ಬಾಬು ಜಗಜೀವನ್ ರಾಮ್ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಸುಧಾರಕ: ಎಸ್. ಸಂಗಮೇಶ್

Mallikarjun
2 Min Read
Babu Jagjivan Ram was a reformer of equality, social justice and human rights: S. Sangamesh

ಬಾಬು ಜಗಜೀವನ್ ರಾಮ್ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಸುಧಾರಕ: ಎಸ್. ಸಂಗಮೇಶ್

ಬೆಂಗಳೂರು, ಏ.5: ಹಸಿರು ಕ್ರಾಂತಿಯ ಹರಿಕಾರ, ಭಾರತ, ದೇಶದ ಮೊಟ್ಟ ಮೊದಲ ದಲಿತ ಸಮುದಾಯದಿಂದ ಹೊರಹೊಮ್ಮಿದ ಮೊದಲ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿಯನ್ನು ವಿಧಾನಸೌಧ ಆವರಣದಲ್ಲಿ ಕರ್ನಾಟಕ ರಾಜ್ಯ ಮಾದಿಗ ಯುವ ಸಮೂಹ ಗೌರವಯುತವಾಗಿ ಆಚರಿಸಿತು. ಯುವ ಸಮೂಹದ ಸಂಯೋಜಕ ಎಸ್. ಸಂಗಮೇಶ್ ಹಾಗೂ ಪದಾಧಿಕಾರಿಗಳು ಬಾಬೂಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್. ಸಂಗಮೇಶ್ ಅವರು, ಬಾಬು ಜಗಜೀವನ್ ರಾಮ್ ಭಾರತೀಯ ರಾಜಕೀಯ ಮತ್ತು ಸಮಾಜ ಪರಿವರ್ತನೆಯ ಇತಿಹಾಸದಲ್ಲಿ ಅಪ್ರತಿಮ ಸ್ಥಾನ ಪಡೆದ ಮಹಾನ್ ನಾಯಕರು ಎಂದು ಹೇಳಿದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ದಲಿತ ಸಮುದಾಯದ ಹಕ್ಕುಗಳ ಹೋರಾಟಗಾರರಾಗಿ, ಅನುಭವಸಂಪನ್ನ ಆಡಳಿತಗಾರರಾಗಿ ಹಾಗೂ ದೇಶದ ಮೊದಲ ದಲಿತ ಉಪಪ್ರಧಾನಿಯಾಗಿ ಅವರು ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ ಎಂದು ತಿಳಿಸಿದರು.

ಮಹಾತ್ಮ ಗಾಂಧೀಜಿ ಅವರ ಚಿಂತನೆಗಳಿಂದ ಪ್ರೇರಿತರಾಗಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಪರವಾಗಿ ಬಾಬೂಜಿ ಜೀವನಪರ್ಯಂತ ಹೋರಾಟ ನಡೆಸಿದರು. ಸಮಾಜದಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ಆಧಾರಿತ ಭೇದಭಾವವನ್ನು ನಿರ್ಮೂಲನೆ ಮಾಡಲು ಅವರು ಮಹತ್ವದ ಪಾತ್ರವಹಿಸಿದರು. ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಪ್ರತಿನಿಧಿತ್ವದಲ್ಲಿ ದಲಿತರಿಗೆ ಹೆಚ್ಚಿನ ಅವಕಾಶಗಳು ದೊರಕುವಂತೆ ಶ್ರಮಿಸಿದ ಅವರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಅದರ ಜೊತೆಗೆ, ದೇಶದ ಕೃಷಿ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಅವರು ಹಸಿರು ಕ್ರಾಂತಿಯ ಹರಿಕಾರರಾಗಿ ಭಾರತದ ಆಹಾರ ಭದ್ರತೆಯನ್ನು ಬಲಪಡಿಸಿದ ಮಹಾನ್ ದಾರಿದೀಪರಾಗಿದ್ದರು. ರೈತರ ಕಲ್ಯಾಣ, ಆಹಾರ ಉತ್ಪಾದನೆ ಹೆಚ್ಚಳ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಇಂದಿಗೂ ಸ್ಮರಣೀಯವಾಗಿದೆ ಎಂದು ಎಸ್. ಸಂಗಮೇಶ್ ಹೇಳಿದರು.

ಬಾಬು ಜಗಜೀವನ್ ರಾಮ್ ಅವರು ಕೇವಲ ರಾಜಕಾರಣಿಯಷ್ಟೇ ಅಲ್ಲ, ಮಹಾನ್ ಸಮಾಜ ಸುಧಾರಕರೂ ಆಗಿದ್ದರು. ಸಮಾಜದ ಹಿಂದುಳಿದ ವರ್ಗಗಳಿಗೆ ಗೌರವಯುತ ಜೀವನ ದೊರಕಬೇಕು ಎಂಬುದು ಅವರ ಪ್ರಮುಖ ಧ್ಯೇಯವಾಗಿತ್ತು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾದಿಗ ಯುವ ಸಮೂಹದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಬಾಂಬೇಕರ, ನಿಂಗರಾಜ ಗೂಳೆ, ಭೀಮಾಶಂಕರ ಬಿಲ್ಲವ, ಮಂಜುನಾಥ ಮರಾಠ, ರಘು ಕಾಮಾಕ್ಷಿಪಾಳ್ಯ ಮತ್ತಿತರರು ಪಾಲ್ಗೊಂಡಿದ್ದರು.

Total Views: 1
Share This Article