ಬೆಂಗಳೂರಿನಲ್ಲಿ ಕಾವ್ಯಲೋಕದ ಕೃತಿ ಲೋಕಾರ್ಪಣೆ

Mallikarjun

Kavyaloka Kriti Lokarpane in Bangalore

ಬೆಂಗಳೂರಿನಲ್ಲಿ ಕಾವ್ಯಲೋಕದ ಕೃತಿ ಲೋಕಾರ್ಪಣೆ

ಗಂಗಾವತಿ : ಕಾವ್ಯಲೋಕದ ‘ನೂರೊಂದು ಹೆಜ್ಜೆಗಳು’ ರಾಜ್ಯಮಟ್ಟದ ಕವನ ಸಂಕಲನವನ್ನು ಖ್ಯಾತ ಹಿರಿಯ ಚಿತ್ರನಟಿ ಭವ್ಯ ಮತ್ತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರುಗಳು ಬೆಂಗಳೂರಿನಲ್ಲಿ ಶನಿವಾರ ಲೋಕಾರ್ಪಣೆ ಗೊಳಿಸಿದರು.
ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದ ಶ್ರೀ ಕೃಷ್ಣರಾಜ ಪರಿಷತ್ ಸಭಾಂಗಣದಲ್ಲಿ ವಂದೇ ಮಾತರಂ ಲಲಿತಕಲಾ ಅಕಾಡೆಮಿ ಆಯೋಜಿಸಿದ್ದ ಬಸವ ಜಯಂತಿ , ಕಾಯಕಯೋಗಿ ಬಸವಶ್ರೀ ಹಾಗೂ ಶಿವ ಶರಣೆ ಅಕ್ಕಮಹಾದೇವಿ ರಾಜ್ಯ ಪ್ರಶಸ್ತಿ ಪ್ರದಾನ ಅದ್ದೂರಿ ಸಮಾರಂಭದಲ್ಲಿ ಗಂಗಾವತಿ ಕಾವ್ಯಲೋಕ ಸಂಘಟನೆ ಪ್ರಕಟಿಸಿದ ‘ನೂರೊಂದು ಹೆಜ್ಜೆಗಳು’ ಕವನ ಸಂಕಲನವನ್ನು ಚಿತ್ರನಟಿ ಭವ್ಯ ಮತ್ತು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಲೋಕಾರ್ಪಣೆ ಗೊಳಿಸಿದರು. ಅಲ್ಲದೇ ಗಂಗಾವತಿ ಭಾಗದಿಂದ ರಾಜ್ಯ ಮಟ್ಟದ ಕವನ ಸಂಕಲನ ಹೊರ ತರುತ್ತಿರುವದಕ್ಕೆ ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದರು.
ಇದಕ್ಕೂ ಮೊದಲು ಕಾವ್ಯಲೋಕ ಗೌರವ ಅಧ್ಯಕ್ಷ ಡಾ.ಶಿವಕುಮಾರ ಮಾಲಿ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಕವಿಗೋಷ್ಠಿ ಆಯೋಜನೆ, ಸಂಕಲನ ಪ್ರಕಟಣೆ ಸದುದ್ದೇಶ, ಕವಿ ಕವಯಿತ್ರಿಯರಿಗೆ ವೇದಿಕೆ ಕಲ್ಪಿಸುವುದು ಅಲ್ಲದೇ ರಾಜ್ಯಮಟ್ಟದಲ್ಲಿ ಪ್ರೋತ್ಸಾಹಿಸಿ ಬೆಳೆಸುವ ಕುರಿತು ತಿಳಿಸಿದರು.
ನಂತರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮಾತನಾಡಿ, ಕೆಳಗೆ ಬಿದ್ದವರನ್ನು ಮೇಲೆತ್ತಿದ್ದವರು ಬಸವಣ್ಣನವರು. ಅವರು ಜನಿಸಿದ ನಾಡಲ್ಲಿ ಹುಟ್ಟಿದ ನಾವು ಪುಣ್ಯವಂತರು. 12ನೇ ಶತಮಾನದಲ್ಲಿ ಲಿಂಗವಂತ ಧರ್ಮವನ್ನು ಸ್ಥಾಪಿಸಿದವರು ಬಸವಣ್ಣನವರು. ಬಸವ ತತ್ವ ಹೊಂದಿದ ಲಿಂಗಾಯತ ಜನರು ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರು ಸತ್ಯ, ಕಾಯಕ ಪಾಲಿಸಿ ಸಮಾನತೆ ಜಾರಿಗೆ ತಂದರು. ಪ್ರಶಸ್ತಿಯು ಪ್ರೋತ್ಸಾಹ ಅಷ್ಟೇ, ‌ಸಾಧನೆಗೆ ಮಾರ್ಗ ಎಂದರು.
ಪ್ರಶಸ್ತಿ : ಕಾವ್ಯಲೋಕ ಸಂಘಟನೆ ಗೌರವ ಅಧ್ಯಕ್ಷ ಡಾ.ಶಿವಕುಮಾರ ಮಾಲಿ ಪಾಟೀಲ್ ಅವರಿಗೆ ನಟಿ ಭವ್ಯಾ, ಡಾ.ನಾಗಲಕ್ಷ್ಮೀ ಚೌಧರಿ ಮತ್ತಿತರ ಗಣ್ಯರು ‘ಕಾಯಕಯೋಗಿ ಬಸವಶ್ರೀ’ ಪ್ರಶಸ್ತಿ ಪ್ರದಾನ ಮಾಡಿದರು.
ನಂತರ ರಾಜ್ಯದ ವಿವಿಧ ಭಾಗಗಳ ಸಾಧಕ ಸಾಧಕಿಯರಿಗೆ ಬಸವಶ್ರೀ, ಶಿವ ಶರಣೆ ಅಕ್ಕಮಹಾದೇವಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದೊಡ್ಡ ಬೆಳವಂಗಲದ ದೇವಿ ಉಪಾಸಕಿ ಡಾ.ಅನು ಅಮ್ಮ ಸಾನಿಧ್ಯ ವಹಿಸಿ ಮಾತನಾಡಿದರು. ಸಂಶಿಯ ಫಕೀರಪ್ಪ, ತೋಟಗಾರಿಕೆ ವಿವಿಯ ಡೀನ್ ಡಾ.ಕೆ.ರಾಮಚಂದ್ರ ನಾಯ್ಕ, ಸಮಾಜಸೇವಕ ವಿಶ್ವನಾಥ ಜಿದ್ದಿಬಾಗಿಲ ರೋಣ, ಮಧುರ ಅಶೋಕಕುಮಾರ, ಡಾ.ವೀರಯ್ಯಸ್ವಾಮಿ, ನಿರ್ಮಾಪಕ ಡಾ.ಮಹೇಶಗೌಡ, ಸಂಸ್ಥೆಯ ಮುಖ್ಯಸ್ಥ ವಿರೇಶ ಮುತ್ತಿನಮಠ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಕಾವ್ಯಲೋಕ ಅಧ್ಯಕ್ಷ ಎಂ.ಪರಶುರಾಮ ಪ್ರಿಯ, ಕಾರ್ಯದರ್ಶಿ ಮೈಲಾರಪ್ಪ ಬೂದಿಹಾಳ, ಚುಟುಕು ಕವಿ ಚಿದಾನಂದ ಕೀರ್ತಿ ಉಪಸ್ಥಿತರಿದ್ದರು.

Total Views: 1
Share This Article