Demand for strict action against illegal liquor sale and ispeet racket in villages
ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ–ಇಸ್ಪೀಟ್ ದಂಧೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಗಂಗಾವತಿ: ತಾಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಮತ್ತು ಇಸ್ಪೀಟ್ (ಜೂಜಾಟ) ದಂಧೆಗೆ ತಕ್ಷಣವೇ ಕಡಿವಾಣ ಹಾಕಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಗಂಗಾವತಿ ನಗರ ಠಾಣೆಯ
ಡಿ ವೈ.ಎಸ್.ಪಿ. ಜೆ.ಎಸ್ ನ್ಯಾಮಗೌಡರ್ ಅವರನ್ನು ಮನವಿ ಸಲ್ಲಿಸುವುದರ ಮೂಲಕ ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಡಾ.ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಖಾದರ್ ಭಾಷಾ, ಮತ್ತು ಗ್ರಾಮದ ಮುಖಂಡರು, ಹಿರಿಯರು ಹಾಗೂ ಮಹಿಳೆಯರು ಒಗ್ಗೂಡಿ, ಸಂಬಂಧಿತ ಅಧಿಕಾರಿ ಜೆ.ಎಸ್. ನ್ಯಾಮಗೌಡರ್ ಅವರಿಗೆ ಮನವಿ ಸಲ್ಲಿಸಿ, ಗ್ರಾಮದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕರ ಜೀವನದಲ್ಲಿ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿದರು.
ಅಕ್ರಮ ಮದ್ಯ ಮಾರಾಟದಿಂದ ಯುವಕರ ಜೀವನ ಹಾಳಾಗುತ್ತಿದ್ದು, ಇಸ್ಪೀಟ್ ದಂಧೆಯಿಂದ ಕುಟುಂಬಗಳಲ್ಲಿ ಆರ್ಥಿಕ ಸಂಕಷ್ಟಗಳು ಹೆಚ್ಚುತ್ತಿವೆ. ಅಲ್ಲದೆ, ಈ ಚಟುವಟಿಕೆಗಳಿಂದ ಗ್ರಾಮದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದರು.
ಕಾನೂನು ಉಲ್ಲಂಘನೆಗೆ ಕಾರಣರಾಗಿರುವವರ ವಿರುದ್ಧ ಕಠಿಣವಾಗಿ ಪ್ರಕರಣ ದಾಖಲಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಅಕ್ರಮ ಮದ್ಯ ಮಾರಾಟವು ಕರ್ನಾಟಕ ಅಬಕಾರಿ ಕಾಯ್ದೆಯಡಿ ಶಿಕ್ಷಾರ್ಹವಾಗಿದ್ದು, ಇಸ್ಪೀಟ್ ದಂಧೆ ಸಾರ್ವಜನಿಕ ಜೂಜಾಟ ನಿಷೇಧ ಕಾಯ್ದೆಗಳಡಿ ಅಪರಾಧವಾಗಿದೆ ಎಂದು ಅವರು ಗಮನಕ್ಕೆ ತಂದರು.
ಇಂತಹ ಅಕ್ರಮ ಚಟುವಟಿಕೆಗಳನ್ನು ತಡೆಯಲು ನಿಯಮಿತ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸುವ ಮೂಲಕ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಮಹಿಳೆಯರು ಸಹ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ, “ಗ್ರಾಮದ ಶಾಂತಿ ಹಾಗೂ ಯುವಜನರ ಭವಿಷ್ಯವನ್ನು ಕಾಪಾಡಲು ತಕ್ಷಣ ಕ್ರಮ ಅಗತ್ಯ” ಎಂದು ಒತ್ತಾಯಿಸಿದರು.
