾಚಾರವೂ

H.Mallikarjun
H.Mallikarjun - Kalyanasiri
5 Min Read
ಜಾಹೀರಾತು
Earning while sitting: Muniyamma's earnings calculation

ಮೂರು ದಿನಗಳಿಂದ ಕೆಲಸದಾಕೆ ಮುನಿಯಮ್ಮ ಬಾರದೆ ಮನೆ ಕೆಲಸವೆಲ್ಲ ರಂಗಣ್ಣನ ತಲೆಯ ಮೇಲೆ ಬಿದ್ದಿತ್ತು. ಆತ ತೀವ್ರ ಆಕ್ರೋಶಗೊಂಡಿದ್ದು, ಅದನ್ನು ವ್ಯಕ್ತಪಡಿಸಲು ಆಕೆಯ ಬರುವಿಕೆಯನ್ನೇ ಕಾಯುತ್ತಿದ್ದನು. ಮಗ ‘ನೀಟ್’ (NEET) ಪರೀಕ್ಷೆಯ ತಯಾರಿಯಲ್ಲಿ ತೊಡಗಿದ್ದರೆ, ಇತ್ತ ಪತ್ನಿ ಮಗನ ಶ್ರೇಯೋಭಿವೃದ್ಧಿಗಾಗಿ ಉಪವಾಸ ಮಾಡುತ್ತಾ, ರಾಮಕೋಟಿ ಬರೆಯುತ್ತಾ, ವ್ರತಾದಿಗಳನ್ನು ಮಾಡುತ್ತಿದ್ದಳು. ಇದರಿಂದಾಗಿ ಮನೆಯ ಇತರೆ ಎಲ್ಲಾ ಕೆಲಸಗಳೂ ಆತನ ಮೇಲೆಯೇ ಬಿದ್ದಿದ್ದವು.ಹೊರಗೆ ಗೇಟ್ ತೆಗೆದು, ಬಾಗಿಲು ಬಡಿದ ಸದ್ದು ಕೇಳುತ್ತಲೇ, “ಯಾವ ಯಾವ ಮಾತುಗಳು ಮತ್ತು ಬೈಗುಳಗಳಿಂದ ತನ್ನ ಸಿಟ್ಟನ್ನು ಹೊರಹಾಕಬಹುದು,” ಎಂದು ಯೋಚಿಸುತ್ತಾ ರಂಗಣ್ಣ ರೂಮಿನಿಂದ ಆಚೆ ಬಂದನು. ಅಷ್ಟರಲ್ಲಿ ಅಡುಗೆ ಮನೆಯಲ್ಲಿದ್ದ ಆತನ ಶ್ರೀಮತಿ ಓಡಿಬಂದು ಬಾಗಿಲನ್ನು ತೆರೆದಿದ್ದಳು.”ಏನಮ್ಮ ಮುನಿಯಮ್ಮ ಇದು? ಯಾಕಮ್ಮ ಇಷ್ಟು ದಿನ…” ಎಂದು ಶ್ರೀಮತಿ ಮಾತು ಆರಂಭಿಸುವಷ್ಟರಲ್ಲಿ, ಮುನಿಯಮ್ಮ ಅಡ್ಡಬಂದು, “ಮುಂದೆ ಮಾತನಾಡಬೇಡ ಅಕ್ಕರೆ, ನಾಳೆಯಿಂದ ನಾನು ಕೆಲಸಕ್ಕೆ ಬರಕ್ಕಾಗಲ್ಲ. ಅದನ್ನೇ ಹೇಳ್ಬಿಟ್ಟು ಹೋಗೋಣ ಅಂತ ಬಂದೆ,” ಎಂದಳು.