
Quality higher education is possible even in rural areas.
ಗ್ರಾಮೀಣ ಪ್ರದೇಶದಲ್ಲೂ ಗುಣಮಟ್ಟದ ಉನ್ನತ ಶಿಕ್ಷಣ ಸಾಧ್ಯ
ಗ್ರಾಮೀಣ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಹೊಂದಿವೆ: ಡಾ. ಕರಿಗೂಳಿ
ಶ್ರೀರಾಮನಗರ, ಅ.9: ಗ್ರಾಮೀಣ ಪ್ರದೇಶದಲ್ಲಿಯೂ ಗುಣಮಟ್ಟದ ಉನ್ನತ ಶಿಕ್ಷಣ ನೀಡಲು ಸಾಧ್ಯವಿದ್ದು, ಗ್ರಾಮೀಣ ಪ್ರತಿಭೆಗಳು ಜಗತ್ತಿನಲ್ಲೇ ಉನ್ನತ ಸಾಧನೆ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕರಿಗೂಳಿ ಹೇಳಿದರು.
ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ರೆಡ್‌ಕ್ರಾಸ್, ಪ್ಲೇಸ್‌ಮೆಂಟ್ ಸೆಲ್ ಹಾಗೂ ಇತರೆ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ ಮತ್ತು ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಕರಿಗೂಳಿ, ವಿದ್ಯಾರ್ಥಿಗಳ ಕನಸುಗಳು ದೊಡ್ಡದಾಗಿರಬೇಕು. ಆದರೆ ಮನಸ್ಸು ಸದಾ ವಿನಮ್ರವಾಗಿರಬೇಕು. ಯಶಸ್ಸು ಸಿಕ್ಕಾಗ ಗರ್ವಪಡಬಾರದು, ಸೋಲು ಎದುರಾದಾಗ ಕುಗ್ಗಬಾರದು. ಜೀವನದಲ್ಲಿ ಎದುರಾಗುವ ಪ್ರತಿಯೊಂದು ಅನುಭವವನ್ನೂ ಬದುಕಿನ ಪಾಠವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ವಿವಿಧ ಸಹಪಠ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು ಉನ್ನತ ಗುರಿ ಸಾಧಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಹ ಪ್ರಾಧ್ಯಾಪಕ ಡಾ. ಸರ್ಫರಾಜ್ ಅಹ್ಮದ್ ಮಾತನಾಡಿ, ವಿದ್ಯಾರ್ಥಿಗಳು ಸದಾ ಧನಾತ್ಮಕ ಚಿಂತನೆ ಬೆಳೆಸಿಕೊಂಡರೆ ತಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ವೀರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪಠ್ಯದ ಜ್ಞಾನ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು. ಇದರಿಂದ ಜ್ಞಾನವರ್ಧನೆಯ ಜೊತೆಗೆ ಸಮಾಜದಲ್ಲಿ ಎಲ್ಲರನ್ನು ಗೌರವಿಸುವ ಹಾಗೂ ಉತ್ತಮವಾಗಿ ಬದುಕುವ ಕಲೆಯನ್ನು ಕಲಿಯಲು ಸಾಧ್ಯವಾಗುತ್ತದೆ ಎಂದರು.
ಕನ್ನಡ ಉಪನ್ಯಾಸಕ ವಿನಯಕುಮಾರ್ ಅವರು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಬಿಎ ಮತ್ತು ಬಿಕಾಂ ಐದನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಹೇಮಾ, ರಕ್ಷಿತಾ, ಅಕ್ಷತಾ, ಲಾವಣ್ಯ, ಚಂದ್ರು, ಶಾಂಭವಿ ಹಾಗೂ ವೀರೇಶ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಡಾ. ಶಶಿಕುಮಾರ್, ರವಿಕುಮಾರ್, ಡಾ. ವಿರೂಪಾಕ್ಷ ಕೆ., ಶಂಕ್ರಪ್ಪ, ವಿವಿಧ ವಿಭಾಗಗಳ ಉಪನ್ಯಾಸಕರು, ಆಡಳಿತ ಸಿಬ್ಬಂದಿ ವಿನಾಯಕ, ಸಹಾಯಕ ಸಿಬ್ಬಂದಿ ಶಾಂತಿ, ಶರಣಬಸವ ಹಾಗೂ ಕಾಲೇಜಿನ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.




