
A torchlight procession led by farmers, workers and progressive organizations in Koppal in support of the All India General Strike on February 12.
ಫೆಬ್ರುವರಿ 12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ , ಕೊಪ್ಪಳದಲ್ಲಿ ರೈತ -ಕಾರ್ಮಿಕ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪಂಜಿನ ಮೆರವಣಿಗೆ.

ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳು, ನಾಲ್ಕು ಲೇಬರ್ ಕೋಡ್‌ಗಳು, ಖಾಸಗೀಕರಣ ಹಾಗೂ ಕಾರ್ಮಿಕ–ರೈತ ವಿರೋಧಿ ಕಾಯ್ದೆಗಳ ವಿರುದ್ಧ ಫೆಬ್ರವರಿ 12ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಇಂದು (ಫೆ.10) ಸಂಜೆ 5.30ಕ್ಕೆ ಕೊಪ್ಪಳದಲ್ಲಿ ಪಂಜಿನ ಮೆರವಣಿಗೆ ನಡೆಯಿತು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆ ಸಿ ಟಿ ಯು) ಹಾಗೂ ಸಂಯುಕ್ತ ಹೋರಾಟ ಸಮಿತಿ ( ಸಂಯುಕ್ತ ಹೋರಾಟ ಕರ್ನಾಟಕ) ನೇತೃತ್ವದಲ್ಲಿ ಆಯೋಜಿಸಲಾದ ಈ ಪಂಜಿನ ಮೆರವಣಿಗೆ ಕೇಂದ್ರೀಯ ಬಸ್ ನಿಲ್ದಾಣದ ಕನಕದಾಸ ವೃತ್ತದಿಂದ ಅಶೋಕ ವೃತ್ತದವರೆಗೆ ನಡೆಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಕಾರ್ಮಿಕರು, ರೈತರು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳದ ಹಿರಿಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಅವರು ಮಾತನಾಡಿ, ಸಾರ್ವತ್ರಿಕ ಮುಷ್ಕರದ ಹಿನ್ನಲೆ, ದೇಶದ ಕಾರ್ಮಿಕರು ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳು, ಉದ್ಯೋಗ ಭದ್ರತೆ ಕೊರತೆ, ಬೆಲೆ ಏರಿಕೆ ಮತ್ತು ಕಾರ್ಮಿಕ ಹಕ್ಕುಗಳ ಮೇಲೆ ನಡೆಯುತ್ತಿರುವ ದಾಳಿಗಳ ಕುರಿತು ವಿವರಿಸಿದರು. ದುಡಿಯುವ ವರ್ಗದ ಒಗ್ಗಟ್ಟೇ ಇಂತಹ ಜನವಿರೋಧಿ ನೀತಿಗಳಿಗೆ ತಕ್ಕ ಉತ್ತರ ಎಂದು ಅವರು ಹೇಳಿದರು.
ಪಂಜಿನ ಮೆರವಣಿಗೆಯಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರಾದ ಡಿ.ಎಚ್. ಪೂಜಾರ, ಶರಣು ಗಡ್ಡಿ, ಬಸವರಾಜ್ ಶೀಲವಂತರ್, ಸುಂಕಪ್ಪ ಗದಗ್, ತುಕಾರಾಂ ಪಾತ್ರೋಟಿ, ಮಹದೇವಪ್ಪ, ಕೆ.ಬಿ. ಗೋನಾಳ್, ಮಹಾಂತೇಶ ಕೊತಬಾಳ, ವೈ. ಸತ್ಯನಾರಾಯಣ, ಶಿವಪ್ಪ ಹಡಪದ, ಮುಖಪ್ಪ ಮೇಸ್ತ್ರಿ, ಸಂಜಯ್ ದಾಸ್, ರಾಮಲಿಂಗ ಸ್ವಾಮಿ, ಗವಿಸಿದ್ದ ಹಲಗಿ, ಶರಣು ಶೆಟ್ಟರ್, ಡಿ.ಎಂ. ಬಡಿಗೇರ, ಎಸ್.ಎ. ಗಫಾರ್, ಬಾಲಾಜಿ, ಜಮಾಲ್ ದಪೆದಾರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಮಹಿಳೆಯರು ಹಾಗೂ ಕಾರ್ಮಿಕರು ಭಾಗವಹಿಸಿದ್ದರು.
ಈ ಮೂಲಕ ಫೆಬ್ರವರಿ 12ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಹೆಚ್ಚಿನ ಜನಬೆಂಬಲ ಕಲೆಹಾಕುವ ಹಾಗೂ ದುಡಿಯುವ ವರ್ಗದ ಹೋರಾಟವನ್ನು ಬಲಪಡಿಸುವ ಸಂದೇಶವನ್ನು ಪಂಜಿನ ಮೆರವಣಿಗೆಯ ಮೂಲಕ ನೀಡಲಾಯಿತು.