ಇಷ್ಟನ್ನು ಕೇಳುತ್ತಿದ್ದಂತೆ, ಹಲ್ಲು ಕಚ್ಚಿಕೊಂಡು ನಿಂತಿದ್ದ ರಂಗಣ್ಣನ ಕೆನ್ನೆಗಳು ಸಡಿಲವಾದವು! ಬೇಟೆಯಾಡಲು ಹೋದ ಬೇಟೆಗಾರನೇ ಬೇಟೆಯಾದ ಪರಿಸ್ಥಿತಿ ಆತನದಾಗಿತ್ತು.”ಏಕೆ? ಏನಾಯ್ತು?.. ಬಾ ಒಳಗೆ, ಕುಳಿತುಕೊಂಡು ಮಾತನಾಡು,” ಎಂದು ಶ್ರೀಮತಿ ಅವಳನ್ನು ಒಳಗೆ ಕರೆದಳು.”ಇಲ್ಲ ಅಕ್ಕ, ಹೋಗಬೇಕು ಅರ್ಜೆಂಟು,” ಎಂದಳು ಮುನಿಯಮ್ಮ.”ಇರ್ಲಿ ಬಾ, ಏನು ವಿಷಯ ಅಂತ ಕರೆಕ್ಟಾಗಿ ಹೇಳು? ಒಂದು ನಿಮಿಷ ಕಾಫಿ ತಂದುಬಿಡ್ತೀನಿ…” ಎನ್ನುತ್ತಾ ಶ್ರೀಮತಿ ಅಡುಗೆಮನೆಯೊಳಗೆ ಸರಿದಳು. ಕಳೆದ ಆರು ತಿಂಗಳಿಂದ “ಕಾಫಿ-ಟೀ ಕುಡಿದರೆ ಗ್ಯಾಸ್ಟ್ರಿಕ್ ಆಗುತ್ತದೆ,” ಎಂದು ಬೆಳಗ್ಗೆ ಎದ್ದು ವಿವಿಧ ರೀತಿಯ ಕಷಾಯ ಕುಡಿಸಿ,ಕುಡಿಯುತ್ತಿದ್ದ ಶ್ರೀಮತಿಯ ಈ ದಿಢೀರ್ ಬದಲಾವಣೆ ಮತ್ತು ನಡೆಗೆ ರಂಗಣ್ಣ ಚಕಿತನಾದನು.”ಹೇಳು, ಏನು ವಿಷಯ?” ಕಾಫಿಯನ್ನು ನೀಡುತ್ತಾ ಶ್ರೀಮತಿ ಪ್ರಶ್ನಿಸಿದಳು.”ವಿಷಯ ಅಂದ್ರೆ ಏನಕ್ಕ, ಇಲ್ಲಿಗೆ ಎರಡು ಕಿಲೋಮೀಟರ್ ಬರಬೇಕು , ಎರಡು ಕಿಲೋಮೀಟರ್ ಹೋಗ್ಬೇಕು . ಒಟ್ಟು ನಾಲಕ್ಕು ಕಿ.ಮೀ ನಡೆಯುವುದರಿಂದ ಸುಸ್ತಾಗುತ್ತೆ. ಅದಕ್ಕೆ ಕೆಲಸ ಬಿಡ್ತಾ ಇದ್ದೀನಿ,” ಎಂದಳು ಮುನಿಯಮ್ಮ.ಮೂರು ವರ್ಷಗಳ ಹಿಂದೆ ತಾನಾಗಿಯೇ ಬಂದು, ಹಳೆಯ ಕೆಲಸದಾಕೆ ಲಕ್ಷ್ಮಿ ಮಾಡುತ್ತಿದ್ದ ಎಲ್ಲ ಕೆಲಸಗಳನ್ನು ಹಂಗಿಸಿ, “ಇದೇನಕ್ಕಾ ಕಪ್ಪಿನಲ್ಲಿ ಕಾಫಿ ಕರೆ ಹಂಗೆ ಇದೆ? ನೆಲ ಜಾರುತ್ತೆ, ಹೊರಗಡೆ ಗೇಟ್ ಒರೆಸಿಲ್ಲ…” ಎಂದು ಹಳೆಯ ಕೆಲಸದವಳ ನ್ಯೂನತೆಗಳನ್ನು ಎತ್ತಿಹಿಡಿದು ಕೆಲಸ ಗಿಟ್ಟಿಸಿಕೊಂಡಿದ್ದ ಮುನಿಯಮ್ಮನ ಬಾಯಿಂದ ಈಗ ಈ ಮಾತು ಬರುತ್ತಿತ್ತು!”