Gangannavar urges rectification of the chaotic state of private school vehicles in the Moodalagi zone.
ಮೂಡಲಗಿ ವಲಯದ ಖಾಸಗಿ ಶಾಲಾ ವಾಹನಗಳ ಅವ್ಯವಸ್ಥೆ ಸರಿಪಡಿಸಲು ಗಂಗಣ್ಣವರ ಆಗ್ರಹ

ಮೂಡಲಗಿ : ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಸಂಚರಿಸುತ್ತಿರುವ ಕೆಲವು ಖಾಸಗಿ ಶಾಲಾ ವಾಹನಗಳು ಹಾಗೂ ಮಕ್ಕಳನ್ನು ಸಾಗಿಸುವ ವಾಹನಗಳು ಕರ್ನಾಟಕ ಸರ್ಕಾರ ಹಾಗೂ ಸಾರಿಗೆ ಇಲಾಖೆಯ ನಿಯಮಗಳನ್ನು ಸಮರ್ಪಕವಾಗಿ ಪಾಲಿಸದೆ ಕಾರ್ಯನಿರ್ವಹಿಸುತ್ತಿರುವುದು ಕಂಡುಬರುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ಗಂಗಣ್ಣವರ ಆರೋಪಿಸಿದ್ದಾರೆ.
ಈ ಬಗ್ಗೆ ತಹಶೀಲ್ದಾರ, ಪಿಎಸ್ಐ ಹಾಗೂ ಆರ್ ಟಿ ಓ ಅವರಿಗೆ ಪತ್ರ ಬರೆದಿರುವ ಅವರು, ಹಲವು ಶಾಲಾ ವಾಹನಗಳು ಅಗತ್ಯ ದಾಖಲೆಗಳಾದ ಚಾಲಕರ ಫಿಟ್ನೆಸ್ ಪ್ರಮಾಣಪತ್ರ, ವಿಮೆ, ಪರವಾನಗಿ ಹಾಗೂ ಇತರೆ ಸುರಕ್ಷತಾ ಮಾನದಂಡಗಳನ್ನು ಸರಿಯಾಗಿ ಹೊಂದಿಲ್ಲವೆಂಬ ಅನುಮಾನವಿದೆ. ಕೆಲವು ವಾಹನಗಳಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಕ್ಕಳನ್ನು ಸಾಗಿಸಲಾಗುತ್ತಿದ್ದು, ಇದರಿಂದ ಮಕ್ಕಳ ಜೀವ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಶಾಲಾ ವಾಹನದಲ್ಲಿ ಅಶ್ಲೀಲ ಜಾನಪದ ಹಾಡು ಹಾಗೂ ಅತೀ ವೇಗವಾಗಿ ಮೊಬೈಲ್ ಪೋನ್ ಬಳಸುತ್ತಾ ವಾಹನ ಚಲಾಯಿಸುತ್ತಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಖಾಸಗಿ ಶಾಲಾ ವಾಹನಗಳ ದಾಖಲೆಗಳು, ಚಾಲಕರ ಫಿಟ್ನೆಸ್, ವಿಮೆ, ಚಾಲಕರ ಅರ್ಹತೆ ಹಾಗೂ ಇತರೆ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸಿರುವ ವಾಹನಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡಿಕೊಂಡಿದ್ದಾರೆ.
ಸಾರ್ವಜನಿಕರ ಹಾಗೂ ಶಾಲಾ ಮಕ್ಕಳ ಹಿತದೃಷ್ಟಿಯಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ. 2025 ಜನವರಿ ತಿಂಗಳಿನಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೂಡಲಗಿ ವಲಯದ ಎಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ವಾಹನ ಚಾಲಕರ ಸಭೆಯನ್ನ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಆಡಳಿತ ಮಂಡಳಿಯವರು ಸರ್ಕಾರದ ಮತ್ತು ಸಾರಿಗೆ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದರು. ಆದರೆ ಇಲ್ಲಿಯ ವರೆಗೂ ಯಾವುದೇ ಶಾಲೆಯ ವಾಹನಗಳು ಸಾರಿಗೆ ಇಲಾಖೆಯ ನಿಯಮಗಳನ್ನು ಪಾಲಿಸದೆ ನಿರ್ಲಕ್ಷ್ಯವನ್ನು ತೋರಿ ತಾಲೂಕ ಮಟ್ಟದ ಅಧಿಕಾರಿಗಳ ಸಭೆಗೆ ಅಗೌರವವನ್ನು ತೋರಿದ್ದಾರೆ ಅದಕ್ಕಾಗಿ ತಾವುಗಳು ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನಮಗೆ ಹಿಂಬರಹ ನೀಡಬೇಕೆಂದು ಗುರುನಾಥ ಗಂಗಣ್ಣವರ ಆಗ್ರಹಿಸಿದ್ದಾರೆ.


