ತುಂಗಭದ್ರ ಹಿನ್ನೀರು ಪ್ರದೇಶದಲ್ಲಿ ಕಪ್ಪುಮಣ್ಣು ಕಳ್ಳಸಾಗಣೆ ತಡೆಗೆ ಕ್ರಮ ಕೈಗೊಳ್ಳುವಂತೆ ಡಿವೈಎಸ್‌ಪಿಗೆ ಮನವಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Request to DySP to take action to prevent black soil smuggling in Tungabhadra backwaters




ತುಂಗಭದ್ರ ಹಿನ್ನೀರು ಪ್ರದೇಶದಲ್ಲಿ ಕಪ್ಪುಮಣ್ಣು ಕಳ್ಳಸಾಗಣೆ ತಡೆಗೆ ಕ್ರಮ ಕೈಗೊಳ್ಳುವಂತೆ ಡಿವೈಎಸ್‌ಪಿಗೆ ಮನವಿ

ಜಾಹೀರಾತು

ಗಂಗಾವತಿ: ತುಂಗಭದ್ರ ಡ್ಯಾಂ ಹಿನ್ನೀರು ಪ್ರದೇಶಗಳಲ್ಲಿ ಅಕ್ರಮವಾಗಿ ಕಪ್ಪುಮಣ್ಣು ಸಾಗಾಟ ನಡೆಯುತ್ತಿದ್ದು, ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಭಾರತೀಯ ಪ್ರಜಾ ಸೇನೆ (ರಿ) ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷ ನಬೀ ರಸುಲ್ ಅವರು ಗಂಗಾವತಿ ಡಿವೈಎಸ್‌ಪಿ ಅವರಿಗೆ ದೂರು ಸಲ್ಲಿಸಿದ್ದಾರೆ.

ದೂರಿನಲ್ಲಿ ಬೂದಿಹಾಳ, ಬೆಳ್ಳೂರು, ಡಂಬರಳ್ಳಿ, ಗೊಂಡಬಾಳ, ಹಿರೇಸಿಂದೋಗಿ, ಮರಿಯಮ್ಮನಹಳ್ಳಿ, ವರದಾಪುರ, ಹೊಸಳ್ಳಿ, ಕಾಸನಕಂಡಿ, ಕಾತರಕಿ, ಗೂಡ್ಲಾನೂರು, ಮಳ್ಳಿಕೇರಿ, ಹ್ಯಾಟಿ ಸೇರಿದಂತೆ ತುಂಗಭದ್ರ ಹಿನ್ನೀರು ಪ್ರದೇಶಗಳಿಗೆ ಸಮೀಪವಿರುವ ಗ್ರಾಮಗಳಲ್ಲಿ ಹಗಲು-ರಾತ್ರಿ ಎನ್ನದೆ ಸಾವಿರಾರು ಟಿಪ್ಪರ್‌ಗಳ ಮೂಲಕ ಫಲವತ್ತಾದ ಕಪ್ಪುಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಈ ಕಪ್ಪುಮಣ್ಣನ್ನು ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನ ಇಟ್ಟಂಗಿ ಭಟ್ಟಿಗಳಿಗೆ ಯಾವುದೇ ಸರ್ಕಾರದ ಪರವಾನಿಗೆ ಇಲ್ಲದೆ ಸಾಗಿಸಲಾಗುತ್ತಿದ್ದು, ಇದರಿಂದ ಅಣೆಕಟ್ಟಿನ ಹಿನ್ನೀರು ಪ್ರದೇಶದ ನೈಸರ್ಗಿಕ ಸಂಪತ್ತು ಹಾನಿಯಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಳವಂಡಿ ಹೋಬಳಿಯ ಸರ್ವೇ ನಂ.74/5ರಲ್ಲಿ ಪಡೆದಿರುವ ಪರವಾನಿಗೆಯ ನೆಪದಲ್ಲಿ ಪಕ್ಕದ ಸರ್ಕಾರಿ ಜಾಗವಾದ ಸರ್ವೇ ನಂ.74/4ರಲ್ಲಿ ಅಕ್ರಮವಾಗಿ ಮಣ್ಣು ಎತ್ತುವಳಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಈ ರೀತಿಯ ಅಕ್ರಮ ಚಟುವಟಿಕೆಗಳಿಂದ ತುಂಗಭದ್ರ ಅಣೆಕಟ್ಟಿನ ತಳಪಾಯ ಹಾಗೂ ಸುರಕ್ಷತೆಗೆ ಭವಿಷ್ಯದಲ್ಲಿ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಸಂಬಂಧಪಟ್ಟ ನೀರಾವರಿ ಇಲಾಖೆ, ಡ್ಯಾಂ ಬೋರ್ಡ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಆದ್ದರಿಂದ ಅಕ್ರಮ ಕಪ್ಪುಮಣ್ಣು ಸಾಗಾಟದಲ್ಲಿ ತೊಡಗಿರುವ ಟಿಪ್ಪರ್‌ಗಳು ಮತ್ತು ಹಿಟಾಚಿ ಯಂತ್ರಗಳನ್ನು ಸೀಜ್ ಮಾಡಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಭೂದಗುಂಪಾ ಪ್ರದೇಶದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಕಳ್ಳಸಾಗಣೆಯನ್ನು ತಡೆಯುವಂತೆ ಡಿವೈಎಸ್‌ಪಿಗೆ ಮನವಿ ಸಲ್ಲಿಸಲಾಗಿದೆ.

Total Views: 0
Share This Article