
Mehboob Killedar’s significant effort towards the preservation of vanishing folk artifacts

ಕಣ್ಮರೆಯಾಗುತ್ತಿರುವ ಜಾನಪದ ಪರಿಕರಗಳ ಸಂರಕ್ಷಣೆಗೆ ಮೆಹಬೂಬ್ ಕಿಲ್ಲೇದಾರ್ ಅವರ ಮಹತ್ವದ ಪ್ರಯತ್ನ

ಗ್ರಾಮೀಣ ಬದುಕಿನ ಸಂಸ್ಕೃತಿ, ಪೂರ್ವಿಕರ ಶ್ರಮಸಂಸ್ಕೃತಿ ಮತ್ತು ಸಾಂಪ್ರದಾಯಿಕ ಜ್ಞಾನಪರಂಪರೆಯನ್ನು ಪರಿಚಯಿಸುವ ಅಪರೂಪದ ಕೃತಿ
ಕರ್ನಾಟಕದ ಜಾನಪದ ಪರಂಪರೆ ನಮ್ಮ ನಾಡಿನ ಮಣ್ಣಿನ ಸೊಗಡು, ಜನಜೀವನದ ಅನುಭವ, ಸಂಸ್ಕೃತಿಯ ವೈಭವ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ. ಇಂತಹ ಅಮೂಲ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿರುವವರು ಮೆಹಬೂಬ್ ಕಿಲ್ಲೇದಾರ್. ಶಿಕ್ಷಕರಾಗಿ, ಜನಪದ ಕಲಾವಿದರಾಗಿ, ಸಾಂಸ್ಕೃತಿಕ ಸಂಘಟಕರಾಗಿ ಹಾಗೂ ಪ್ರಸ್ತುತ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾಗಿ ಅವರು ಸಲ್ಲಿಸುತ್ತಿರುವ ಸೇವೆ ಗಮನಾರ್ಹವಾಗಿದೆ.
ಮೆಹಬೂಬ್ ಕಿಲ್ಲೇದಾರ್ ಅವರು 1988ರ ಡಿಸೆಂಬರ್ 25ರಂದು ಕೊಪ್ಪಳ ತಾಲೂಕಿನ ಐತಿಹಾಸಿಕ ಗ್ರಾಮವಾದ ಬಹದ್ದೂರಬಂಡಿಯಲ್ಲಿ ಜನಿಸಿದರು. ತಂದೆ ಲಾಲಸಾಬ ಕಿಲ್ಲೇದಾರ್ ಮತ್ತು ತಾಯಿ ಹುಸೇನಬೀ. ತಂದೆ-ತಾಯಿಗಳು ಔಪಚಾರಿಕ ಶಿಕ್ಷಣ ಪಡೆಯದಿದ್ದರೂ, ಮಗನನ್ನು ಅಂತರರಾಷ್ಟ್ರೀಯ ಮಟ್ಟದ ಕಲಾವಿದನನ್ನಾಗಿ ರೂಪಿಸುವಲ್ಲಿ ಅವರ ಪರಿಶ್ರಮ ಮತ್ತು ಪ್ರೋತ್ಸಾಹ ಮಹತ್ವದ ಪಾತ್ರ ವಹಿಸಿದೆ.
ಜಾನಪದ ಕಲೆ ಕೇವಲ ಮನರಂಜನೆಯ ಸಾಧನವಲ್ಲ; ಅದು ಜನರ ಬದುಕಿನ ಪ್ರತಿಬಿಂಬ, ಸಂಸ್ಕೃತಿಯ ಜೀವಂತ ದಾಖಲೆ ಹಾಗೂ ತಲೆಮಾರುಗಳಿಂದ ಹರಿದುಬಂದ ಜ್ಞಾನಸಂಪತ್ತಾಗಿದೆ ಎಂಬ ದೃಢ ನಂಬಿಕೆ ಮೆಹಬೂಬ್ ಕಿಲ್ಲೇದಾರ್ ಅವರದು. ಗ್ರಾಮೀಣ ಜನಜೀವನದಲ್ಲಿ ಹುದುಗಿರುವ ಕಲಾಪರಂಪರೆ ಮತ್ತು ಸಂಪ್ರದಾಯಗಳನ್ನು ಗುರುತಿಸಿ, ಅವುಗಳಿಗೆ ಸೂಕ್ತ ಗೌರವ ದೊರಕಿಸಿಕೊಡುವ ಉದ್ದೇಶದಿಂದ ಅವರು ಹಾಡು, ಭಾಷಣ, ಹಾಸ್ಯ ಮತ್ತು ಉಪನ್ಯಾಸಗಳ ಮೂಲಕ ನಿರಂತರವಾಗಿ ಜನಜಾಗೃತಿ ಮೂಡಿಸುತ್ತಿದ್ದಾರೆ.