ಬರುವಾಗ ದಾರಿಯಲ್ಲಿ ಒಂದು ಮನೆ ಮಾಡಿಕೊಂಡು ಬರ್ತೀಯಾ, ನಮ್ಮ ಮನೆ ಮುಗಿಸಿ ಹೋಗುವಾಗ ಇನ್ನೊಂದು ಮನೆ ಮಾಡ್ತೀಯಾ. ಈಗೇನು ಹೊಸ ಸಮಸ್ಯೆ?” ಎಂದಳು ಶ್ರೀಮತಿ ರಂಗಣ್ಣ .”ಬೆಳಗ್ಗೆ ಆರು ಗಂಟೆಗೆ ಹೊರಟು ಮೂರು ಮನೆ ಕೆಲಸ ಮಾಡಿ ಮನೆಗೆ ಹೋಗುವಷ್ಟರೊಳಗೆ ಹತ್ತುವರೆ ಆಗುತ್ತೆ. ಮಳೆ, ಬಿಸಿಲು ಅಂತ ನೋಡದೇನೆ ಬರಬೇಕು. ಅರ್ಧ ಗಂಟೆ ಲೇಟಾದರೆ ನೀವು ತಡ್ಕೊಳ್ಳಲ್ಲ. ಅದಕ್ಕೆ ಬಿಡ್ತಾ ಇದ್ದೀನಿ. ನಿಮ್ಮದೊಂದು ಅಂತ ಅಲ್ಲ, ಎಲ್ಲಾ ಮನೆ ಕೆಲಸನೂ ಬಿಡ್ತಾ ಇದ್ದೀನಿ,” ಎಂದಳು ಮುನಿಯಮ್ಮ.”ಹೀಗೆ ನೋಡು, ಮಧ್ಯದಲ್ಲಿ ಕೈಬಿಟ್ಟರೆ ಹೇಗೆ? ಇಷ್ಟಕ್ಕೂ ಬೇರೆ ಕೆಲಸ ಏನಾದರೂ ಸಿಕ್ಕಿದೆಯಾ?””ಯಾವ ಕೆಲಸನೂ ಇಲ್ಲ. ಮನೆಯಲ್ಲಿ ಕೂತಿದ್ದ ಕಡೆ ತಿಂಗಳಿಗೆ ಹತ್ತು ಸಾವಿರ ಬರೋ ಹಾಗಿದ್ದರೆ, ಸುಮ್ಮನೆ ಯಾಕೆ ಕಷ್ಟಪಟ್ಟು ಕೆಲಸ ಮಾಡಿ ಮೈ ನೋಯಿಸಿಕೊಳ್ಳೋದು?””ಕೂತಿದ್ದ ಕಡೆಯಾ?! ಇದೇನಮ್ಮ ಹೀಗೆ ಹೇಳ್ತಿದ್ದೀಯಾ?” ರಂಗಣ್ಣ ಕುತೂಹಲ ತಡೆಯಲಾರದೆ ಹಾಲಿಗೆ ಬಂದು ಸಂಭಾಷಣೆಯಲ್ಲಿ ಭಾಗಿಯಾದ.”ಏನೂ ಇಲ್ಲ ಬಿಡಣ್ಣ,” ಎಂದಳು ಮುನಿಯಮ್ಮ ಮುಗುಮ್ಮಾಗಿ.”ಕೂತಿರೋ ಜಾಗಕ್ಕೆ ಯಾರು ಹತ್ತು ಸಾವಿರ ಕೊಡ್ತಾರೆ? ಏನೋ ಮುಚ್ಚಿಡ್ತಿದ್ದೀಯಾ, ಅದೇನು ಅಂತ ಹೇಳು,” ಶ್ರೀಮತಿ ಒತ್ತಾಯಿಸಿ ಪ್ರಶ್ನಿಸಿದಳು.”ಏನೂ ಇಲ್ಲ ಬಿಡಿ ಅಕ್ಕ.””ಏನೇ, ನನಗೆ ಹೇಳದೇನೆ? ಅಷ್ಟು ವಿಶ್ವಾಸದಿಂದ ನಮ್ಮ ಮನೆಯವರ ತರಹ ನೋಡ್ಕೋತೀವಿ ಅಂತ ತಿಳ್ಕೊಂಡಿದ್ದೀವಿ. ಅದೇನು ಅಂತ ಹೇಳಿ,” ರಂಗಣ್ಣ ನಯವಾಗಿ ಕೇಳಿದನು.”ಈಗ ನೋಡಿ, ನಾನು ಮತ್ತು ನನ್ನ ಮಗಳು ಇಬ್ಬರೂ ಬೆಳಗ್ಗೆ ಎದ್ದು ಸಾಲು ಸಾಲು ಕೆಲಸಕ್ಕೆ ಹೋದ್ರೂ ತಿಂಗಳಿಗೆ ಹತ್ತರಿಂದ ಹನ್ನೆರಡು ಸಾವಿರ ಸಂಬಳ ಸಿಗುತ್ತಿರಲಿಲ್ಲ. ಈಗ ನೋಡಿ, ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಇಬ್ಬರಿಗೂ ಸೇರಿ ತಿಂಗಳಿಗೆ ನಾಲ್ಕು ಸಾವಿರ ಬರುತ್ತೆ…”ಆಕೆಯ ಮಗಳು ಕುಡುಕ ಗಂಡನ ಜೊತೆ ಜಗಳವಾಡಿ ಒಂದೆರಡು ಬಾರಿ ನ್ಯಾಯ ಮಾಡಿ ಪ್ರಯೋಜನವಾಗದೆ ತಾಯಿಯೊಂದಿಗೇ ಇದ್ದಳು, ಆಕೆಯೂ ಒಂದೆರಡು ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು.”ಸರಿ, ನಾಲ್ಕು ಸಾವಿರ ಆಯ್ತು, ಆಮೇಲೆ?””ನಾವಿರೋದು ಮೂರು ಜನ. ನಾನು, ನನ್ನ ಮಗಳು ಮತ್ತೆ ಅವಳ ಮಗಳು. ಸ್ನಾನಕ್ಕೆ ಮನೆಯಲ್ಲಿ ಸೋಲಾರ್ ಇದೆ, ತಿಂಡಿ ಊಟ ಅಲ್ಲಿ ಇಲ್ಲಿ ಹೊರಗಡೆನೇ ಆಗುತ್ತೆ.ಹೀಗಾಗಿ ಗ್ಯಾಸ್ ಬಳಸೋದು ಕಡಿಮೆ. ಮೂರು-ನಾಲ್ಕು ತಿಂಗಳಿಗೆ ಒಂದು ಸಿಲಿಂಡರ್ ಸಾಕಾಗುತ್ತೆ. ಅದಕ್ಕೆ ನಮ್ಮ ಹೆಸರಿನ ಗ್ಯಾಸ್ ಅನ್ನ ಪಕ್ಕದ ಕ್ಯಾಂಟೀನ್‌ನವನು ಬಳಸಿಕೊಳ್ತಾ ಇದ್ದಾನೆ. ಗ್ಯಾಸ್ ರೇಟ್ ಮೇಲೆ ತಿಂಗಳಿಗೆ ೨,೦೦೦ ಕೊಡ್ತಾನೆ. ನಂದು ಮತ್ತು ನನ್ನ ಮಗಳದ್ದು ಸೇರಿ ಅದೊಂದು ೪,೦೦೦ ರೂಪಾಯಿ ಬರುತ್ತೆ.””ಓಹೋ! ಇದು ಲೆಕ್ಕಾಚಾರ? ಆಮೇಲೆ?””ತಿಂಗಳಿಗೆ ಮೂರು-ನಾಲ್ಕು ಆ ಸಮಾವೇಶ, ಈ ಸಭೆ ಅಂತ ರಾಜಕೀಯದವರು ಬರ್ತಾರೆ. ‘ಇವರದು ಹುಟ್ಟುಹಬ್ಬ, ಅವರದು ರ‍್ಯಾಲಿ’ ಅಂತ ಗಾಡಿಯಲ್ಲಿ ಕರ್ಕೊಂಡು ಹೋಗ್ತಾರೆ. ಊಟ, ತಿಂಡಿ ಕೊಟ್ಟು ದಿನಕ್ಕೆ ೫೦೦ ರೂಪಾಯಿ ಕೊಡ್ತಾರೆ. ಸುಮ್ಮನೆ ತಿರುಗಾಡಿಕೊಂಡು, ಫ್ರೆಂಡ್ಸ್ ಜೊತೆಗೆ ಹರಟೆ ಹೊಡ್ಕೊಂಡು, ಹತ್ತಿರದಲ್ಲಿ ಯಾವುದಾದರೂ ದೇವಸ್ಥಾನ ಇದ್ದರೆ ನೋಡ್ಕೊಂಡು ಬರಬಹುದು. ಇನ್ನು ನಮ್ಮ ಮೊಮ್ಮಗಳು ಬೆಳಗ್ಗೆ ತಿಂಡಿ ತಿನ್ಕೊಂಡು ಹೋದರೆ, ಮಧ್ಯಾಹ್ನ ಸ್ಕೂಲಲ್ಲೇ ಬಿಸಿಬಿಸಿ ಊಟ, ಮೊಟ್ಟೆ ಕೊಡ್ತಾರೆ. ಬಸ್‌ ಚಾರ್ಜ್ ಅಂತೂ ಮೊದಲೇ ಇಲ್ಲ, ಫ್ರೀಯಾಗಿ ಬಸ್ ಹತ್ತೋದು. ಆಮೇಲೆ…””ಆಮೇಲೆ ಇನ್ನೂ ಏನಿದೆ ಆದಾಯ?” ರಂಗಣ್ಣ ಕಣ್ಣರಳಿಸಿ ಕೇಳಿದ.”ಮನೆ ಹತ್ತಿರನೇ ಮದುವೆ, ಬೀಗರ ಊಟಕ್ಕೆ ದೊಡ್ಡ ಚೌಟ್ರಿ ಇದೆ. ಅಲ್ಲೂ ತಿಂಗಳಿಗೆ ೭-೮ ಫಂಕ್ಷನ್ ಇರುತ್ತೆ. ಬೆಳಗ್ಗೆ ೯ ಗಂಟೆಗೆ ಹೋದರೆ ತಿಂಡಿ, ಮಧ್ಯಾಹ್ನ ಊಟ ಮುಗಿಸಿಕೊಂಡು ಸಂಜೆ ೫:೦೦ ಗಂಟೆಗೆ ವಾಪಸ್ ಬರಬಹುದು. ಮಗಳು ಅವರು ಕೊಡುವ ಯೂನಿಫಾರ್ಮ್ ಹಾಕೊಂಡು ಸಪ್ಲೈ ಮಾಡ್ತಾಳೆ,ಬಡಿಸುತ್ತಾಳೆ. ನಾನು ಮಾಮೂಲಿ ಕೊನೆಯಲ್ಲಿ ಎಲೆ ಎಳೆಯುವ ಕೆಲಸ ಮಾಡ್ತೀನಿ. ಇಬ್ಬರಿಗೂ ದಿನಕ್ಕೆ ಒಂದೊಂದು ಸಾವಿರ ಕೊಡ್ತಾರೆ. ಹೀಗಾಗಿ ಆಷಾಢ, ಶ್ರಾವಣ ಅಂತ ಮುಹೂರ್ತಗಳು ಹೆಚ್ಚು-ಕಡಿಮೆ ಆದ್ರೂ ತಿಂಗಳಿಗೆ ೧೫ ರಿಂದ ೨೦ ಸಾವಿರ ರೂಪಾಯಿಗಂತೂ ಕಮ್ಮಿ ಇಲ್ಲ. ಹಾಗಾಗಿ ಸುಮ್ಮನೆ ಯಾಕೆ ರಿಸ್ಕ್ ತಗೋಬೇಕು ಅಂತ ಎಲ್ಲಾ ಮನೆ ಕೆಲಸನೂ ಬಿಡ್ತಾ ಇದ್ದೀವಿ.””