ಮದ್ಯಪಾನ ನಿಷೇಧ ಅಪ್ರಸ್ತುತ ಎಂದಿರುವ ಸಚಿವ ಹೆಚ್ ಕೆ ಪಾಟೀಲರ ಹೇಳಿಕೆಗೆ ಖಂಡನೆ

Mallikarjun
1 Min Read

Minister H.K. Patil's statement that alcohol ban is irrelevant is condemned

ಮದ್ಯಪಾನ ನಿಷೇಧ ಅಪ್ರಸ್ತುತ ಎಂದಿರುವ ಸಚಿವ ಹೆಚ್ ಕೆ ಪಾಟೀಲರ ಹೇಳಿಕೆಗೆ ಖಂಡನೆ

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ಕೊಡುವ ಸಂಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯದ ಕಾನೂನು ಸಚಿವರಾದ ಹೆಚ್. ಕೆ. ಪಾಟೀಲರು, “ಮದ್ಯಪಾನ ನಿಷೇಧವು ಅಪ್ರಸ್ತುತವಾಗಿದೆ. ಇದರಿಂದ ರಾಜ್ಯಕ್ಕೆ ವಾರ್ಷಿಕ ೪೦ ಸಾವಿರ ಕೋಟಿ ಆದಾಯವಿದೆ. ಮದ್ಯಪಾನಕ್ಕಿಂತಲೂ ಗಾಂಜಾ, ಅಫೀಮು, ಡ್ರಗ್ ಸೇವನೆಯಿಂದ ತರುಣರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ. ಮದ್ಯಪಾನ ಮಾಡುತ್ತಲೇ 60-65 ವರ್ಷದವರೆಗೂ ಬದುಕಬಹುದು” ಎಂದು ಸಚಿವರೇ ಮದ್ಯಪಾನದ ಪರವಾಗಿ ಮಾತನಾಡಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮೈಮುರಿದು ದುಡಿಯುತ್ತಿರುವ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮದ್ಯಪಾನದ ವ್ಯಸನಕ್ಕೆ ಬಲಿಯಾಗಿ ಅಸಂಖ್ಯಾತ ಕುಟುಂಬಗಳು ಬೀದಿಗೆ ಬರುತ್ತಿರುವುದನ್ನು ಹಾಗೂ ತರುಣರು ಮದ್ಯಪಾನದ ವ್ಯಸನಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ನಿತ್ಯವೂ ಕಾಣುತ್ತಿದ್ದರೂ ಸಹ ಒಂದು ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರೊಬ್ಬರು ಈ ರೀತಿ ಮಾತನಾಡಿರುವುದು ಅತ್ಯಂತ ಖಂಡನೀಯವಾಗಿದೆ.

ಮದ್ಯಪಾನ ಸೇವಿಸಿಯೂ ದೀರ್ಘಕಾಲ ಬದುಕಬಹುದು ಎಂಬ ಸಚಿವರ ಹೇಳಿಕೆ ಯುವಜನತೆಗೆ ತಪ್ಪು ಸಂದೇಶ ನೀಡುತ್ತದೆ. ಮಾತ್ರವಲ್ಲದೇ, ರಾಜ್ಯ ಸರ್ಕಾರ ತನ್ನ ಆದಾಯಕ್ಕಾಗಿ ಜನರ ಜೀವನವನ್ನು ಪಣಕ್ಕಿಡುವುದು ನಾಚಿಕೆಗೇಡಿನ ಸಂಗತಿ. ನಿಜವಾದ ಅಭಿವೃದ್ಧಿ ಎಂದರೆ ಜನರ ಆರೋಗ್ಯ, ಶಿಕ್ಷಣ ಮತ್ತು ಭವಿಷ್ಯವನ್ನು ಕಾಪಾಡುವುದೇ ಹೊರತೂ ವ್ಯಸನಗಳನ್ನು ಪ್ರೋತ್ಸಾಹಿಸುವುದಲ್ಲ.

ಆದ್ದರಿಂದ ಸಚಿವರು ಕೂಡಲೇ ತಮ್ಮ ಹೇಳಿಕೆಯನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳಬೇಕು ಹಾಗೂ ರಾಜ್ಯ ಸರ್ಕಾರ ಮದ್ಯಪಾನ ನಿಷೇಧದ ದಿಕ್ಕಿನಲ್ಲಿ ಗಂಭೀರ ಕ್ರಮ ಕೈಗೊಳ್ಳಬೇಕು. ಅಲ್ಲದೇ ಅಕ್ರಮ ಮದ್ಯ ಮಾರಾಟವನ್ನು ಸಹ ಸಂಪೂರ್ಣವಾಗಿ ತಡೆಗಟ್ಟಬೇಕು ಎಂದು ಎಐಡಿವೈಒ ಕೊಪ್ಪಳ  ಜಿಲ್ಲಾ ಸಮಿತಿಯು  ಸರ್ಕಾರವನ್ನು ಆಗ್ರಹಿಸುತ್ತದೆ.

Total Views: 0
Share This Article