
Northeast Teachers' Constituency Election 2026: Mustering process successfully completed in Koppal district
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026; ಕೊಪ್ಪಳ ಜಿಲ್ಲೆಯಲ್ಲಿ ಮಸ್ಟರಿಂಗ್ ಕಾರ್ಯ ಯಶಸ್ವಿ
ಕೊಪ್ಪಳ ಅಕ್ಟೋಬರ್ 22 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಹಿನ್ನೆಲೆಯಲ್ಲಿ ಕೊಪ್ಪಳ ತಹಶೀಲ್ದಾರ ಕಚೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ (ಅ. 22ರಂದು) ಮಸ್ಟರಿಂಗ್ ಕಾರ್ಯ ಯಶಸ್ವಿಯಾಗಿ ಜರುಗಿತು.
ಮತದಾನ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ಬ್ಯಾಲಟ್ ಬಾಕ್ಸ್ ಸೇರಿದಂತೆ ಅಗತ್ಯ ಚುನಾವಣಾ ಸಾಮಗ್ರಿಗಳನ್ನು ವಿತರಿಸಿ, ಪೊಲೀಸ್ ಭದ್ರತೆಯೊಂದಿಗೆ ಆಯಾ ಮತಗಟ್ಟೆಗಳಿಗೆ ಕಳುಹಿಸಿಕೊಡಲಾಯಿತು.
ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು ಮತ್ತು ಸಿಬ್ಬಂದಿಯು ಮತಗಟ್ಟೆಗೆ ಅವಶ್ಯವಿರುವ ನಮೂನೆ, ಲಕೋಟೆ ಹಾಗೂ ಸ್ಟೇಷನರಿ ಸಾಮಾಗ್ರಿಗಳೊಂದಿಗೆ ಮತಗಟ್ಟೆಗಳತ್ತ ತೆರಳಿದರು.
ಕೊಪ್ಪಳ ತಹಸೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿಗಳಾದ ಡಾ. ಸುರೇಶ್ ಬಿ. ಇಟ್ನಾಳ ಅವರು ಭೇಟಿ ನೀಡಿ, ಮಸ್ಟರಿಂಗ್ ಪ್ರಕ್ರಿಯೆಯನ್ನು ಖುದ್ದು ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿದರು.
ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಅಕ್ಟೋಬರ್ 23ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆ ಮತದಾನ ನಡೆಯಲಿದೆ. ಮತದಾನವು ನಿಗದಿಪಡಿಸಿದ ಸಮಯಕ್ಕೆ ಆರಂಭವಾಗಬೇಕು. ಮತದಾನ ಕೇಂದ್ರಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಜಾಗೃತೆಯಿಂದ ಕಾರ್ಯನಿರ್ವಹಿಸಬೇಕು. ಮತದಾನ ಮುಕ್ತಾಯದ ನಂತರ ಬ್ಯಾಲೆಟ್ ಬಾಕ್ಸ್ಗಳನ್ನು ಬಿಗಿ ಭದ್ರತೆಯಲ್ಲಿ ಭದ್ರತಾ ಕೊಠಡಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಮತದಾನ ಕೇಂದ್ರಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಶಾಮಿಯಾನ ವ್ಯವಸ್ಥೆ, ಮತಗಟ್ಟೆ ಸಿಬ್ಬಂದಿಗೆ ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಮಹೆಬೂಬ್ ಜೀಲಾನ್ ಖುರೇಶಿ, ಕೊಪ್ಪಳ ತಹಶೀಲ್ದಾರ್ ಬಸವರಾಜ್ ತನ್ನಳ್ಳಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಸೇರಿದಂತೆ ಕಂದಾಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
*ಮತಗಟ್ಟೆಗೆ ಸಿಬ್ಬಂದಿ ನಿಯೋಜನೆ:* ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ಸುಗಮ ಮತ್ತು ಶಾಂತಿಯುತ ಮತದಾನಕ್ಕಾಗಿ ಪ್ರತಿ ಮತಗಟ್ಟೆಗೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗೆ ನಾಲ್ವರು ಮತಗಟ್ಟೆ ಅಧಿಕಾರಿ-ಸಿಬ್ಬಂದಿ, ಒಬ್ಬರು ಡಿ-ದರ್ಜೆ ನೌಕರ ಹಾಗೂ ಅಗತ್ಯಕ್ಕೆ ತಕ್ಕಂತೆ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಒಬ್ಬ ಮೈಕ್ರೋ ಆಬ್ಸರ್ವರ್ ಅವರನ್ನು ಸಹ ನಿಯೋಜಿಸಲಾಗಿದೆ.
*ಕೊಪ್ಪಳ ಜಿಲ್ಲೆಯ ಮತಗಟ್ಟೆಗಳ ವಿವರ:* ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನಕ್ಕಾಗಿ ಕೊಪ್ಪಳ ಜಿಲ್ಲೆಯಲ್ಲಿ 20 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಗಂಗಾವತಿ ತಾಲ್ಲೂಕಿನಲ್ಲಿ ಗಂಗಾವತಿ ಬಸ್ ನಿಲ್ದಾಣದ ಹತ್ತಿರದ ಸರ್ಕಾರಿ ಉರ್ದು ಪ್ರೌಢಶಾಲೆ (ಮತಗಟ್ಟೆ ಸಂಖ್ಯೆ; 108), ತಾಲ್ಲೂಕಿನ ವೆಂಕಟಗಿರಿ ಗ್ರಾಮ ಪಂಚಾಯತ್ ಕಾರ್ಯಾಲಯ ಕಟ್ಟಡ (ಮತಗಟ್ಟೆ 109), ಮರಳಿ ಗ್ರಾಮ ಪಂಚಾಯತ್ ಕಾರ್ಯಾಲಯ ಕಟ್ಟಡ (ಮತಗಟ್ಟೆ 110).
