ಗುಂಡಮ್ಮ ಕ್ಯಾಂಪ್‌ನಲ್ಲಿ ಪೊಲೀಸ್–ಸಾರ್ವಜನಿಕರ ಸಂಪರ್ಕ ಸಭೆ ಜರುಗಿತು

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

 

A police-public interaction meeting was held at Gundamma Camp.

ಗುಂಡಮ್ಮ ಕ್ಯಾಂಪ್‌ನಲ್ಲಿ ಪೊಲೀಸ್–ಸಾರ್ವಜನಿಕರ ಸಂಪರ್ಕ ಸಭೆ ಜರುಗಿತು


ಕಳ್ಳತನ, ಅಕ್ರಮ ಮದ್ಯ ಮಾರಾಟ, ಗಾಂಜಾ ಹಾವಳಿ ನಿಯಂತ್ರಣಕ್ಕೆ ಯುವಕರ ಆಗ್ರಹ; ಸಮಸ್ಯೆಗಳಿಗೆ ಸ್ಪಂದಿಸಿದ ಪಿಐ ಪ್ರಕಾಶ್



ಗಂಗಾವತಿ, ನ.18: ನಗರದ ಗುಂಡಮ್ಮ ಕ್ಯಾಂಪ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು, ಅಕ್ರಮ ಮದ್ಯ ಮಾರಾಟ, ಮದ್ಯವ್ಯಸನಿಗಳ ಕಿರಿಕಿರಿ ಹಾಗೂ ಯುವಕರು ಗಾಂಜಾ ವ್ಯಸನಕ್ಕೆ ಬಲಿಯಾಗುತ್ತಿರುವ ಆತಂಕಕಾರಿ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಹನುಮಾನ್ ದೇವಸ್ಥಾನದಲ್ಲಿ ಪೊಲೀಸ್–ಸಾರ್ವಜನಿಕರ ಸಂಪರ್ಕ ಸಭೆ ಜರುಗಿತು.

ಜಾಹೀರಾತು
ಜಾಹೀರಾತು


ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ಆರ್. ಯಾತನೂರು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಾರ್ಡ್‌ನ ಯುವಕರು ಹಾಗೂ ಸ್ಥಳೀಯರು ತಮ್ಮ ಪ್ರದೇಶದಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರು.


ಗುಂಡಮ್ಮ ಕ್ಯಾಂಪ್‌ನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮನೆಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಮದ್ಯವ್ಯಸನಿಗಳು ಮನೆಗಳಿಗೆ ಬಂದು ಬಾಗಿಲು ತಟ್ಟಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ.

ಮತ್ತೊಂದೆಡೆ, ಯುವಕರು ಗಾಂಜಾ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕ ಮೂಡಿಸಿದೆ. ಗುಂಡಮ್ಮ ಕ್ಯಾಂಪ್ ಮಾರುಕಟ್ಟೆ ಪ್ರದೇಶದಲ್ಲಿಯೂ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಯುವಕರು ಸಭೆಯಲ್ಲಿ ಪ್ರಸ್ತಾಪಿಸಿದರು.


ಈ ಹಿನ್ನೆಲೆಯಲ್ಲಿ ವಾರ್ಡ್‌ನ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಬೀಟ್ ಪೊಲೀಸ್ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಿ, ಸಮವಸ್ತ್ರವಿಲ್ಲದೆ ನಾಗರಿಕರಂತೆ ಸಂಚರಿಸುವ ಮೂಲಕ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ರಾತ್ರಿ ಗಸ್ತು ಹೆಚ್ಚಿಸುವುದರೊಂದಿಗೆ ಅಕ್ರಮ ಮದ್ಯ ಮಾರಾಟ ಮತ್ತು ಗಾಂಜಾ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಯುವಕರು ಒತ್ತಾಯಿಸಿದರು.


ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು: ಪಿಐ ಪ್ರಕಾಶ್ ಆರ್. ಯಾತನೂರು
ಯುವಕರ ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ಆರ್. ಯಾತನೂರು ಮಾತನಾಡಿ, ಗುಂಡಮ್ಮ ಕ್ಯಾಂಪ್ ವಾರ್ಡ್‌ನ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಉತ್ತಮ ಮತ್ತು ಶಾಂತಿಯುತ ವಾತಾವರಣ ನಿರ್ಮಿಸಲು ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಇದಕ್ಕೆ ಸಾರ್ವಜನಿಕರು ಹಾಗೂ ಯುವಕರ ಸಹಕಾರ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ನಿಮ್ಮ ಸುತ್ತಮುತ್ತ ಯಾವುದೇ ಅಕ್ರಮ ಚಟುವಟಿಕೆಗಳು, ಕಳ್ಳತನ ಅಥವಾ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಕಂಡುಬಂದರೆ ತಕ್ಷಣ ಪೊಲೀಸರ ಗಮನಕ್ಕೆ ತನ್ನಿ.

ಮಾಹಿತಿ ನೀಡುವವರ ಹೆಸರು ಮತ್ತು ಗುರುತನ್ನು ಬಹಿರಂಗಪಡಿಸುವುದಿಲ್ಲ. ಸಾರ್ವಜನಿಕರು ನಿರ್ಭೀತಿಯಿಂದ ಪೊಲೀಸರಿಗೆ ಮಾಹಿತಿ ನೀಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಎಎಸ್‌ಐ ಲಕ್ಷ್ಮಣ, ಪತ್ರಕರ್ತ ಹೆಚ್. ಮಲ್ಲಿಕಾರ್ಜುನ, ಕೆ. ಸನ್ನಿಕ್ ಪಟೇಲ್, ಉಲ್ಲಾಸ್ ಕೆ., ಪತ್ರಕರ್ತ ನಾಗರಾಜ ಇಂಗಳಗಿ, ಮಹಬೂಬ್ , ಬೀಟ್ ಪೋಲೀಸ್ ಯಮುನೂರಪ್ಪ ಕುಂಬಾರ ಸೇರಿದಂತೆ ವಾರ್ಡ್‌ನ ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Total Views: 1
Share This Article
Leave a Comment