
SSLC students donate ₹1.20 lakh to Mahantesh's family: Classmates are living proof of the value of friendship

1998-99ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಂದ ಮಹಾಂತೇಶ್ ಕುಟುಂಬಕ್ಕೆ ₹1.20 ಲಕ್ಷ ನೆರವು: ಸ್ನೇಹದ ಮೌಲ್ಯಕ್ಕೆ ಜೀವಂತ ಸಾಕ್ಷಿಯಾದ ಸಹಪಾಠಿಗಳು

ಗಂಗಾವತಿ, ಜೂ.14: ಸ್ನೇಹ ಎಂಬುದು ಕೇವಲ ಒಟ್ಟಿಗೆ ಓದಿದ ನೆನಪುಗಳಿಗೆ ಸೀಮಿತವಾಗದೇ, ಸಂಕಷ್ಟದ ಸಮಯದಲ್ಲಿ ನೆರವಿನ ಹಸ್ತ ಚಾಚುವ ಮಾನವೀಯ ಮೌಲ್ಯ ಎಂಬುದನ್ನು ಗಂಗಾವತಿ ಶ್ರೀ ಕೊಟ್ಟೂರೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 1998-99ನೇ ಸಾಲಿನ ಎಸ್.ಎಸ್.ಎಲ್.ಸಿ. ಬ್ಯಾಚ್‌ನ ವಿದ್ಯಾರ್ಥಿಗಳು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಇತ್ತೀಚೆಗೆ ನಿಧನರಾದ ತಮ್ಮ ಸಹಪಾಠಿ ಹಾಗೂ ಆತ್ಮೀಯ ಸ್ನೇಹಿತ ಮಹಾಂತೇಶ್ ಅವರ ಕುಟುಂಬದ ನೆರವಿಗಾಗಿ ಬ್ಯಾಚ್‌ನ ವಿದ್ಯಾರ್ಥಿಗಳು ಒಗ್ಗೂಡಿ ₹1,20,000/- ಆರ್ಥಿಕ ಸಹಾಯವನ್ನು ಸಂಗ್ರಹಿಸಿದರು. ಸಂಗ್ರಹವಾದ ಹಣವನ್ನು ಮಹಾಂತೇಶ್ ಅವರ ಇಬ್ಬರು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಗಂಗಾವತಿ ಅಂಚೆ ಇಲಾಖೆಯಲ್ಲಿ ತಲಾ ₹60,000/-ರಂತೆ ಫಿಕ್ಸ್‌ಡ್ ಡೆಪಾಸಿಟ್ (ಎಫ್.ಡಿ.) ಮಾಡಿಸಿ, ಅದರ ದಾಖಲಾತಿಗಳನ್ನು ಕುಟುಂಬದವರಿಗೆ ಹಸ್ತಾಂತರಿಸಿದರು.
ನಗರದ ಆರಾಧ್ಯ ದೈವ ಶ್ರೀ ಚನ್ನಬಸವ ತಾತನ ದೇವಸ್ಥಾನ ಆವರಣದಲ್ಲಿ ಭಾನುವಾರ ನಡೆದ ಸರಳ ಹಾಗೂ ಭಾವನಾತ್ಮಕ ಕಾರ್ಯಕ್ರಮದಲ್ಲಿ ಮಹಾಂತೇಶ್ ಅವರ ಕುಟುಂಬದ ಸದಸ್ಯರನ್ನು ಆಹ್ವಾನಿಸಿ, ಸ್ನೇಹಿತರು ಭೇಟಿಯಾಗಿ ಸಾಂತ್ವನ ಹೇಳಿದರು. ಬಳಿಕ ಅಂಚೆ ಇಲಾಖೆಯ ಫಿಕ್ಸ್‌ಡ್ ಡೆಪಾಸಿಟ್ ದಾಖಲಾತಿಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕುಟುಂಬದ ಸದಸ್ಯರಾದ ಲಕ್ಷ್ಮೀಕಾಂತ್ ಹಾಗೂ ಶಿಕ್ಷಕರಾದ ಎಸ್. ಚಂದ್ರಪ್ಪ ಅವರು, ಸಂಕಷ್ಟದ ಸಮಯದಲ್ಲಿ ಸ್ನೇಹಿತರು ನೀಡಿದ ಬೆಂಬಲ, ಪ್ರೋತ್ಸಾಹ ಮತ್ತು ಆರ್ಥಿಕ ಸಹಾಯವನ್ನು ಮನತುಂಬಿ ಶ್ಲಾಘಿಸಿದರು. ಮಹಾಂತೇಶ್ ಅವರ ಅಗಲಿಕೆಯ ದುಃಖದ ನಡುವೆ ಸ್ನೇಹಿತರು ತೋರಿದ ಮಾನವೀಯತೆ ಕುಟುಂಬಕ್ಕೆ ಹೊಸ ಧೈರ್ಯ ಹಾಗೂ ಆತ್ಮಸ್ಥೈರ್ಯವನ್ನು ತುಂಬಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ನೇಹಿತರು, ಮಹಾಂತೇಶ್ ಅವರೊಂದಿಗೆ ಕಳೆದ ಶಾಲಾ ದಿನಗಳ ನೆನಪುಗಳನ್ನು ಸ್ಮರಿಸಿದರು. ಸಹಪಾಠಿಯೊಬ್ಬರ ಕುಟುಂಬ ಸಂಕಷ್ಟದಲ್ಲಿರುವಾಗ ಕೈಕಟ್ಟಿ ಕುಳಿತುಕೊಳ್ಳದೆ ಎಲ್ಲರೂ ಒಗ್ಗೂಡಿ ಸಹಾಯ ಮಾಡಿರುವುದು ಸ್ನೇಹದ ನಿಜವಾದ ಅರ್ಥವನ್ನು ಪ್ರತಿಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಮಹಾಂತೇಶ್ ಅವರ ಮಕ್ಕಳ ಶಿಕ್ಷಣ, ಭವಿಷ್ಯ ಮತ್ತು ಅಗತ್ಯ ಸಂದರ್ಭಗಳಲ್ಲಿ ತಮ್ಮೆಲ್ಲರ ಸಹಕಾರ ಹಾಗೂ ಮಾರ್ಗದರ್ಶನ ನಿರಂತರವಾಗಿ ಇರುತ್ತದೆ ಎಂಬ ಭರವಸೆಯನ್ನು ನೀಡಿದರು.
ಸ್ನೇಹಿತರ ಈ ಕಾರ್ಯ ಕೇವಲ ಆರ್ಥಿಕ ನೆರವಿಗೆ ಸೀಮಿತವಾಗದೆ, ಕುಟುಂಬಕ್ಕೆ ಸಾಮಾಜಿಕ ಹಾಗೂ ಮಾನಸಿಕ ಬೆಂಬಲವನ್ನೂ ಒದಗಿಸಿದೆ. ಹಲವು ವರ್ಷಗಳ ಬಳಿಕವೂ ಸಹಪಾಠಿಗಳ ನಡುವಿನ ಆತ್ಮೀಯತೆ, ