ರಾಷ್ಟ್ರಮಟ್ಟದ 7ನೇ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ ಸಮ್ಮೇಳನ

Mallikarjun
2 Min Read

7th National Medical Lab Technologist Conference




ರಾಷ್ಟ್ರಮಟ್ಟದ 7ನೇ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ ಸಮ್ಮೇಳನ


ವೈದ್ಯಕೀಯ ಪ್ರಯೋಗ ಶಾಲಾ ತಂತ್ರಜ್ಞಾನ ವಲಯದಲ್ಲಿ ಸೂಕ್ತ ನಿಯಂತ್ರಣ ಕ್ರಮಗಳ ಜಾರಿಗೆ ಕ್ರಮ: ಸಚಿವ ದಿನೇಶ್ ಗುಂಡೂರಾವ್


ಬೆಂಗಳೂರು,ಮಾ.29: ಪ್ರಯೋಗ ಶಾಲಾ ತಾಂತ್ರಿಕ ವಲಯದಲ್ಲಿ ಸೂಕ್ತ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದ ಕಿಮ್ಸ್ ಆಸ್ಪತ್ರೆ ಆವರಣದ ಕುವೆಂಪು ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ ಅಸೋಸಿಯೇಷನ್ ನಿಂದ ರಾಷ್ಟ್ರಮಟ್ಟದ 7ನೇ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯ ವ್ಯವಸ್ಥೆಯಲ್ಲಿ ಲ್ಯಾಬ್ ಟೆಕ್ನೀಷಿಯನ್ಸ್ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಚಿಕಿತ್ಸೆಯಲ್ಲಿ ತಂತ್ರಜ್ಞರು ನಿಖರತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಯೋಗಾಲಯ ತಂತ್ರಜ್ಞರ ಶ್ರೇ ಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಈ ವಲಯದಲ್ಲಿ ಸೂಕ್ತ ನಿಯಂತ್ರಣ ಕ್ರಮಗಳು ಮುಖ್ಯವಾಗಿದ್ದು, ಈ ದಿಸೆಯಲ್ಲಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಖಾಸಗಿ ವಲಯದಲ್ಲಿ ಪ್ರಯೋಗಾಲಯ ತೆರೆಯಲು ಸೂಕ್ತ ಮಾನದಂಡ ಇರಬೇಕಾಗುತ್ತದೆ. ವ್ಯಾಪಾರದ ದೃಷ್ಟಿಯಿಂದ ಪ್ರಯೋಗಾಲಯ ಆರಂಭಿಸಲು ಅವಕಾಶ ನೀಡುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸಂಘ ನೀಡಿರುವ ಮನವಿಗಳ ಬಗ್ಗೆ ಪ್ರತ್ಯೇಕ ಸಭೆ ಕರೆದು ಚರ್ಚಿಸಿ ಸಾಧ್ಯವಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇವೆ. ಮುಂದಿನ ತಿಂಗಳು ಸಂಘದ ಜೊತೆಯೂ ಪ್ರತ್ಯೇಕವಾಗಿ ಸಭೆ ಕರೆಯುತ್ತೇವೆ ಎಂದರು.
ಕರ್ನಾಟಕ ರಾಜ್ಯ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ವಿ ವೆಂಕಟಸ್ವಾಮಿ ಮಾತನಾಡಿ, ಲ್ಯಾಬ್ ಟೆಕ್ನೀಷಿಯನ್ಸ್ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅರೆ ವೈದ್ಯಕೀಯ ಸಿಬ್ಬಂದಿಯ ಪಾತ್ರ ಅತ್ಯಂತ ಅಗತ್ಯವಾಗಿದೆ. ಈ ಸಮ್ಮೇಳನದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕಂಪೆನಿಗಳು ಹೊಸ ಅವಿಷ್ಕಾರದ ಉಪಕರಣಗಳನ್ನು ಪ್ರದರ್ಶಿಸಿದ್ದು, ಇದರಿಂದ ರೋಗಿಗಳಿಗೆ ಗುಣಮಟ್ಟದ ವರದಿ ನೀಡಲು ಸಾಧ್ಯವಾಗಲಿದೆ. ರೋಗಿಗಳ ಜೀವ ಉಳಿಸಲು ಸಾಕಷ್ಟು ಪ್ರಯತ್ನ ಮಾಡುತ್ತೇವೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ಪ್ರಯೋಗ ಶಾಲಾ ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಾಚಾರ್ ಮಾತನಾಡಿ, ಅರೆ ವೈದ್ಯಕೀಯ ಸಿಬ್ಬಂದಿಯ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಈ ವಲಯ ಮತ್ತಷ್ಟು ಸಂಘಟಿತವಾಗಬೇಕು. ಈ ಸಮ್ಮೇಳನದಲ್ಲಿ ವೈವಿಧ್ಯಮಯ ವೈಜ್ಞಾನಿಕ ವಿಚಾರ ಸಂಕಿರಣ ನಡೆಯಲಿದೆ ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿ ಡಾಕ್ಟರ್ ಬಿ.ಸಿ ಭಗವಾನ್, ಸಂಘದ ಪ್ರದಾನ ಕಾರ್ಯದರ್ಶಿ ಸತೀಶ್ ಕುಮಾರ್, ಉಪಾಧ್ಯಕ್ಷ ಶಿವಶಂಕರ್ ಪಿ, ಕಾರ್ಯದರ್ಶಿ ನಾರಾಯಣಸ್ವಾಮಿ, ಸಂಘಟನಾ ಕಾರ್ಯದರ್ಶಿ ಬಿ.ಡಿ. ಸುರೇಶ್, ಶಿವಮೂರ್ತಿ, ರೆಡ್ಡಿ, ಖಜಾಂಚಿ ಸುರೇಶ್ ಕೆ, ಯತಿರಾಜ್ ಮತ್ತಿತರರು ಭಾಗವಹಿಸಿದ್ದರು.

Total Views: 0
Share This Article