ವಿಶೇಷವಾಗಿ ಮೊಹರಂ ಪದಗಳು, ತತ್ವಪದಗಳು, ಗ್ರಾಮೀಣ ಜನಪದ ಸಾಹಿತ್ಯ, ಸಾಂಪ್ರದಾಯಿಕ ಕಲಾಪ್ರಕಾರಗಳು ಹಾಗೂ ಜಾನಪದ ಮೂಲ ಪರಿಕರಗಳ ಸಂರಕ್ಷಣೆಯಲ್ಲಿ ಅವರು ತೋರಿಸುತ್ತಿರುವ ಆಸಕ್ತಿ ಅವರ ಸಾಂಸ್ಕೃತಿಕ ಬದ್ಧತೆಗೆ ಸಾಕ್ಷಿಯಾಗಿದೆ. ಅವರ ಕಲಾ ಚಟುವಟಿಕೆಗಳಲ್ಲಿ ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ಸಾಮರಸ್ಯಕ್ಕೆ ವಿಶೇಷ ಸ್ಥಾನವಿದೆ. ಮೊಹರಂ ಪದಗಳು ಹಾಗೂ ತತ್ವಪದಗಳ ಮೂಲಕ ಮಾನವೀಯತೆ, ಸಹಬಾಳ್ವೆ, ಸೌಹಾರ್ದತೆ ಮತ್ತು ಪರಸ್ಪರ ಗೌರವದ ಸಂದೇಶಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ.
ಕಲೆ ಮತ್ತು ಸಂಸ್ಕೃತಿ ಜನರನ್ನು ಒಗ್ಗೂಡಿಸುವ ಶಕ್ತಿಯಾಗಿವೆ ಎಂಬ ನಂಬಿಕೆಯಿಂದ ವಿವಿಧ ಸಮುದಾಯಗಳ ನಡುವೆ ಸಾಂಸ್ಕೃತಿಕ ಸಂವಾದ ಮತ್ತು ಸಾಮರಸ್ಯ ಬೆಳೆಸಲು ಶ್ರಮಿಸುತ್ತಿದ್ದಾರೆ. ಹೀಗಾಗಿಯೇ ಕಿಲ್ಲೇದಾರ್ ಅವರು ಕೊಪ್ಪಳ ಪರಿಸರದ ಜನಪದ ಬೇಡಿಕೆಯ ಗಾಯಕರೆಂದೇ ಗುರುತಿಸಿಕೊಂಡಿದ್ದಾರೆ. ತಮ್ಮ ಕಲೆಯನ್ನು ಕೇವಲ ಹಣ ಸಂಪಾದನೆಯ ಸಾಧನವಾಗಿ ಬಳಸಿಕೊಳ್ಳದೆ, ಕಲಾಸೇವೆಯನ್ನೇ ಆರಾಧನೆಯಾಗಿ ಸ್ವೀಕರಿಸಿದ್ದಾರೆ. ಕೊಟ್ಟಷ್ಟು ಪಡೆಯುವ ಮನೋಭಾವ ಹೊಂದಿರುವ ಅವರು ಹಣದ ನಿರೀಕ್ಷೆಗಿಂತ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
ಮೆಹಬೂಬ್ ಕಿಲ್ಲೇದಾರ್ ಅವರು ವೃತ್ತಿಯಿಂದ ಶಿಕ್ಷಕರಾಗಿದ್ದು, 2011ರಲ್ಲಿ ಕಾರಟಗಿಯ ಶ್ರೀ ಶರಣಬಸವೇಶ್ವರ ಕನ್ನಡ ಮಾಧ್ಯಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದರು. ಶಿಕ್ಷಕ ವೃತ್ತಿಯನ್ನು ಕೇವಲ ಪಾಠ ಬೋಧನೆಗೆ ಸೀಮಿತಗೊಳಿಸದೆ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕಲಾಸಕ್ತಿ, ಶಿಸ್ತು, ಮಾನವೀಯತೆ ಮತ್ತು ನಮ್ಮ ನೆಲದ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವ ಸಾಧನವಾಗಿ ಬಳಸಿಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಜನಪದ ಹಾಡುಗಳು, ಸುಗ್ಗಿ ಕುಣಿತ, ಹಾಲಕ್ಕಿ ನೃತ್ಯ, ಸಿದ್ದಿ ನೃತ್ಯ, ಮೊಹರಂ ಕುಣಿತ ಮುಂತಾದ ಕಲಾಪ್ರಕಾರಗಳ ಪರಿಚಯ ಮಾಡಿಕೊಡುವ ಮೂಲಕ ಗ್ರಾಮೀಣ ಕಲಾಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಆಧುನಿಕತೆಯ ಪ್ರಭಾವದಿಂದ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಮೂಲ ಜಾನಪದ ಕಲಾಪ್ರಕಾರಗಳು, ಹಾಡುಗಳು, ವಾದ್ಯಗಳು ಮತ್ತು ಪರಿಕರಗಳು ಬಳಕೆಯಿಂದ ದೂರವಾಗುತ್ತಿವೆ. ಇವುಗಳನ್ನು ದಾಖಲಿಸುವುದು, ಪರಿಚಯಿಸುವುದು ಮತ್ತು ಸಂರಕ್ಷಿಸುವುದು ಅತ್ಯಗತ್ಯ ಎಂಬುದನ್ನು ತಮ್ಮ ಹಾಡು ಮತ್ತು ಉಪನ್ಯಾಸಗಳ ಮೂಲಕ ಪ್ರತಿಪಾದಿಸುತ್ತಾ ಬಂದಿದ್ದಾರೆ.
ವಿದೇಶಿ ವ್ಯಾಮೋಹದ ನಡುವೆ ಕಣ್ಮರೆಯಾಗುತ್ತಿರುವ ನಮ್ಮ ನೆಲದ ಪರಿಕರಗಳು
ಇಂದು ಜಾಗತೀಕರಣದ ಪ್ರಭಾವದಿಂದ ವಿದೇಶಿ ವಸ್ತುಗಳ ಮೇಲಿನ ವ್ಯಾಮೋಹ ಹೆಚ್ಚುತ್ತಿದೆ. ಆಹಾರ, ತಿಂಡಿ-ತಿನಿಸು, ಪಾನೀಯಗಳ ಜೊತೆಗೆ ನಿತ್ಯದ ಮನೆಬಳಕೆಯ ವಸ್ತುಗಳಲ್ಲಿಯೂ ವಿದೇಶಿ ಉತ್ಪನ್ನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ವಿದೇಶಿ ವಸ್ತುಗಳ ಬಳಕೆಯೇ ಪ್ರತಿಷ್ಠೆಯ ಸಂಕೇತ ಎಂಬ ಮನೋಭಾವ ಬೆಳೆಯುತ್ತಿದೆ. ಇದರ ಪರಿಣಾಮವಾಗಿ ನಮ್ಮ ಹಳ್ಳಿಗಳಲ್ಲಿ ಹಿಂದೆ ನಿತ್ಯ ಬಳಕೆಯಲ್ಲಿದ್ದ ಅನೇಕ ವಸ್ತುಗಳು ನಿಧಾನವಾಗಿ ಮಾಯವಾಗುತ್ತಿವೆ.
