Meeting with officials Notice to make necessary preparations for Republic Day celebrations
ರಾಯಚೂರು ಜನವರಿ 16 (ಕರ್ನಾಟಕ ವಾರ್ತೆ): ಜನವರಿ 26ರಂದು ಶಿಷ್ಟಾಚಾರದಂತೆ ಗಣರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ದತೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನವರಿ 16ರ ಗುರುವಾರ, ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣರಾಜ್ಯೋತ್ಸವದ ಮುಖ್ಯ ಕಾರ್ಯಕ್ರಮವು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಬೆಳಿಗ್ಗೆ 9 ಗಂಟೆಗೆ ಜಿಲ್ಲಾಡಳಿತದಿಂದ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯ ಭಾಗವಹಿಸಬೇಕು ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಮಹಾತ್ಮ ಗಾಂಧೀಜಿ ಕ್ರೀಡಾಂಗಣದ ಪಕ್ಕದ ಮಹಾತ್ಮ ಗಾಂಧೀಜಿ ಪುತ್ಥಳಿ ಬಳಿಯ ಪ್ರಾಂಗಣದಲ್ಲಿ
ಶಾಮಿಯಾನ್ ಅಳವಡಿಸಿ ಸಿದ್ದತೆ ಮಾಡಬೇಕು. ಕ್ರೀಡಾಂಗಣದಲ್ಲಿ ಸ್ವಚ್ಛತೆ ಇರುವಂತೆ, ನೀರನ್ನು ಸಿಂಪಡಿಸಿ ಧೂಳು ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಅಂದು ಜಿಲ್ಲಾದ್ಯಂತ ಎಲ್ಲಾ
ಶಾಲಾ-ಕಾಲೇಜುಗಳು ಮತ್ತು ಕಚೇರಿಗಳಲ್ಲಿ ಹಬ್ಬದ ಸಂಭ್ರಮ ಕಾಣಬೇಕು. ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಬೇಕು ಎಂದರು.
ರಾಯಚೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದಲ್ಲಿ ಶುಚಿತ್ವ ಕಾಣುವಂತೆ ಎಲ್ಲಾ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು. ಜನವರಿ 25 ಹಾಗೂ 26ರಂದು ನಗರದ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡಬೇಕು ಎಂದರು.
ಆಹ್ವಾನ ಪತ್ರಿಕೆ ಮುದ್ರಣ ಮತ್ತು ವಿತರಣೆ ಆಗಬೇಕು. ಕಾರ್ಯಕ್ರಮವು ಅಚ್ಚುಕಟ್ಟಾಗಿ
ಶಿಷ್ಟಾಚಾರದಂತೆ ನಡೆಯುವಂತಾಗಬೇಕು. ಶಿಸ್ತುಬದ್ಧವಾಗಿ ವೇದಿಕೆ ನಿರ್ಮಾಣವಾಗಬೇಕು. ಹೂಕುಂಡಗಳಿಂದ ವೇದಿಕೆಯನ್ನು ಅಲಂಕರಿಸಬೇಕು ಎಂದು ಸೂಚನೆ ನೀಡಿದರು.
ಧ್ವಜಾರೋಹಣ ಪ್ರಯುಕ್ತ ಪಥ ಸಂಚಲನವು ಅಚ್ಚುಕಟ್ಟಾಗಿ ನಡೆಯಬೇಕು. ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ, ಅಗ್ನಿಶಾಮಕ ದಳ ಸೇರಿದಂತೆ ಕವಾಯತು ತಂಡಗಳನ್ನು ರಚಿಸಬೇಕು. ನುರಿತ ವೈದ್ಯರನ್ನು ಒಳಗೊಂಡ ಚಿಕಿತ್ಸಾ ಆಂಬುಲೆನ್ಸ್, ಅಗ್ನಿಶಾಮಕ ವಾಹನ, ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಶಿಷ್ಟಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸುವುದು ಸೇರಿದಂತೆ ಎಲ್ಲ ರೀತಿಯ ಅಗತ್ಯ ಸಿದ್ಧತೆಗೆ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು, ಬೇರೆ ಬೇರೆ ಇಲಾಖೆಯ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದರು.
ಇದೇ ಸಂದರ್ಭದಲ್ಲಿ ಡಿವೈಎಸ್ಪಿ ಪ್ರಮಾನಂದ ಎಸ್.ಘೋಡಕೆ, ಜಿಲ್ಲಾ ಕೌಶ್ಯಲಾಭಿವೃದ್ಧಿ ಅಧಿಕಾರಿ ಜಿ.ಯು.ಹುಡೇದ, ಆಯುಷ್ ಇಲಾಖೆಯ ಅಧಿಕಾರಿ ಡಾ.ಶಂಕರಗೌಡ ಎಸ್.ಪಾಟೀಲ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕಾಳಪ್ಪ ಬಡಿಗೇರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿರೇಶ್ ನಾಯಕ, ಪಶು ಸಂಗೋಪನಾ ಇಲಾಖೆಯ ನಿರ್ದೇಶಕರಾದ ಅಶೋಕ ಕೋಲಕಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ನವೀನ್ ಕುಮಾರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಮಹ್ಮದ್ ಅಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.