
Joyous celebration of Garavi Sharif in Ashraya Colony
“ಆಶ್ರಯ ಕಾಲೋನಿಯಲ್ಲಿ ಸಂಭ್ರಮದ ಗ್ಯಾರವಿ ಶರೀಫ್ ಆಚರಣೆ
ಭಾವೈಕ್ಯತೆ, ಸೌಹಾರ್ದತೆ ಸಾರಿದ ಧಾರ್ಮಿಕ ಮಹೋತ್ಸವ
ಗಂಗಾವತಿ, ಅ.19: ನಗರದ ವಾರ್ಡ್ ನಂ.10ರ ಶರಣಬಸವೇಶ್ವರ ನಗರದ ಆಶ್ರಯ ಕಾಲೋನಿಯಲ್ಲಿ ಸೂಫಿ ಸಂತ ಮಹೆಬೂಬ್ ಸುಭಾನಿ ಅವರ ಸ್ಮರಣಾರ್ಥ ಗ್ಯಾರವಿ ಶರೀಫ್ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಭಾವೈಕ್ಯತೆ ಮತ್ತು ಸೌಹಾರ್ದತೆಯ ಪ್ರತೀಕವಾಗಿ ನಡೆದ ಧಾರ್ಮಿಕ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಧರ್ಮಗುರು ಹಜರತ್ ರಜಾವಲಿ, ಸೂಫಿ ಸಂತ ಮಹೆಬೂಬ್ ಸುಭಾನಿ ಅವರ ಜೀವನ ಮತ್ತು ಬೋಧನೆಗಳು ಎಲ್ಲರಿಗೂ ಆದರ್ಶಪ್ರಾಯವಾಗಿವೆ ಎಂದು ಹೇಳಿದರು. ಸರ್ವಧರ್ಮೀಯರಲ್ಲೂ ಪ್ರೀತಿ, ಶಾಂತಿ, ಕರುಣೆ ಹಾಗೂ ಪರಸ್ಪರ ಭ್ರಾತೃತ್ವ ಬೆಳೆಸಿಕೊಳ್ಳುವುದೇ ನಿಜವಾದ ಧರ್ಮ. ಪ್ರತಿಯೊಬ್ಬರೂ ಪರಸ್ಪರ ಗೌರವ ಹಾಗೂ ಪ್ರೀತಿಯಿಂದ ಬದುಕಿದಾಗ ಮಾತ್ರ ಸಮಾಜದಲ್ಲಿ ನೆಮ್ಮದಿ ಮತ್ತು ಸೌಹಾರ್ದತೆ ನೆಲೆಸಲು ಸಾಧ್ಯ. ಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವುದು ಹಾಗೂ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದೇ ದೇವರಿಗೆ ಸಲ್ಲಿಸುವ ಶ್ರೇಷ್ಠ ಪೂಜೆಯಾಗಿದೆ ಎಂದು ಅವರು ಭಕ್ತರಿಗೆ ಧಾರ್ಮಿಕ ಸಂದೇಶ ನೀಡಿದರು.
ಧಾರ್ಮಿಕ ವಿಧಿವಿಧಾನಗಳ ಬಳಿಕ ಸಮಸ್ತ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಹೆಬೂಬ್, ಹಸನ್, ಹುಸೇನ್ ಪೀರ ಗುಜರಿ, ವಲಿಸಾಬ, ಮಹೆಬೂಬ್ ಸದ್ದಾಂ, ಅಜ್ಜು, ಅಲ್ತಾಫ್, ದಾದು, ಹುಸೇನ್, ಗೌಸ್, ಮುಸ್ತಫಾ, ರಾಜಾವಲಿ, ಮರ್ದಾನ, ಬಸವ, ಜಾವಿದ್, ಶಿವು, ಸದ್ದಾಂ, ಹೈದರ್, ರಫೀಕ್, ಯಮನೂರು, ಸುಬಾನಿ, ಶಿವಪ್ಪ, ಹುಸೇನಿ, ನಗರಸಭೆ ಮಾಜಿ ಸದಸ್ಯೆ ಪಾರ್ವತೆಮ್ಮ, ಆನಂದ, ದುರುಗೇಶಪ್ಪ ದೊಡ್ಡಮನಿ, ಭಾಷಾ ಮನಿಯರ್, ಕನಕಗಿರಿ ಹುಸೇನಭಾಷ, ಯಮನೂರು ಗುನ್ನಾಳ, ಮುರ್ತುಜಾ, ಇಮಾಮ್, ಎಸ್.ಹೆಚ್. ಮುಧೋಳ ಸೇರಿದಂತೆ ವಿವಿಧ ಸಮುದಾಯಗಳ ಪ್ರಮುಖರು, ಹಿರಿಯರು ಹಾಗೂ ಯುವಕರು ಭಾಗವಹಿಸಿದ್ದರು.
— ಕಲ್ಯಾಣಸಿರಿ ವೆಬ್ ನ್ಯೂಸ್, ಗಂಗಾವತಿ”