ಇಂದಿನ ಮಕ್ಕಳಿಗೆ ನಮ್ಮ ಪೂರ್ವಿಕರು ಬಳಸುತ್ತಿದ್ದ ಮೂಲ ಪರಿಕರಗಳನ್ನು ನೋಡುವುದಿರಲಿ, ಅವುಗಳ ಹೆಸರುಗಳೂ ತಿಳಿಯದ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ. ಹಿಂದೆ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದ್ದ ವಸ್ತುಗಳು ಇಂದು ನೆನಪಿನ ಭಾಗವಾಗುತ್ತಿವೆ.
ಮೆಹಬೂಬ್ ಕಿಲ್ಲೇದಾರ್ ಅವರು ಈ ಕೃತಿಯ ಮೂಲಕ ಕಣ್ಮರೆಯಾಗುತ್ತಿರುವ ಜಾನಪದ ಪರಿಕರಗಳನ್ನು ದಾಖಲಿಸುವುದರ ಜೊತೆಗೆ ಅವುಗಳ ಸಾಂಪ್ರದಾಯಿಕ ಬಳಕೆ, ಸಾಂಸ್ಕೃತಿಕ ಹಿನ್ನೆಲೆ ಮತ್ತು ಪೂರ್ವಿಕರ ಜೀವನಪದ್ಧತಿಯನ್ನು ಪರಿಚಯಿಸಲು ಪ್ರಯತ್ನಿಸಿದ್ದಾರೆ. ಛಾಯಾಚಿತ್ರಗಳು ಹಾಗೂ ವಿವರಣೆಗಳ ಮೂಲಕ ಮಾಹಿತಿಯನ್ನು ಒದಗಿಸಿರುವುದು ಓದುಗರಿಗೆ ಹೆಚ್ಚು ಅನುಕೂಲಕರವಾಗಿದೆ.
ಜಾನಪದ ಅಧ್ಯಯನಕಾರರು, ಸಂಶೋಧಕರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾಂಸ್ಕೃತಿಕ ಆಸಕ್ತರಿಗೆ ಈ ಕೃತಿ ಉಪಯುಕ್ತ ಆಕರ ಗ್ರಂಥವಾಗುವ ಸಾಮರ್ಥ್ಯ ಹೊಂದಿದೆ. ವಿಶೇಷವಾಗಿ ಇಂದಿನ ಯುವಜನತೆ ಇಂತಹ ಕೃತಿಗಳನ್ನು ಓದುವ ಮೂಲಕ ನಮ್ಮ ಪೂರ್ವಿಕರ ಬದುಕು, ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಅರಿತುಕೊಳ್ಳಬೇಕು. ಕಣ್ಮರೆಯಾಗುತ್ತಿರುವ ಪರಿಕರಗಳ ಪರಿಚಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿಯನ್ನು ಸಮಾಜವೂ ಹೊತ್ತುಕೊಳ್ಳಬೇಕು.
ಒಟ್ಟಾರೆ, ಮೆಹಬೂಬ್ ಕಿಲ್ಲೇದಾರ್ ಅವರ ‘ಕಣ್ಮರೆಯಾಗುತ್ತಿರುವ ಜಾನಪದ ಪರಿಕರಗಳು ಮತ್ತು ಸಾಂಪ್ರದಾಯಿಕ ಬಳಕೆ’ ಕೃತಿ ಜಾನಪದ ಪರಂಪರೆಯ ಸಂರಕ್ಷಣೆ ಮತ್ತು ಸಾಂಸ್ಕೃತಿಕ ದಾಖಲಾತಿಯ ದೃಷ್ಟಿಯಿಂದ ಮಹತ್ವದ ಪ್ರಯತ್ನವಾಗಿದೆ. ನಮ್ಮ ನೆಲದ ಸೊಗಡು, ರೈತನ ಶ್ರಮ, ಗ್ರಾಮೀಣ ಬದುಕಿನ ವೈವಿಧ್ಯ ಮತ್ತು ಪೂರ್ವಿಕರ ಜ್ಞಾನಪರಂಪರೆಯನ್ನು ನೆನಪಿಸುವ ಈ ಕೃತಿ ಓದುಗರ ಗಮನ ಸೆಳೆಯುವಂತಿದೆ.
ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು,
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ – 583231.
ಮೊ: 9448570340
ಇ-ಮೇಲ್: skotnekal@gmail.com


