ಮಳೆಗಾಗಿ ಪ್ರಾರ್ಥಿಸಿ ಮಂತ್ರಾಲಯ ಪಾದಯಾತ್ರೆ: ದರೋಜಿ ನಾಗರಾಜ ಶ್ರೇಷ್ಠಿ

H.Mallikarjun
H.Mallikarjun - Kalyanasiri
1 Min Read

ಮಳೆಗಾಗಿ ಪ್ರಾರ್ಥಿಸಿ ಮಂತ್ರಾಲಯ ಪಾದಯಾತ್ರೆ: ದರೋಜಿ ನಾಗರಾಜ ಶ್ರೇಷ್ಠಿ

 

Pray for rain pilgrimage to the ministry: Daroji Nagaraj Shreshtha

 

ಗಂಗಾವತಿ: ರೈತರ ಒಳಿತಿಗಾಗಿ, ದೇಶದ ಸಮೃದ್ಧಿಗಾಗಿ ಹಾಗೂ ಮಳೆಗಾಗಿ ಪ್ರಾರ್ಥಿಸಿ ಆರ್ಯವೈಶ್ಯ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಐದನೇ ವರ್ಷದ ಮಂತ್ರಾಲಯ ಪಾದಯಾತ್ರೆಯು ಯಶಸ್ವಿಯಾಗಿ ನೆರವೇರಿದೆ. ನಗರದ ಹಿರೇಜಂತಕಲ್ ವಿರೂಪಾಪುರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಿಂದ ಆರಂಭವಾದ ಈ ಯಾತ್ರೆಯಲ್ಲಿ ೫೦೦ಕ್ಕೂ ಅಧಿಕ ಭಕ್ತರು ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಪಾಲ್ಗೊಂಡಿದ್ದರು. ಜೂನ್ ೧೯ ರಿಂದ ೨೩ರವರೆಗೆ ನಡೆದ ಈ ಪಾದಯಾತ್ರೆಯ ದಾರಿಯುದ್ದಕ್ಕೂ ವರುಣ ದೇವನ ಕೃಪೆಯಿಂದ ಸತತವಾಗಿ ಮಳೆಯಾಗಿದ್ದು, ಯಾತ್ರಾರ್ಥಿಗಳಲ್ಲಿ ಅಪಾರ ಹರ್ಷ ಮೂಡಿಸಿತು.

ಈ ಕುರಿತು ಸಮಾಜದ ಅಧ್ಯಕ್ಷ ದರೋಜಿ ನಾಗರಾಜ ಶ್ರೇಷ್ಠಿ ಮಾತನಾಡಿ, ತಾಯಿ ಕನ್ನಿಕಾ ಪರಮೇಶ್ವರಿ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದದಿಂದ ಪಾದಯಾತ್ರೆ ಅತ್ಯಂತ ಸುಗಮವಾಗಿ ಸಾಗಿದೆ. ಭಜನೆ ಮತ್ತು ರಾಯರ ಸ್ಮರಣೆ ಮಾಡುತ್ತಾ ಸಾಗಿದ ಭಕ್ತರು, ದೇಶದ ಬೆನ್ನೆಲುಬಾದ ರೈತರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು ಎಂದರು. ಗುರುಗಳಾದ ಗುರು ಬಿಮ್ ಭಟ್ ಜೋಶಿ ಮಾತನಾಡಿ, ಐದು ದಿನಗಳ ಕಾಲ ಸಾಗಿದ ಯಾತ್ರೆಯು ಮಂತ್ರಾಲಯ ತಲುಪಿ ವಿಶೇಷ ಭಜನೆ, ಧ್ಯಾನ ಹಾಗೂ ಜೈಕಾರಗಳೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ತಿಳಿಸಿದರು. ನವ ಬೃಂದಾವನ ಭಜನಾ ಮಂಡಳಿಯ ಅಧ್ಯಕ್ಷ ದರೋಜಿ ನರಸಿಂಹ ಶ್ರೇಷ್ಠಿ ಅವರು ಯಾತ್ರಾರ್ಥಿಗಳಿಗೆ ದಾರಿಯುದ್ದಕ್ಕೂ ಪ್ರಸಾದ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಪಾದಯಾತ್ರೆಯಲ್ಲಿ ಪ್ರಮುಖರಾದ ಹಣವಾಳ ಚಂದ್ರಶೇಖರ ಶ್ರೇಷ್ಠಿ, ಚಂದ್ರು ಬನ್ನಿಗೋಳ, ದರೋಜಿ ಗುರುರಾಜ, ವಾಸವಿ ಯುವಜನ ಸಂಘದ ಗೌರವಾಧ್ಯಕ್ಷ ವೆಂಕಟೇಶ ದರೋಜಿ, ಬೆನ್ನೂರ ಪ್ರಹ್ಲಾದ್ ಸೇರಿದಂತೆ ಆರ್ಯವೈಶ್ಯ ಸಮಾಜದ ಮುಖಂಡರು, ಭಜನಾ ಮಂಡಳಿಯ ಪದಾಧಿಕಾರಿಗಳು, ಮಹಿಳಾ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನೂರಾರು ಭಕ್ತರು ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾದರು.

Total Views: 0
Share This Article