
World Malaria Awareness Day: Awareness campaign for the public in Bevinala village

ವಿಶ್ವ ಮಲೇರಿಯಾ ಜಾಗೃತಿ ದಿನ: ಬೇವಿನಾಳ ಗ್ರಾಮದಲ್ಲಿ ಸಾರ್ವಜನಿಕರಿಗೆ ಅರಿವು

ಕೊಪ್ಪಳ ಏಪ್ರಿಲ್ 29 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ, ಕೊಪ್ಪಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೂಕನಪಳ್ಳಿ ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ಮಲೇರಿಯಾ ಜಾಗೃತಿ ದಿನ”ದ ಅಂಗವಾಗಿ ಸೋಮವಾರದಂದು ಬೇವಿನಾಳ ಗ್ರಾಮದ ಕೆಂಚಮ್ಮ ದೇವಿ ದೇವಸ್ಥಾನದ ಹತ್ತಿರ ಜಾಗೃತಿ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ವ್ಹಿ.ಪಿ ಅವರು ಮಾತನಾಡಿ, ಪ್ರತಿ ವರ್ಷ ಏಪ್ರಿಲ್ 25ರಂದು “ವಿಶ್ವ ಮಲೇರಿಯಾ ದಿನ” ಕಾರ್ಯಕ್ರಮ ಆಚರಿಸಲಾಗುತ್ತದೆ. ಮಾರಣಾಂತಿಕ ರೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಮತ್ತು ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜಾಗತಿಕ ಸಮುದಾಯವನ್ನು ಒಗ್ಗೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. 2026ರ ಘೋಷವಾಕ್ಯ “ಮಲೇರಿಯಾ ಅಂತ್ಯದತ್ತ ಪಯಣ : ಈಗ ನಮಗೆ ಸಾಧ್ಯವಿದೆ ಈಗ ನಾವು ಮಾಡಲೇಬೇಕು” ಎಂಬುವುದಾಗಿದೆ. ಅನಾಫಿಲಿಸ್ ಹೆಣ್ಣು ಸೋಂಕಿತ ಸೊಳ್ಳೆಗಳಿಂದ ಮಲೇರಿಯಾ ಜ್ವರ ಹರಡುತ್ತದೆ. ಈ ರೋಗದ ಲಕ್ಷಣಗಳು ತಲೆನೋವು, ವಾಂತಿ, ವಿಪರೀತ ಚಳಿಜ್ವರ, ಮೈನಡುಕ, ಬಿಟ್ಟು-ಬಿಟ್ಟು ಜ್ವರ ಬರುವ ಲಕ್ಷಣಗಳಿದ್ದರೆ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ರಕ್ತ ಪರೀಕ್ಷೆ ಮಾಡಿಸಬೇಕು. ರೋಗ ಖಚಿತ ಪಟ್ಟರೆ ಚಿಕಿತ್ಸೆ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಜ್ವರದ ಬಗ್ಗೆ ನಿರ್ಲಕ್ಷö್ಯತನ ಮಾಡಬಾರದು ಮತ್ತು ಸ್ಥಳೀಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಆರೋಗ್ಯ ನಿರೀಕ್ಷಣಾಧಿಕಾರಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬೇಕು ಎಂದರು.
ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ ನೀರು ಶೇಖರಿಸುವ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟಿ, ಕಲ್ಲಿನದೋಣಿ ಇನ್ನಿತರ ನೀರು ಸಂಗ್ರಹ ಪರಿಕರಗಳನ್ನು ವಾರದಲ್ಲಿ 2 ಬಾರಿ ಸ್ವಚ್ಚವಾಗಿ ತೊಳೆದು, ಒಣಗಿಸಿ ಪುನಃ ನೀರು ತುಂಬಬೇಕು. ನೀರಿನ ಸಲಕರಣೆಗಳಿಗೆ ಭದ್ರವಾಗಿ ಮುಚ್ಚಳದಿಂದ ಮುಚ್ಚಬೇಕು, ಸಾಯಂಕಾಲದ ವೇಳೆ ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಸೊಳ್ಳೆ ಕಡಿತದಿಂದ ದೂರವಿರಲು ವೈಯಕ್ತಿಕ ರಕ್ಷಣೆ ಮಾಡಿಕೊಳ್ಳಬೇಕು. “ಮಲೇರಿಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ” ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಮನೆಯಲ್ಲಿ ನೀರು ಶೇಖರಣ ತೊಟ್ಟಿಗಳಲ್ಲಿ ಸೊಳ್ಳೆಗಳು ಮೊಟ್ಟೆಗಳನ್ನಿಟ್ಟು ಸಂತಾನಭಿವೃದ್ಧಿ ಮಾಡುತ್ತವೆ. ಲಾರ್ವಾ ನಾಶಕ್ಕಾಗಿ ಸ್ವಚ್ಚಗೊಳಿಸುತ್ತಿರಬೇಕು. ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಭೇಟಿ ನೀಡಿದಾಗ ಸಹಕರಿಸಿ, ರಕ್ತಲೇಪನ ನೀಡಿ, ಮಲೇರಿಯಾ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿ ಮಾಡಲು ಕೈಜೋಡಿಸಲು ತಿಳಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಗೀತಾ ಅವರು ಗ್ರಾಮದ ಸ್ವಚ್ಛತೆ, ಬಾಲ್ಯ ವಿವಾಹ ನಿಷೇಧ, ನೀರಿನ ಹಿತ-ಮಿತ ಬಳಕೆ ಹಾಗೂ ಹಸಿಕಸ-ಒಣಕಸ ವಿಂಗಡಣೆ ಮತ್ತು ವಿಲೇವಾರಿ ಕುರಿತು ವಿವರವಾಗಿ ಮಾತನಾಡಿದರು. “ರೋಗಮುಕ್ತ ಗ್ರಾಮ”ವನ್ನಾಗಿ ಮಾಡಲು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಅವರು, ಬೇಸಿಗೆ ಸಮಯದಲ್ಲಿ ಸಾರ್ವಜನಿಕರು ಆರೋಗ್ಯ ರಕ್ಷಣೆ ಕುರಿತು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು, ರಾಷ್ಟಿçÃಯ ಹಾವು ಕಡಿತ ನಿಯಂತ್ರಣ, ರಾಷ್ಟಿçÃಯ ರೇಬೀಸ್ ನಿಯಂತ್ರಣ, ಕ್ಷಯರೋಗ ನಿರ್ಮೂಲನೆ, ಕುಷ್ಠರೋಗ ನಿರ್ಮೂಲನೆ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಮಾತನಾಡಿದರು. ಮಲೇರಿಯಾ ನಿಯಂತ್ರಣದ ಕುರಿತು ಸಾರ್ವಜನಿಕರಿಗೆ ಕರಪತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ತಿಪ್ಪವ್ವ ಶಿವಪ್ಪ ನಾಯಕ್, ತಾಲೂಕಾ ಮಲೇರಿಯಾ ತಾಂತ್ರಿಕ ಮೇಲ್ವಿಚಾರಕರಾದ ಪ್ರಮೋದ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಮಲ್ಲಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಮೇಶ್, ಆಶಾ ಕಾರ್ಯಕರ್ತೆಯರಾದ ಮಂಜುಳಾ ಹಾಗೂ ಅನ್ನಪೂರ್ಣ ಸೇರಿದಂತೆ ಗ್ರಾಮದ ನಾಗರಿಕರು, ಮುಖಂಡರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
