
Invitation extended to Nagabhushana Shivacharya Mahaswamy to participate in the Mysuru Dasara festival.
ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಆಹ್ವಾನ
ಗಂಗಾವತಿ, ಅ.9: ಕರ್ನಾಟಕದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ರಾಜ್ಯ ಸರ್ಕಾರದ ವತಿಯಿಂದ ಅ.11ರಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರ ಆದೇಶ ಹಾಗೂ ಮೈಸೂರು ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ, ಗಂಗಾವತಿ ತಾಲೂಕು ಆಡಳಿತದ ಅಧಿಕಾರಿಗಳು ಹೆಬ್ಬಾಳ ಗ್ರಾಮದ ಶ್ರೀ ಬೋಳೋಡಿ ಬಸವೇಶ್ವರ ಮಠಕ್ಕೆ ಭೇಟಿ ನೀಡಿ, ಮಠದ ಪೀಠಾಧಿಪತಿಗಳಾದ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುವಂತೆ ಅಧಿಕೃತ ಆಹ್ವಾನ ಪತ್ರಿಕೆಯನ್ನು ಹಸ್ತಾಂತರಿಸಿದರು.
ಆಮಂತ್ರಣ ಸ್ವೀಕರಿಸಿದ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಉದ್ಘಾಟಿಸುವ ಅಪೂರ್ವ ಅವಕಾಶವನ್ನು ಸರ್ಕಾರ ನೀಡಿರುವುದು ಸಂತಸದ ಹಾಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಮೈಸೂರು ದಸರಾ ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಧಾರ್ಮಿಕ ವೈಭವವನ್ನು ವಿಶ್ವದ ಮಟ್ಟದಲ್ಲಿ ಪರಿಚಯಿಸುವ ಮಹತ್ವದ ಉತ್ಸವವಾಗಿದೆ. ಇಂತಹ ಪ್ರತಿಷ್ಠಿತ ಉತ್ಸವಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಉದ್ಘಾಟಕರಾಗಿ ಆಹ್ವಾನಿಸಿರುವುದು ಇಡೀ ಕೊಪ್ಪಳ ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ರಾಜ್ಯದ ವಿವಿಧ ಮಠಾಧೀಶರು ಹಾಗೂ ಸ್ವಾಮೀಜಿಗಳನ್ನು ದಸರಾ ಮಹೋತ್ಸವದಲ್ಲಿ ಭಾಗವಹಿಸುವಂತೆ ಸರ್ಕಾರ ಮತ್ತು ಜಿಲ್ಲಾಡಳಿತದ ವತಿಯಿಂದ ಆಹ್ವಾನಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಮೈಸೂರು ಜಿಲ್ಲಾಡಳಿತ ಹಾಗೂ ಕೊಪ್ಪಳ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಂಗಾವತಿ ನಗರಸಭೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮನೋರಸ್ವಾಮಿ ಹಿರೇಮಠ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಮುಖ್ಯಮಂತ್ರಿ ಹಾಗೂ ಕರ್ನಾಟಕ ಸರ್ಕಾರ ಆಹ್ವಾನಿಸಿರುವುದು ಕೊಪ್ಪಳ ಜಿಲ್ಲೆ ಹಾಗೂ ನಾಡಿನ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕರ್ನಾಟಕದ ವಿವಿಧ ಮಠಾಧೀಶರು ಹಾಗೂ ಹರಗುರು ಚರಮೂರ್ತಿಗಳು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ತಾಲೂಕು ಆಡಳಿತದ ವತಿಯಿಂದ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಆಹ್ವಾನ ನೀಡಿರುವುದು ಸಂತಸದ ವಿಚಾರವಾಗಿದೆ. ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಠಾಧೀಶರ ಸಾನ್ನಿಧ್ಯದಿಂದ ನಾಡಿನ ಸಂಸ್ಕೃತಿ ಮತ್ತು ಪರಂಪರೆಗೆ ಮತ್ತಷ್ಟು ಗೌರವ ದೊರೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಂಗಾವತಿ ಗ್ರೇಡ್-2 ತಹಸೀಲ್ದಾರ್ ವೆಂಕಟೇಶ್, ಗ್ರಾಮ ಆಡಳಿತ ಅಧಿಕಾರಿ ರಾಘವೇಂದ್ರ, ಗಂಗಾವತಿ ನಗರಸಭೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮನೋರಸ್ವಾಮಿ ಹಿರೇಮಠ ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.




