
ಕನಕಗಿರಿ ಉತ್ಸವದ ಸಿದ್ಧತೆ ವೇಗಗೊಳಿಸಿ: ಜಿಲ್ಲಾಧಿಕಾರಿ

Speed up preparations for Kanakagiri festival: District Collector Dr. Suresh B. Itnal instructs officials

ಡಾ.ಸುರೇಶ ಬಿ ಇಟ್ನಾಳ ಅಧಿಕಾರಿಗಳಿಗೆ ಸೂಚನೆ
ಕೊಪ್ಪಳ ಮೇ 06 (ಕರ್ನಾಟಕ ವಾರ್ತೆ): ಕನಕಗಿರಿ ಉತ್ಸವ 2026ರ ಆಚರಣಾ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ ಇಟ್ನಾಳ ಅವರು ಮೇ 06ರಂದು ಕನಕಗಿರಿ ಪಟ್ಟಣಕ್ಕೆ ಭೇಟಿ ನೀಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಉತ್ಸವ ಅಚರಣಾ ಸಮಿತಿಗಳೊಂದಿಗೆ ಮೂರನೆ ಸಭೆ ನಡೆಸಲಾಗುತ್ತಿದೆ. ಅಧಿಕಾರಿಗಳಿಗೆ ಆಯಾ ಕಾರ್ಯಗಳ ಬಗ್ಗೆ ಪುನಃ ಪುನಃ ನೆನಪು ಮಾಡಿ ಕಾರ್ಯ ನಿರ್ವಹಣೆಯನ್ನು ವೇಗಗೊಳಿಸಲಾಗುತ್ತಿದೆ. ಅಧಿಕಾರಿಗಳು ತಮಗೆ ವಹಿಸಿದ ಕಾರ್ಯಗಳ ಬಗ್ಗೆ ಅರಿತು ಗೊಂದಲಕ್ಕೆ ಅವಕಾಶವಿಲ್ಲದಂತೆ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಸಮಿತಿವಾರು ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಅತಿಥಿಗಳ ಸ್ವಾಗತ, ವಸತಿ, ಊಟ, ಸಾರಿಗೆ, ಗಣ್ಯರಿಗೆ ಕಲಾವಿದರಿಗೆ ಸನ್ಮಾನ ಸಾಮಗ್ರಿ ಹಾಗು ಶಿಷ್ಠಾಚಾರದ ಬಗ್ಗೆ ಗಮನ ಹರಿಸಲು ಸಹಾಯಕ ಆಯುಕ್ತರ ಅಧ್ಯಕ್ಷತೆಯ ಸ್ವಾಗತ ಸಮಿತಿಗೆ ಸೂಚನೆ ನೀಡಿದರು.
ಆಯ್ಕೆ ಆಗುವ ಕಲಾವಿದರಿಗೆ ಗೊಂದಲಕ್ಕೆ ಅವಕಾಶವಿಲ್ಲದಂತೆ ಸಂಭಾವಣೆ ಪಾವತಿಗೆ ಕ್ರಮ ವಹಿಸಲು ಸಾಂಸ್ಕೃತಿಕ ಸಮಿತಿಗೆ ಸೂಚನೆ ನೀಡಿದರು.
ಜನಸಂದಣಿ ನಿಯಂತ್ರಣದ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಶಿಸ್ತುಬದ್ದ ಬ್ಯಾರಿಕೆಡಿಂಗ್ ವ್ಯವಸ್ಥೆ ಮಾಡಲು ವೇದಿಕೆ ಸಮಿತಿಗೆ ಸೂಚನೆ ನೀಡಿದರು.
ಆಹಾರ ತಯಾರಿಕೆ ಸ್ಥಳದಲ್ಲಿ ಶುಚಿತ್ವ ಇರಬೇಕು. ಆಹಾರ ಶುಚಿ ಮತ್ತು ರುಚಿಯ ಬಗ್ಗೆ ಗಮನ ಕೊಡಬೇಕು. ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು ತಂಡಗಳ ರಚಿಸಿ ಆಹಾರ ಪೂರೈಕೆಗೆ ಕ್ರಮ ವಹಿಸಲು ಆಹಾರ ಸಮಿತಿಗೆ ಸೂಚನೆ ನೀಡಿದರು.
ಆಯಾ ಕ್ರೀಡಾ ತಂಡಗಳ ವಿವರ, ಪಾವತಿಸಬೇಕಾದ ಸಂಭಾವಣೆ ಎಲ್ಲವೂ ಪಾರದರ್ಶಕವಾಗಿರಬೇಕು ಎಂದು ಕ್ರೀಡಾ ಸಮಿತಿಗೆ ಸೂಚನೆ ನೀಡಿದರು.
ಕಲಾವಿದರು, ಕ್ರೀಡಾಪಟುಗಳು ಹಾಗೂ ಪತ್ರಕರ್ತರಿಗೆ ರೂಮು ಕಾಯ್ದಿರಿಸುವ ಎಲ್ಲಾ ಕಡೆಗೆ ನೋಡಲ್ ಅಧಿಕಾರಿಗಳನ್ನು ಹಾಕಬೇಕು ಎಂದು ವಸತಿ ಸಮಿತಿಗೆ ನಿರ್ದೇಶನ ನೀಡಿದರು.
ಅಚ್ಚುಕಟ್ಟಾಗಿ ವಾಹನಗಳ ಅಧಿಗೃಹಣ ಮತ್ತು ಇಂಧನ ವ್ಯವಸ್ಥೆ ಮಾಡಲು ಸಾರಿಗೆ ಸಮಿತಿಗೆ ಸೂಚನೆ ನೀಡಿದರು.
ಪ್ರಚಾರ ಸಾಮಗ್ರಿ ಬ್ಯಾನರ್ ಪೋಸ್ಟರಗಳನ್ನು ಪಡೆದು ವ್ಯಾಪಕ ಪ್ರಚಾರ ಕಾರ್ಯ ನಡೆಸಲು ಪ್ರಚಾರ ಸಮಿತಿಗೆ ಸೂಚನೆ ನೀಡಿದರು.
ಹೆಲಿಕ್ಯಾಪ್ಟರ್ ರೈಡಿಂಗ್ ಕಾರ್ಯವು ಸುರಕ್ಷಿತ ಕ್ರಮಗಳೊಂದಿಗೆ ನಡೆಸಲು ಭದ್ರತಾ ಸಮಿತಿ ಮತ್ತು ಖಾಸಗಿ ಎಜೆನ್ಸಿಗೆ ಸೂಚನೆ ನೀಡಿದರು.
ಉತ್ಸವ ವೇದಿಕೆಯ ವ್ಯಾಪ್ತಿಯಲ್ಲಿ ಒಪಿಡಿ ತೆರೆಯಲು, ಕನಕಗಿರಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಔಷಧಿ ದಾಸ್ತಾನು ಮಾಡಲು, ದಿನವಿಡೀ ಆರೋಗ್ಯ ಸೇವೆ ಒದಗಿಸಲು ಮತ್ತು ಅಂಬ್ಯುಲೆನ್ಸ್ ವಾಹನ ಸಿದ್ದವಿಟ್ಟುಕೊಳ್ಳಲು ಆರೋಗ್ಯ ನೈರ್ಮಲೀಕರಣ ಸಮಿತಿಗೆ ಸೂಚನೆ ನೀಡಿದರು.
ಕನಕಗಿರಿ ಗ್ರಾಮದಲ್ಲಿ ಸ್ವಚ್ಚತೆ ಮತ್ತು ವೇದಿಕೆ ಪ್ರದೇಶದಲ್ಲಿ ಮರಮ ಹಾಕಿಸಲು, ಕನಕಗಿರಿ ಉತ್ಸವ ಸ್ಥಳ ಸಂಪರ್ಕ ರಸ್ತೆ ದುರಸ್ತಿ ಮಾಡಲು, ಸಾರ್ವಜನಿಕರಿಗೆ ನೀರಿಗಾಗಿ ನಳಗಳ ಮತ್ತು ತಾತ್ಕಾಲಿಕ ಶೌಚಾಲಯಗಳ ನಿರ್ಮಾಣಕ್ಕೆ ಮತ್ತು ವೇದಿಕೆಯ ಸ್ಥಳ ಲೆವೆಲ್ ಮಾಡಲು ಮೂಲಭೂತ ಸೌಕರ್ಯ ಸಮಿತಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತನುಶ್ರೀ ಟಿ ಜೆ ರಾಮಚಂದ್ರ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಂಜುನಾಥ ಗುಂಡೂರ, ಕನಕಗಿರಿ ತಹಸೀಲ್ದಾರ ವಿಶ್ವನಾಥ ಮುರಡಿ, ತಾಪಂ ಇಓ ಕೆ ರಾಜಶೇಖರ ಇದ್ದರು.
