Sanehalli Guru’s stance is welcome
ಮಠ ಪೀಠ ಪರಂಪರೆಯ ಹೆಸರಿನ ಮೇಲೆ ಕರ್ನಾಟಕ ಮಠಾಧೀಶರು ಬಸವಾದಿ ಶರಣರ ಮೇಲೆ ನಡೆಸಿದ ಅತ್ಯಾಚಾರ, ಅನ್ಯಾಯ ಕಂಡಾಗಲೆಲ್ಲ ನನಗೆ ಅವರ ಮೇಲೆ ಕೆಂಡದಂಥ ಕೋಪ ಉಕ್ಕಿ ಬರುತ್ತದೆ. ಆದರೆ ಕೆಲವೇ ಜನ ಮಠಾಧೀಶರ ಕಂಡರೆ ನನ್ನ ಸಿಟ್ಟೆಲ್ಲ ಜರ್ ಎಂದು ಇಳಿದು ಹೋಗಿ ಅವರ ಬಗ್ಗೆ ಪ್ರೀತಿ ಹುಟ್ಟುತ್ತದೆ. ಇಂಥ ಅಪರೂಪದ ಮಠಾಧೀಶರಲ್ಲಿ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ಚಾಮೀಜಿಯವರೂ ಒಬ್ಬರು.
ನ್ಯಾಯ ನಿಷ್ಠುರಿ ಶರಣ ದಾಕ್ಷಿಣ್ಯಪರನಲ್ಲ,ಲೋಕ ವಿರೋಧಿ ಶರಣ ಯಾರಿಗೂ ಹೆದರಲಾರ ಎನ್ನುವಂತೆ ಅವರು ಬಸವಾದಿ ಶರಣರ ಆಶಯಗಳನ್ನು ಅವರು ಯಾರ ಮುಲಾಜಿಗೂ ಒಳಗಾಗದೆ ಹೇಳುತ್ತಲೇ ಇರುತ್ತಾರೆ. ಪುಸ್ತಕಗಳ ಮೂಲಕ, ಭಾಷಣಗಳ ಮೂಲಕವೂ ಅವರು ಸದಾ ಕ್ರೀಯಾಶೀಲರು. ಒಬ್ಬ ಪತ್ರಕರ್ತ- ಬರಹಗಾರನಾಗಿ ಅವರನ್ನು ಮೆಚ್ಚಿ ಅನೇಕ ಸಲ ಬರೆದಿದ್ದೇನೆ.
ತತ್ವ ನಿಷ್ಠವಾದ ಅವರ ಮಾತು, ವಚನ ಸಾಹಿತ್ಯದ ಸತತ ಅಧ್ಯಯನ ಪರಿಣಾಮ ಅವರೊಬ್ಬ ಗಟ್ಟಿ ಬರಹಗಾರರಾಗಿ- ಭಾಷಣಕಾರರಾಗಿ ರೂಪುಗೊಂಡಿದ್ದಾರೆ. ಈಗಾಗಲೆ ವಿವೇಕವಂತರು, ಸುಪ್ರಿಂಕೋರ್ಟ್ ನ್ಯಾಯಾಧೀಶರು ಬಲ್ಲಂತೆ ಹಿಂದೂ ಒಂದು ಧರ್ಮ ಅಲ್ಲವೇ ಅಲ್ಲ. ಸಿಂಧೂ ನದಿನ ತಟದಲ್ಲಿ ವಾಸಿಸುವವ ಎಲ್ಲರೂ ಹಿಂದುಗಳು ಅಂದರೆ ಯಾರ ತಕರಾರು ಅಲ್ಲ.
ಹಲವು ಜನ ಯಥಾಸ್ಥಿತಿವಾದಿಗಳು, ಮನುವಾದಿಗಳು ಸತ್ಯವನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ. ಬಸವಣ್ಣನವರು ಕಟ್ಟಿದ ಲಿಂಗಾಯತ ಧರ್ಮ ಅದು ಕಂದಾಚಾರ ಮೂಢನಂಬಿಕೆಗಳನ್ನು ಸಾರಾ ಸಗಟಾಗಿ ತಿರಸ್ಕರಿಸುತ್ತದೆ. ಮಾನವೀಯತೆಯನ್ನು ಎತ್ತಿ ಹಿಡಿಯುತ್ತದೆ. ಮೌಢ್ಯ ಕಂದಾಚಾರ, ಯಥಾಸ್ಥಿತಿವಾದವನ್ನು ಎತ್ತಿ ಹಿಡಿಯುವ ವೇದ ಆಗಮ ಪುರಾಣ ಶಾಸ್ತ್ರ ಇತ್ಯಾದಿಗಳನ್ನೆಲ್ಲ ಶರಣರು ಸಾರಾಸಗಟಾಗಿ ಟೀಕಿಸಿದ್ದಾರೆ.
ಆದರೆ ವೇದ ಭಂಜಕ ಬಸವಣ್ಣನವರ ಧರ್ಮದಲ್ಲಿ ವೇದಮೂರ್ತಿಗಳಂಥ ನಾಟಕಕಾರರೂ ಸಿಗುತ್ತಾರೆ. ವಚನಗಳ ಅಧ್ಯಯನವಿಲ್ಲದ ಹಲವರು ಮಠಾಧೀಶ ಜಗದ್ಗುರುಗಳು ಆಗಿದ್ದಾರೆ. ವಚನಾನಂದರು ಹೆಸರಿನಲ್ಲಿ ಮಾತ್ರ, ವಚನಗಳ ಪಾಲಕರಂತೆ ಕಾಣುತ್ತಾರೆ. ಅಸಲಿಗೆ ಅವರು ವೇದಭಂಜಕ ಬಸವಣ್ಣನವರನ್ನು ವಿರೂಪಗೊಳಿಸಿ, ತಾವು ಹೇಳಿದ್ದೆ ಸತ್ಯ ಎಂಬ ಉಮೇದಿನಲ್ಲಿದ್ದಾರೆ.
ಇಂಥವರು ಹೆಜ್ಜೆ ಹೆಜ್ಜೆಗೂ ಸಿಕ್ಕುತ್ತಾರೆ. ಇವರು ಪೀಠದಿಂದ ದೊಡ್ಡವರಾಗಬಹುದೆ ಹೊರತು, ಓದಿನ ಆಳ ಹರವನ್ನು, ಅನುಭಾವ ಉಳ್ಳವರಲ್ಲ. ಪೂಜ್ಯ ಶ್ರೀ ಪಂಡಿತಾರಾಧ್ಯರು ಸತ್ಯವಾದ ಸ್ಪುಟವಾದ ಮಾತನ್ನು ಹೇಳಿದ್ದಾರೆ ಹೊರತು, ಅವರು ಯಾರನ್ನೋ ಮೆಚ್ಚಿಸುವ ಮಾತನ್ನು ಹೇಳಿಲ್ಲ.
ಹಾಗಾಗಿ ನಾನು ಪಂಡಿತಾರಾಧ್ಯರೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತೇನೆ. ಸತ್ಯದ ಪಕ್ಷಪಾತಿಗಳೆಲ್ಲರೂ ಅವರ ಪರ ಎಂಬುದನ್ನು ನಾವು ನಿರೂಪಿಸಬೇಕಿದೆ.
ವಿಶ್ವಾರಾಧ್ಯ ಸತ್ಯಂಪೇಟೆ