
ಗಂಗಾವತಿ: ಇಸ್ಲಾಂಪುರದ ಆ ‘ಕತ್ತಲ’ ಗಲ್ಲಿಯಲ್ಲಿ ನಡೆದಿದ್ದೇನು?: ಗುರಾಯಿಸಿದ್ರೆ ಬೀಳುತ್ತೆ ಚಾಕು!

Gangavathi: What happened in that 'dark' alley in Islampur?: If you scream, the knife will fall!

ಗಂಗಾವತಿ: ನಗರದ ಹೃದಯಭಾಗದಲ್ಲಿ ಬುಧವಾರ ಸಂಜೆ ಏಳೂವರೆ ಗಂಟೆಯ ಸುಮಾರಿನ ಸಮಯ ಆ ಇಸ್ಲಾಂಪುರ ಬಳಿಯ ಮಸೀದಿಯ ಮುಂಭಾಗ ಮತ್ತು ಹಿಂಭಾಗ ವಾತಾವರಣ ಯಾವಾಗಲೂ ಗಿಜಿಗುಟ್ಟಿರುತ್ತೆ, ಆದರೆ ಆವತ್ತು ಅಲ್ಲಿ ‘ಸಾಮಾನ್ಯ’ವಾದುದು ಯಾವುದೂ ಇರಲಿಲ್ಲ. ಗಾಳಿಯಲ್ಲಿ ಒಂದು ರೀತಿಯ ಅನಾಹುತದ ವಾಸನೆಯಿತ್ತು.
ಅಲ್ಲಿ ಅತ್ತ ಇತ್ತ ಓಡಾಡುತ್ತಿದ್ದ 21 ವರ್ಷದ ಆ ಬಡಪಾಯಿ ಯುವಕನಿಗೆ ಗೊತ್ತಿರಲಿಲ್ಲ, ತನ್ನ ಮೈಮೇಲೆ ಬೀಳಲಿರುವ ಆ ಮಸೆದ ಚಾಕುಗಳು ಕೇವಲ ‘ನೋಟ’ದ ದ್ವೇಷಕ್ಕೆ ಕಾದಿವೆ ಎಂದು!
ಹೌದು, ನೀವು ನಂಬಲೇಬೇಕು. ಕೇವಲ ‘ಗುರಾಯಿಸಿ ನೋಡಿದ’ ಎಂಬ ಕ್ಷುಲ್ಲಕ ಕಾರಣಕ್ಕೆ ಹಸಿಬಿಸಿ ರಕ್ತ ಕುದಿಯುವ ಅಪ್ರಾಪ್ತರ ಒಂದು ಪುಂಡರ ಗುಂಪೊಂದು ಗ್ಯಾಂಗ್ ಕಟ್ಟಿಕೊಂಡು ಆ ಯುವಕನ ಮೇಲೆ ಮುಗಿಬಿದ್ದಿದ್ದರು, ಆ ಮಸೀದಿಯ ಹಿಂಭಾಗದ ಕತ್ತಲಲ್ಲಿ ಮಿಂಚಿದ್ದು ಹರಿತವಾದ ಚಾಕುಗಳು, ರಕ್ತ ಚಿಮ್ಮಿತು, ಛೀರಾಟ, ಕಿರುಚಾಟ ಕೇಳಿತು, ಅಲ್ಲಿಗೆ ಆ ಗ್ಯಾಂಗ್‌ನ ಒಂದು ಕ್ರೌರ್ಯ ಅಧ್ಯಾಯ ಮುಗಿದುಹೋಗಿತ್ತು. ಪೋಲಿಸರ ಕಣ್ತಪ್ಪಿಸುವ ‘ಸುರಕ್ಷಿತ’ ಪಾನ್ ಬೀಡಾ ಅಂಗಡಿ ಸ್ಥಳ ಅಕ್ಷರಶಃ ಅಲ್ಲೋಲ ಕಲ್ಲೋಲ ಆಗಿತ್ತು.
ರಕ್ತದ ದಾಹ ಮತ್ತು ಆ ‘ಕ್ರಿಮಿನಲ್’ ಕಿಡ್ಸ್!
ಅಸಲಿಗೆ ಅಲ್ಲಿ ನಡೆದಿದ್ದು ಅಂತಿಂಥ ದಾಳಿಯಲ್ಲ. ಅದು ಹದಿಹರೆಯದ ರಕ್ತ ಕುದಿಯುವ ಹರೆಯದವರು ಮಾಡಿಕೊಂಡ ‘ಕ್ರೌರ್ಯದ ಗುಂಪು’. ಆ 21 ವರ್ಷದ ಯುವಕ ಸುಮ್ಮನೆ ದಾರಿಯಲ್ಲಿ ಹೋಗುತ್ತಿದ್ದಾಗ ಎದುರಾದ ಆ ಹುಡುಗರ ಕಣ್ಣಲ್ಲಿ ಇದ್ದಿದ್ದು ಸಂಸ್ಕಾರವಲ್ಲ, ಸಂಹಾರದ ಅಮಲು. “ಏನೋ… ಯಾಕೋ ಹಂಗೆ ನೋಡ್ತೀಯಾ?” ಎಂಬ ಒಂದು ಮಾತು ಮಸೀದಿಯ ಹಿಂಭಾಗದ ಸಂದುಗಳಲ್ಲಿ ಪ್ರತಿಧ್ವನಿಸುವಷ್ಟರಲ್ಲಿ ಕೈಗಳು ಸೊಂಟದ ಪಕ್ಕದಲ್ಲಿದ್ದ ಲಾಂಗ್‌ಗಳಿಗೆ, ಚಾಕುಗಳಿಗೆ ಹೋಗಿದ್ದವು. ಇವತ್ತು ಗಂಗಾವತಿಯ ಬೀದಿಗಳಲ್ಲಿ ಸಂಜೆ ಆಯಿತೆಂದರೆ ಸಾಕು, ಇಂತಹ ‘ನೋಡೋ… ಹೊಡೆಯೋ’ ಗ್ಯಾಂಗ್‌ಗಳದ್ದೇ ದರ್ಬಾರು.