ಹೀಗೆಲ್ಲ ಇದೆಯಾ?! ಇನ್ನೊಂದೆರಡು ವರ್ಷ ಬಿಟ್ಟರೆ ಏನು ಮಾಡ್ತೀಯಾ?” ಶ್ರೀಮತಿ ಆಶ್ಚರ್ಯದಿಂದ ಕೇಳಿದಳು.”ತೆಗೆದುಹಾಕ್ತಾರಾ? ನೀವೇನೂ ಪೇಪರ್ ಓದಲ್ಲ, ಟಿವಿ ನೋಡಲ್ಲ ಅಂತ ಕಾಣುತ್ತೆ! ಇಲ್ಲಿದ್ದನ್ನೆಲ್ಲಾ ನೋಡ್ಕೊಂಡು ಕೇರಳದಲ್ಲಿ, ಬಂಗಾಳದಲ್ಲಿ ಗೃಹಲಕ್ಷ್ಮಿಇನ್ನು ಜಾಸ್ತಿನೇ ಕೊಡ್ತಾರಂತೆ. ಹೀಗಾಗಿ ಇದನ್ನು ಇನ್ನು ಜಾಸ್ತಿ ಮಾಡ್ತಾರೆ ಹೊರತು, ಅಂತೂ ನಿಲ್ಸಲ್ಲ ಕಣಕ್ಕ.””ಅಯ್ಯೋ! ಈಗ ಬಿಟ್ಟರೆ ಹೇಗೆ? ಹೋಗ್ಲಿ, ಮಗನ ‘ನೀಟ್’ ಎಕ್ಸಾಮ್ ಮುಗಿಯೋವರೆಗಾದರೂ ಬಂದು ಕೆಲಸ ಮಾಡು.. ಆಮೇಲೆ ಏನಾದರೂ ವ್ಯವಸ್ಥೆ ಮಾಡ್ಕೋತೀನಿ. ಪ್ಲೀಸ್ ಇಲ್ಲ ಅನ್ನಬೇಡ,” ಎಂದು ರಂಗಣ್ಣನ ಶ್ರೀಮತಿ ದೈನ್ಯವಾಗಿ ಯಾಚಿಸಿದಳು.ಮುನಿಯಮ್ಮ ಸ್ವಲ್ಪ ಯೋಚಿಸಿ, “ಏನೋ ಇಷ್ಟೊಂದು ಕೇಳ್ಕೊಳ್ತಾ ಇದ್ದೀರಾ, ಸರಿ ಇರ್ಲಿ. ಆದರೆ ಇನ್ನೆರಡು ಮನೆಯವರು ಏನಾದರೂ ಕೇಳಿದರೆ, ನಾನು ನಿಮ್ಮ ಮನೆಗೆ ಬರ್ತಾ ಇಲ್ಲ ಅಂತಾನೇ ಹೇಳ್ಬೇಕು, ಆಯ್ತಾ? ಸರಿ, ಮೋಟಾರ್ ಆನ್ ಮಾಡಿ…” ಎಂದು ಹೇಳುತ್ತಾ ಮೇಲೆದ್ದಳು.”ಅಬ್ಬಾ! ಸದ್ಯಕ್ಕೆ ತಲೆಬಿಸಿ ಕಳೆಯಿತಲ್ಲ” ಎಂದು ರಂಗಣ್ಣ ನಿಟ್ಟುಸಿರು ಬಿಟ್ಟನು.

ಜಾಹೀರಾತು

Total Views: 0
Share This Article