

ಕಲ್ಯಾಣಸಿರಿ ವೆಬ್ ನ್ಯೂಸ್ ವರದಿಯ ಬೆನ್ನಲ್ಲೇ ಎಚ್ಚೆತ್ತ ಜೀರಾಳ ಗ್ರಾಮ ಪಂಚಾಯಿತಿ
ಮಾಹಿತಿ ಹಕ್ಕು ಕಾಯ್ದೆಯ ನಾಮಫಲಕ ಅಳವಡಿಕೆ; ಸಾರ್ವಜನಿಕರ ಮೆಚ್ಚುಗೆ
Jeerala Gram Panchayat takes action following a report by Kalyanasiri Web News
ಜೀರಾಳ (ಕನಕಗಿರಿ ತಾಲೂಕು): ಮಾಹಿತಿ ಹಕ್ಕು ಅಧಿನಿಯಮ–2005ರ ನಾಮಫಲಕವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಜೀರಾಳ ಗ್ರಾಮ ಪಂಚಾಯಿತಿಯ ಕುರಿತು ಕಲ್ಯಾಣಸಿರಿ ವೆಬ್ ನ್ಯೂಸ್ ಕೆಲವು ದಿನಗಳ ಹಿಂದೆ ವರದಿ ಪ್ರಕಟಿಸಿತ್ತು.
ವರದಿಯ ಪರಿಣಾಮವಾಗಿ ಎಚ್ಚೆತ್ತ ಗ್ರಾಮ ಪಂಚಾಯಿತಿ ಆಡಳಿತ ಇದೀಗ ಕಚೇರಿ ಗೋಡೆಯ ಮೇಲೆ ಮಾಹಿತಿ ಹಕ್ಕು ಕಾಯ್ದೆಯ ನಾಮಫಲಕವನ್ನು ಅಳವಡಿಸಿದೆ.
“ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಕಾರ್ಯಾಲಯ ಜೀರಾಳ, ತಾ.ಪಂ. ಕನಕಗಿರಿ, ಜಿ.ಪಂ. ಕೊಪ್ಪಳ” ಎಂಬ ಶೀರ್ಷಿಕೆಯಡಿ ಅಳವಡಿಸಿರುವ ನಾಮಫಲಕದಲ್ಲಿ,
- ಸಾರ್ವಜನಿಕ ಮಾಹಿತಿ ಅಧಿಕಾರಿ (PIO) – ಕಾರ್ಯದರ್ಶಿಗಳು
- ಪ್ರಥಮ ಮೇಲ್ಮನವಿ ಅಧಿಕಾರಿ (FAA) – ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು
ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರು ಅಗತ್ಯ ಮಾಹಿತಿಯನ್ನು ಪಡೆಯಲು ಅನುಕೂಲವಾಗುವಂತೆ ಸಂಬಂಧಿಸಿದ ಅಧಿಕಾರಿಗಳ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಯಾಣಸಿರಿ ವೆಬ್ ನ್ಯೂಸ್ ವರದಿಗೆ ಸ್ಪಂದಿಸಿ ತ್ವರಿತವಾಗಿ ನಾಮಫಲಕ ಅಳವಡಿಸಿರುವ ಪಂಚಾಯಿತಿ ಆಡಳಿತದ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಲ್ಯಾಣಸಿರಿ ನ್ಯೂಸ್ ವರದಿಗೆ ಸ್ಪಂದನೆ
ಸಾರ್ವಜನಿಕ ಸಮಸ್ಯೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿನ ಲೋಪದೋಷಗಳನ್ನು ಬೆಳಕಿಗೆ ತಂದು, ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಮಾಡುವುದು ಮಾಧ್ಯಮದ ಜವಾಬ್ದಾರಿಯಾಗಿದೆ. ಜೀರಾಳ ಗ್ರಾಮ ಪಂಚಾಯಿತಿಯ ಮಾಹಿತಿ ಹಕ್ಕು ನಾಮಫಲಕದ ವಿಚಾರದಲ್ಲಿಯೂ ವರದಿ ಪ್ರಕಟವಾದ ಕೆಲವೇ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂಬುದು ಗಮನಾರ್ಹವಾಗಿದೆ.
“ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಪತ್ರಿಕೋದ್ಯಮಕ್ಕೆ ಇದು ಮತ್ತೊಂದು ಉದಾಹರಣೆ” ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿ, ಕಲ್ಯಾಣಸಿರಿ ವೆಬ್ ನ್ಯೂಸ್‌ನ ವರದಿಗೆ ಮೆಚ್ಚುಗೆ ತಿಳಿಸಿದ್ದಾರೆ.
ವರದಿ: ಶರಣಯ್ಯ ಹಿರೇಮಠ
ಕನಕಗಿರಿ ತಾಲೂಕು ವರದಿಗಾರ



