
The working class is the prelude to the development and progress of the country: Justice Mahantesh S. Dargada

ಶ್ರಮಿಕವರ್ಗ ದೇಶದ ಅಭಿವೃದ್ಧಿ ಉನ್ನತಿಗೆ ಮುನ್ನುಡಿ: ನ್ಯಾ. ಮಹಾಂತೇಶ ಎಸ್. ದರಗದ

ಕೊಪ್ಪಳ ಮೇ 11 (ಕರ್ನಾಟಕ ವಾರ್ತೆ): ಶ್ರಮಿಕವರ್ಗ ದೇಶದ ಅಭಿವೃದ್ಧಿ ಉನ್ನತಿಗೆ ಮುನ್ನುಡಿಯಾಗಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ ಅವರು ಹೇಳಿದರು.
ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ವಿವಿಧ ಕಟ್ಟಡ ಮತ್ತು ಇತರೆ ನಿರ್ಮಾಣ ಸಂಘಗಳ ಸಹಯೋಗದಲ್ಲಿ ಇತ್ತೀಚೆಗೆ ಕಿನ್ನಾಳ ಗ್ರಾಮದ ಗ್ರಾಮದಲ್ಲಿರುವ ಹೆಚ್.ಹೆಚ್.ಪಿ. ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂತರಾಷ್ಟೀಯ ಕಾರ್ಮಿಕ ದಿನ ಎನ್ನುವ ಬದಲು ಶ್ರಮಯೋಗಿ ದಿನ ಎಂದು ಕರೆಯುವುದು ಹೆಚ್ಚು ಸೂಕ್ತ, ಹಿಂದೆ ಶರಣಾಧಿ ಪ್ರಮಥರು ವಾಣಿಗಳಂತೆ ಕಾಯಕದ ಮಹತ್ವವನ್ನು ಬಸವಣ್ಣನವರು ಕಾಯಕವೇ ಕೈಲಾಸ ಎಂದು ನುಡಿದು ಕಾಯಕದ ಮಹತ್ವವನ್ನು ಸಾರಿದ್ದಾರೆ. ಅದೇರೀತಿ `ನೀನು ಅಧ್ಯಕ್ಷನಾಗಿರು, ಚಮ್ಮಾರನಾಗಿರು, ಕಮ್ಮಾನಾಗಿರು, ಎನೇ ಆಗಿದ್ದರೂ ಮೊದಲು ಶ್ರಮಯೋಗಿ ಆಗಿ ಕೆಲಸಗಾರನಾಗು, ಕಾರ್ಮಿಕನಾಗಿರು’ ಎಂದು ಡಾ: ಬಿ.ಆರ್.ಅಂಬೇಡ್ಕರ್ ರವರು ಹೇಳಿದ್ದಾರೆ. ಹಾಗಾಗಿ ಶ್ರಮಿಕವರ್ಗ ದೇಶದ ಅಭಿವೃದ್ಧಿ ಉನ್ನತಿಗೆ ಮುನ್ನುಡಿ. ಹಾಗಾಗಿ ಕಾರ್ಮಿಕರನ್ನು ಶ್ರಮಯೋಗಿಗಳನ್ನು ಸನ್ಮಾನಿಸಿದರು. ಈ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ. ಕಣವಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಕಾರ್ಮಿಕರಿಗೆ ಮಂಡಳಿಯಿಂದ ಸಿಗುವ ಸೌಲಬ್ಯಗಳ ಸದುಉಪಯೋಗ ಪಡೆದುಕೊಳ್ಳಬೇಕೆಂದು ಕಾರ್ಮಿಕರಿಗೆ ಅರಿವು ಮೂಡಿಸಿದರು.
ಕಿನ್ನಾಳ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪರಮೇಶ್ವರಯ್ಯ ಅವರು ಕಿನ್ನಾಳ ಗ್ರಾಮದ ಎಳಿಗೆಗಾಗಿ ಸದಾ ಸಿದ್ದರಾಗಿರುತ್ತೆವೆ ಎಂದು ಅರಿವು ಮೂಡಿಸಿದರು.