ಖಾಕಿ ವರ್ದಿಯ ಕಣ್ತಪ್ಪಿನ ಆಟ
ಪೋಲಿಸ್ ಸ್ಟೇಷನ್‌ನಿಂದ ಕೂಗಳತೆಯ ದೂರದಲ್ಲೇ ಈ ರಕ್ತದೋಕುಳಿ ನಡೆದರೂ, ಅಲ್ಲಿನ ಪಾನ್ ಬೀಡಾ ಅಂಗಡಿಗಳ ಮುಂದೆ ನಿಂತು ಹೊಗೆ ಬಿಡುತ್ತಾ ‘ಪ್ಲಾನ್’ ಮಾಡುವ ಈ ಕ್ರಿಮಿನಲ್ ಕೂಸುಗಳಿಗೆ ಕಾನೂನಿನ ಭಯ ಕಿಂಚಿತ್ತೂ ಇದ್ದಂತಿಲ್ಲ. ಒಬ್ಬನ ಮೇಲೆ ಹತ್ತು ಜನ ಮುಗಿಬೀಳುವ ಈ ಹೇಡಿತನದ ಕೃತ್ಯಕ್ಕೆ ಈಗ ‘ಸಿನೆಮಾ ಸ್ಟೈಲ್’ ಮೆರುಗು ಬೇರೆ. ಆವತ್ತು ಆ ಯುವಕ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ, ಸುತ್ತಮುತ್ತಲಿದ್ದವರಿಗೆ ಅದು ಕೇವಲ ಒಂದು ‘ಸಿನೆಮಾ ಸೀನ್’ ತರಹ ಕಂಡಿರಬಹುದು.
ಗಂಗಾವತಿ ಜನತೆ ಜಾಗ್ರತೆ!
ಇವತ್ತು ಆ 21 ವರ್ಷದ ಯುವಕ ಆಸ್ಪತ್ರೆಯ ಬೆಡ್ ಮೇಲೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಆದರೆ ಅವನನ್ನು ಅಷ್ಟು ಬರ್ಬರವಾಗಿ ಇರಿದ ಆ ‘ಮಕ್ಕಳು’ ಈಗ ಎಲ್ಲಿದ್ದಾರೆ? ಕಾನೂನಿನ ಕಣ್ಣು ತಪ್ಪಿಸಿ ಯಾವ ಮೂಲೆಯಲ್ಲಿ ಮತ್ತೆ ಚಾಕು ಮಸೆಯುತ್ತಿದ್ದಾರೋ ಗೊತ್ತಿಲ್ಲ. ಗಂಗಾವತಿಯ ಜನರೇ, ಕತ್ತಲ ಗಲ್ಲಿಗಳಲ್ಲಿ ಓಡಾಡುವಾಗ ಹುಷಾರು. ಅಲ್ಲಿ ಕಾನೂನಿಗಿಂತ ಹೆಚ್ಚಾಗಿ ಚಾಕುಗಳೇ ಮಾತಾಡುತ್ತವೆ. ಗುರಾಯಿಸಿದರೆ ಸಾಕು, ನಿಮ್ಮ ಎದೆಗೂ ಒಂದು ಚಾಕು ಇಳಿದರೂ ಅಚ್ಚರಿಯಿಲ್ಲ!
ಅಂದು ಅದೇ ಸ್ಥಳದಲ್ಲಿ ಒಂದು ಡಿಆರ್ ವ್ಯಾನ್, ಒಂದು ಬುಲೆರೋ, ಹತ್ತಾರು ಪೊಲೀಸ್ ಸಿಬ್ಬಂದಿಗಳ ಜೊತೆ ಒಬ್ಬ ಪಿಎಸ್ಐ ಸಹ ಕಾರ್ಯನಿರತರಾಗಿದ್ದರೂ ಸಹ ಅವರ ಅಲ್ಲಿ ಮಾಡುತ್ತಿರುವುದಾದರೂ ಏನು ಎಂಬ ಪ್ರಶ್ನೆ ಬಲವಾಗಿ ಕೇಳಿಬರುತ್ತಿತ್ತು!
ಇರಲಿ ಬಿಡಿ ಇಷ್ಟೆಲ್ಲಾ ಘಟನೆ ನಡೆದೂ ಸಹ ನಗರ ಠಾಣೆಯಲ್ಲಿ ಒಂದು ಪ್ರಕರಣವೂ ದಾಖಲಾಗಿಲ್ಲ, ಆ ಬಾಲಕರನ್ನು, ಅಥವಾ ಅವರ ಪಾಲಕರನ್ನೂ ವಿಚಾರಣೆ ನಡೆಸಿಲ್ಲ, ಗಾಯಾಳುವಿಗೆ ಸಾಂತ್ವಾನದ ಒಂದು ಮಾತೂ ಸಹ ಇಲ್ಲಿಯವರೆಗೂ ಯಾರು ಹೇಳಿಲ್ಲ.