ಕಾರಟಗಿ ತಾಲ್ಲೂಕಿನಲ್ಲಿ ಕಾರಟಗಿಯ ಕರ್ನಾಟಕ ಪಬ್ಲಿಕ್ ಶಾಲೆ ಪಿಯು ವಿಭಾಗ ಕಟ್ಟಡ (ಮತಗಟ್ಟೆ 111), ಕಾರಟಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯತ್ ಕಾರ್ಯಾಲಯ ಕಟ್ಟಡ (ಮತಗಟ್ಟೆ 112).
ಕನಕಗಿರಿ ಪಟ್ಟಣ ಪಂಚಾಯತ್ ಕಾರ್ಯಾಲಯ ಕಟ್ಟಡ (ಮತಗಟ್ಟೆ 113). ಕುಷ್ಟಗಿ ತಾಲ್ಲೂಕಿನಲ್ಲಿ ಕುಷ್ಟಗಿ ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಕೊಠಡಿ (ಮತಗಟ್ಟೆ 114) ಮತ್ತು ತಹಶೀಲ್ದಾರ್ ಕಾರ್ಯಾಲಯದ ಸರ್ವೆ ಕೊಠಡಿ (ಮತಗಟ್ಟೆ 115), ಕುಷ್ಟಗಿ ತಾಲ್ಲೂಕಿನ ಹನುಮನಾಳ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ (ಮತಗಟ್ಟೆ 116), ಹನುಮಸಾಗರ ಪಟ್ಟಣ ಪಂಚಾಯತ್ ಕಾರ್ಯಾಲಯ ಕಟ್ಟಡ (ಮತಗಟ್ಟೆ 117), ತಾವರಗೇರಾ ಪಟ್ಟಣ ಪಂಚಾಯತ್ ಕಾರ್ಯಾಲಯ ಕಟ್ಟಡ (ಮತಗಟ್ಟೆ 118).
ಕುಕನೂರು ತಾಲ್ಲೂಕಿನಲ್ಲಿ ಕುಕನೂರು ಪಟ್ಟಣ ಪಂಚಾಯತ್ ಕಾರ್ಯಾಲಯ ಕಟ್ಟಡ (ಮತಗಟ್ಟೆ 119), ಕುಕನೂರು ತಾಲ್ಲೂಕಿನ ಮಂಗಳೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ (ಪೂರ್ವ ಭಾಗ) ಕಟ್ಟಡ (ಮತಗಟ್ಟೆ 120).
ಯಲಬುರ್ಗಾ ತಾಲ್ಲೂಕಿನಲ್ಲಿ ಯಲಬುರ್ಗಾದ ಸರ್ಕಾರಿ ಪಿಯು ಕಾಲೇಜು (ಪ್ರೌಢಶಾಲಾ ವಿಭಾಗ) ನೂತನ (ದಕ್ಷಿಣ ಭಾಗ) ಕಟ್ಟಡ (ಮತಗಟ್ಟೆ 121), ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಂಟಾ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ (ಮಧ್ಯ ಭಾಗ) ಕಟ್ಟಡ (ಮತಗಟ್ಟೆ 122).
ಕೊಪ್ಪಳ ತಾಲ್ಲೂಕಿನಲ್ಲಿ ಅಳವಂಡಿ ಗ್ರಾಮ ಪಂಚಾಯತ್ ಕಾರ್ಯಾಲಯ ಕಟ್ಟಡ (ಮತಗಟ್ಟೆ 123), ಇರಕಲಗಡ ಗ್ರಾಮ ಪಂಚಾಯತ್ ಕಾರ್ಯಾಲಯ ಕಟ್ಟಡ (ಮತಗಟ್ಟೆ 124), ಕೊಪ್ಪಳ ತಾಲ್ಲೂಕು ಪಂಚಾಯತ್ ಕಾರ್ಯಾಲಯ ಕಟ್ಟಡ (ಮತಗಟ್ಟೆ 125), ಕೊಪ್ಪಳ ರೈಲ್ವೆ ನಿಲ್ದಾಣ ರಸ್ತೆಯ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ (ಮತಗಟ್ಟೆ 126) ಹಾಗೂ ಹಿಟ್ನಾಳ್ ಗ್ರಾಮ ಪಂಚಾಯತ್ ಕಾರ್ಯಾಲಯ ಕಟ್ಟಡ (ಮತಗಟ್ಟೆ ಸಂಖ್ಯೆ; 127).
ಈ ಎಲ್ಲಾ 20 ಮತಗಟ್ಟೆಗಳಲ್ಲಿ ಮತದಾನವು ಅಕ್ಟೋಬರ್ 23ರಂದು ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಿ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದ್ದು, ಇದಕ್ಕಾಗಿ ಕೊಪ್ಪಳ ಜಿಲ್ಲಾಡಳಿತವು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ. ಮತದಾನವನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತ ರೀತಿಯಲ್ಲಿ ಕೈಗೊಳ್ಳಲು ಪೊಲೀಸ್ ಬಿಗಿ ಭದ್ರತೆಯನ್ನು ಸಹ ಒದಗಿಸಲಾಗಿದೆ.