ಕಲ್ಯಾಣ ಕರ್ನಾಟಕ ಜಿಲ್ಲೆಗಳ ನೋಂದಾಯಿತ ಕಾರ್ಮಿಕ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ರಮೇಶ ಘೋರ್ಪಡೆ ಅವರು ಮಾತನಾಡುತ್ತಾ, ಕಾರ್ಮಿಕ ಇಲಾಖೆಯಿಂದ ನಮ್ಮ ಕಾರ್ಮಿಕರಿಗೆ ಒಳ್ಳೆಯ ಕಾರ್ಯಕ್ರಮಗಳು ಸೌಲಭ್ಯಗಳನ್ನು ನೀಡುತ್ತಾ ಬರಲಾಗುತ್ತಿದೆ. ಇದರಿಂದ ನಮ್ಮ ಕಾರ್ಮಿಕರು ಉತ್ತಮ ಜೀವನ ಕಟ್ಟಿಕೊಳ್ಳಲು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಮಿಕ ನಿರೀಕ್ಷಕರಾದ ಮಂಜುಳಾ ವಿಶ್ವನಾಥ ಅವರು ಮಾತನಾಡಿ, ಪಾಶ್ಚಿಮಾತ್ಯ ದೇಶಗಳಲ್ಲಿ ಕಾರ್ಮಿಕರ ದಂಗೆಗಳು 1883 ರಲ್ಲಿ ಪ್ರಾರಂಭವಾದವು, ಚಿಕ್ಯಾಗೋದಲ್ಲಿ ಕಾರ್ಮಿಕ ಸಂಘಟನೆಗಳು ಹೋರಾಟವನ್ನು ಕೆಲಸದ ಅವಧಿ ನಿರ್ಧರಿಸುವ ಸಲುವಾಗಿ ಮತ್ತು ಅನೇಕ ಶೋಷಣೆಗಳ ವಿರುದ್ಧ ಪ್ರಾರಂಭಿಸಿದರು. 1886 ರಲ್ಲಿ 8 ಗಂಟೆಗಳ ಕೆಲಸದ ಅವಧಿಯನ್ನು ನಿರ್ಣಯಿಸಲಾದ ಪ್ರಯುಕ್ತ 1886ರ ಮೇ 1 ರಿಂದ ಜಾಗತಿಕ ಮಟ್ಟದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಣೆ ಮಾಡುತ್ತಾ ಬದಲಾಯಿತು. ಭಾರತದಲ್ಲಿ 1937 ರಲ್ಲಿ ಚೆನ್ನೈನಲ್ಲಿ ಕಾರ್ಮಿಕ ಸಂಘಟನೆಗಳು ಹೋರಾಟದ ನೆನಪಿಗಾಗಿ ಭಾರತದಲ್ಲಿಯೂ ಕೂಡಾ ಕಾರ್ಮಿಕ ದಿನ ಆಚರಿಸುತ್ತಾ ಬರಲಾಯಿತು. ಈ ದಿನದಂದು ಕಾರ್ಮಿಕರ ಕುರಿತು ಕಾರ್ಯನಿರ್ವಹಿಸಿದ ಕಾರ್ಮಿಕ ಪ್ರತಿನಿಧಿ ಸಂಘಟನೆಗಳು, ಸಂಘಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲು ಆಚರಿಸುತ್ತಾ ಬರುತ್ತಿದೆ ಎಂದು ಈ ದಿನ ಇತಿಹಾಸ ತಿಳಿಸುತ್ತಾ ಮುಂದುವರೆದು, ಕಾರ್ಮಿಕ ಇಲಾಖೆಯಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಡಿ ಕಟ್ಟಡಕ್ಕೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸುತ್ತಿರುವವರು ನೋಂದಣಿಯಾಗಲು, ನೋಂದಣಿ ಪೂರ್ವದ 12 ತಿಂಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು, 18 ರಿಂದ 60 ವರ್ಷದೊಳಗಿರಬೇಕು. ಉದ್ಯೋಗ ದೃಢೀಕರಣ ಪತ್ರ ಅರ್ಜಿದಾರ ಹಾಗೂ ಅವಲಂಬಿತರ ಆಧಾರಕಾರ್ಡ್ ಪ್ರತಿ, ಅರ್ಜಿದಾರರ ಬ್ಯಾಂಕ್ ಪಾಸ್ಬುಕ್ ಪ್ರತಿ, ಅರ್ಜಿದಾರರ ಆಧಾರ್ಕಾರ್ಡ್ಗೆ ಲಿಂಕ್ ಆಗಿರುವ ದೂರವಾಣಿ ಸಂಖ್ಯೆ, ಹೊಂದಿರಬೇಕೆಂದು ತಿಳಿಸಿದರು ಹಾಗೂ ಮಂಡಳಿಯ ವತಿಯಿಂದ ನೋಂದಾಯಿತ ಫಲಾನುಭವಿಗಳಿಗೆ ನೀಡಲಾಗುವ ಸೌಲಭ್ಯಗಳಾದ, ಮದುವೆ ಧನಸಹಾಯ, ಹೆರಿಗೆ ಧನಸಹಾಯ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಧನಸಹಾಯ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಪ್ರಮುಖ ವೈದ್ಯಕೀಯ ಸಹಾಯಧನ, ತಾಯಿ ಮಗು ಸಹಾಯ ಹಸ್ತ, ಪಿಂಚಣಿ ಸೌಲಭ್ಯಗಳನ್ನು ಪಡೆಯಬಹುದಾಗಿರುತ್ತದೆ. ಈ ಸೌಲಭ್ಯಗಳನ್ನು ಪಡೆಯಲು ಅರ್ಹ ಫಲಾನುಭವಿಗಳು ಕಾಲ ಕಾಲಕ್ಕೆ ಗುರುತಿನಚೀಟಯ ನವೀಕರಣವನ್ನು ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದರು ಹಾಗೂ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿ ಅಡಿ ಸಿಗುವ ಸೌಲಭ್ಯಗಳ ಕುರಿತು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕರಾದ ಬಸವರಾಜ ಹಿರೇಗೌಡ್ರ, ಕಾರ್ಮಿಕ ಇಲಾಖೆಯ ಕ್ಷೇತ್ರ ನಿರ್ವಾಹಕರಾದ ಹೇಮಂತ್ಸಿಂಗ್, ಮುಖಂಡರಾದ ವಿರೇಶ ತಾವರಗೇರಾ, ಕಿನ್ನಾಳದ ಶ್ರೀ ಸಿದ್ದರಾಮೇಶ್ವರ ಬಾರ ಬೇಡಿಂಗ್ ಮತ್ತು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಉಮೇಶ ಬಡಿಗೇರ, ಮಾಜಿ ಅಧ್ಯಕ್ಷರಾದ ಬಸವರಾಜ ಚಿಲವಾಡಗಿ, ಬಹದ್ದೂರ ಬಂಡಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಮಹಿಬೂಬ ಮಣ್ಣೂರ ಸೇರಿದಂತೆ ಕೊಪ್ಪಳ ತಾಲೂಕಿನ ವಿವಿಧ ಸಂಘಟನೆಯ ಪದಾಧಿಕಾರಿಗಳು, ಕಾರ್ಮಿಕರು ಉಪಸ್ಥಿತರಿದ್ದರು
