
Allegations of discriminatory policy by officials in road widening!
ರಸ್ತೆ ಅಗಲೀಕರಣದಲ್ಲಿ ಅಧಿಕಾರಿಗಳತಾರತಮ್ಯ ನೀತಿ ಆರೋಪ!
ಬಡವರ ಕಟ್ಟಡಗಳಿಗೆ ಮಾತ್ರ ತೆರವು ಭಾಗ್ಯವೇ? ಪ್ರಭಾವಿಗಳ ಕಟ್ಟಡಗಳಿಗೆ ರಕ್ಷಣೆ ಏಕೆ?
ಗಂಗಾವತಿ: ನಗರದ ಬಸವೇಶ್ವರ ವೃತ್ತದಿಂದ ಸಾಯಿನಗರದವರೆಗೆ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ನಗರದ ಅಭಿವೃದ್ಧಿ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಈ ಕಾರ್ಯ ಸ್ವಾಗತಾರ್ಹವಾಗಿದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಬಡವರು ಮತ್ತು ಪರಿಶಿಷ್ಟ ಜಾತಿಯ ಜನರ ಕಟ್ಟಡಗಳನ್ನೇ ಗುರಿಯಾಗಿಸಿಕೊಂಡು, ಪ್ರಭಾವಿಗಳ ಕಟ್ಟಡಗಳನ್ನು ತೆರವುಗೊಳಿಸದೆ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಕುರಿತು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಅವರು ಅಧಿಕಾರಿಗಳ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ನಗರದ ರಸ್ತೆ ಅಗಲೀಕರಣಕ್ಕೆ ಯಾರ ವಿರೋಧವೂ ಇಲ್ಲ. ನಗರದ ಅಭಿವೃದ್ಧಿ, ವಾಹನ ಸಂಚಾರದ ಸುಗಮತೆ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಅಗಲೀಕರಣ ಅತ್ಯಗತ್ಯ. ಆದರೆ ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ಬಡವರು ಮತ್ತು ದಲಿತರಿಗೆ ಮಾತ್ರ ಕಾನೂನಿನ ಬಿಸಿ ತಟ್ಟಬೇಕೇ? ಪ್ರಭಾವಿ ವ್ಯಕ್ತಿಗಳ ಕಟ್ಟಡಗಳಿಗೆ ಮಾತ್ರ ವಿನಾಯಿತಿ ನೀಡಲಾಗುತ್ತಿದೆಯೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ರಸ್ತೆ ಅಗಲೀಕರಣದ ವ್ಯಾಪ್ತಿಗೆ ಬರುವ ಬಡವರು ಹಾಗೂ ಪರಿಶಿಷ್ಟ ಜಾತಿಯ ಜನರ ಕಟ್ಟಡಗಳನ್ನು ತೆರವುಗೊಳಿಸುವ ಅಧಿಕಾರಿಗಳು, ಅದೇ ವ್ಯಾಪ್ತಿಯಲ್ಲಿರುವ ಪ್ರಭಾವಿಗಳ ಕಟ್ಟಡಗಳ ವಿಚಾರದಲ್ಲಿ ಮೌನ ವಹಿಸುತ್ತಿರುವುದು ಯಾವ ನ್ಯಾಯ? ಕಾನೂನು ಎಲ್ಲರಿಗೂ ಒಂದೇ ಆಗಿರಬೇಕಲ್ಲವೇ? ಬಡವರಿಗೊಂದು ನ್ಯಾಯ, ಪ್ರಭಾವಿಗಳಿಗೊಂದು ನ್ಯಾಯ ಎಂಬ ಆಡಳಿತದ ದ್ವಂದ್ವ ನೀತಿ ಏಕೆ? ಎಂದು ಬಸವರಾಜ ಮ್ಯಾಗಳಮನಿ ಪ್ರಶ್ನಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ಜಾತಿ, ವರ್ಗ, ಬಡವ-ಶ್ರೀಮಂತ ಎಂಬ ಭೇದಭಾವ ಇರಬಾರದು. ರಸ್ತೆ ಅಗಲೀಕರಣದ ನಿಗದಿತ ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು. ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ, ರಸ್ತೆ ಅಗಲೀಕರಣದ ವ್ಯಾಪ್ತಿಗೆ ಬರುವ ಎಲ್ಲಾ ಕಟ್ಟಡಗಳ ಕುರಿತು ನ್ಯಾಯಸಮ್ಮತವಾಗಿ ಕ್ರಮ ಕೈಗೊಳ್ಳಬೇಕು. ತೆರವು ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಡವರ ಕಣ್ಣೀರಿನ ಮೇಲೆ ಅಭಿವೃದ್ಧಿ ಬೇಡ!
ನಗರದ ಅಭಿವೃದ್ಧಿಯ ಹೆಸರಿನಲ್ಲಿ ಬಡವರ ಬದುಕಿಗೆ ಹೊಡೆತ ನೀಡಿ, ಪ್ರಭಾವಿಗಳ ಕಟ್ಟಡಗಳನ್ನು ರಕ್ಷಿಸುವ ನೀತಿ ಮುಂದುವರಿದರೆ ಸಹಿಸುವುದಿಲ್ಲ. ಅಧಿಕಾರಿಗಳು ತಕ್ಷಣ ತಾರತಮ್ಯವಿಲ್ಲದ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಬಸವರಾಜ ಮ್ಯಾಗಳಮನಿ ಎಚ್ಚರಿಕೆ ನೀಡಿದ್ದಾರೆ.



