
Take precautions to ensure communal harmony is not compromised; various Basava-affiliated organizations submit a request to the Deputy Superintendent of Police.
ಗಂಗಾವತಿಯಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನೀಡದಂತೆ ಮನವಿ
ಕೋಮು ಸೌಹಾರ್ದತೆ ಹಾಗೂ ಶಾಂತಿ ಕಾಪಾಡುವ ಹಿತದೃಷ್ಟಿಯಿಂದ ಕ್ರಮಕ್ಕೆ ಆಗ್ರಹ.
ಗಂಗಾವತಿಯಲ್ಲಿ ನವೆಂಬರ್ 3ರಂದು ನಡೆಯಲಿರುವ ಸಮಾವೇಶಕ್ಕೆ ಅನುಮತಿ ನೀಡುವ ಕುರಿತು ಪೊಲೀಸ್ ಇಲಾಖೆ ಕಾನೂನು-ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿಯ ದೃಷ್ಟಿಯಿಂದ ಪರಿಶೀಲಿಸಬೇಕು ಎಂಬುದು ಮನವಿಯ ಪ್ರಮುಖ ಆಗ್ರಹವಾಗಿದೆ.
ಗಂಗಾವತಿ: ನವೆಂಬರ್ 3ರಂದು ಗಂಗಾವತಿಯಲ್ಲಿ ಆಯೋಜಿಸಿರುವ “ಬಸವಾದಿ ಶರಣರ ಹಿಂದೂ ಸಮಾವೇಶ”ಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಬಸವ ಕೇಂದ್ರ, ರಾಷ್ಟ್ರೀಯ ಬಸವದಳ, ಶರಣ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ. ಬಸವಪರ ಸಂಘಟನೆಗಳ ಪ್ರಮುಖರು ಗಂಗಾವತಿ ಪೊಲೀಸ್ ಉಪವಿಭಾಗದ ಉಪ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ, ಕಳೆದ ವರ್ಷ ರಾಜ್ಯಾದ್ಯಂತ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಸ್ವಾಮೀಜಿಗಳು, ಬಸವ ಭಕ್ತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಶಾಂತಿಯುತವಾಗಿ ಸಹಕರಿಸಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರೂ ಯಾವುದೇ ಅಹಿತಕರ ಘಟನೆ ನಡೆಯದೆ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿತ್ತು ಎಂದು ಉಲ್ಲೇಖಿಸಲಾಗಿದೆ.
ಆದರೆ, ಕನ್ನೇರಿ ಮಠದ ಶ್ರೀಗಳು ವಿವಿಧ ಸಂದರ್ಭಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ ಹಾಗೂ ಅದರೊಂದಿಗೆ ಸಂಬಂಧಿಸಿದ ಸ್ವಾಮೀಜಿಗಳ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮನವಿದಾರರು ಆರೋಪಿಸಿದ್ದಾರೆ. ಇಂತಹ ಹೇಳಿಕೆಗಳಿಂದ ಸಾರ್ವಜನಿಕರಲ್ಲಿ ಅಸಮಾಧಾನ ಉಂಟಾಗುವ ಸಾಧ್ಯತೆ ಇದ್ದು, ಕೆಲವು ಜಿಲ್ಲೆಗಳಲ್ಲಿ ಅವರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಹಾಗೂ ನ್ಯಾಯಾಂಗ ಕ್ರಮಗಳು ನಡೆದಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬಸವಕಲ್ಯಾಣ, ಗದಗ ಸೇರಿದಂತೆ ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ವಿವಾದಾತ್ಮಕ ಹೇಳಿಕೆಗಳು ಬಂದಿರುವುದಾಗಿ ಆರೋಪಿಸಿರುವ ಮನವಿದಾರರು, ಇಂತಹ ಬೆಳವಣಿಗೆಗಳು ಗಂಗಾವತಿಯ ಶಾಂತಿ ಮತ್ತು ಸೌಹಾರ್ದ ವಾತಾವರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಒಂದು ಕಾಲದಲ್ಲಿ ಭಾವೈಕ್ಯತೆಗೆ ಹೆಸರಾಗಿದ್ದ ಗಂಗಾವತಿ ಇಂದು ಅತ್ಯಂತ ಸೂಕ್ಷ್ಮ ಪ್ರದೇಶ ಎಂಬ ಮಾತು ಕೇಳಿಬರುವಂತಾಗಿರುವುದು ನೋವಿನ ಸಂಗತಿ. ಈ ನಗರದಲ್ಲಿ ವಿವಿಧ ಧರ್ಮಗಳ ಜನರು ಹಲವು ವರ್ಷಗಳಿಂದ ಪರಸ್ಪರ ಸಹಬಾಳ್ವೆಯಿಂದ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬಂದಿದ್ದಾರೆ. ಇಂತಹ ಸೌಹಾರ್ದ ವಾತಾವರಣಕ್ಕೆ ಧಕ್ಕೆ ಉಂಟಾಗದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪಂಚಪೀಠಾಧಿಪತಿಗಳ ಕಾರ್ಯಕ್ರಮಗಳು, ಸಿದ್ದಗಂಗಾ ಮಠದ ಪೂಜ್ಯ ಡಾ. ಶಿವಕುಮಾರ ಸ್ವಾಮಿಗಳ ಗುರುವಂದನಾ ಕಾರ್ಯಕ್ರಮ, ಈದ್ ಮಿಲಾದ್ ಹಾಗೂ ಗದುಗಿನ ಪುಟ್ಟರಾಜ ಗವಾಯಿಗಳ ತುಲಾಭಾರದಂತಹ ಹಲವು ಕಾರ್ಯಕ್ರಮಗಳು ಗಂಗಾವತಿಯಲ್ಲಿ ಶಾಂತಿ ಮತ್ತು ಭಾವೈಕ್ಯತೆಯೊಂದಿಗೆ ನಡೆದಿರುವುದನ್ನು ಮನವಿಯಲ್ಲಿ ಸ್ಮರಿಸಲಾಗಿದೆ.
ಹೀಗಾಗಿ ನವೆಂಬರ್ 3ರಂದು ನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನೀಡುವ ಮುನ್ನ ಕಾರ್ಯಕ್ರಮದಿಂದ ಉಂಟಾಗಬಹುದಾದ ಕಾನೂನು-ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಯ ಪರಿಣಾಮಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಬೇಕು ಎಂದು ಪೊಲೀಸ್ ಉಪ ಅಧೀಕ್ಷಕರಿಗೆ ಮನವಿ ಮಾಡಲಾಗಿದೆ.
ಮನವಿಗೆ ಬಸವ ಕೇಂದ್ರದ ಅಧ್ಯಕ್ಷ ಕೆ. ಬಸವರಾಜ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ದಿಲೀಪಕುಮಾರ ವಂದಾಲ, ಗಣಾಚಾರಿ ದಳದ ರಾಜ್ಯಾಧ್ಯಕ್ಷ ವೀರೇಶ ಅಸರೆಡ್ಡಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎ.ಕೆ. ಮಹೇಶಕುಮಾರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸಹಿ ಮಾಡಿದ್ದಾರೆ.




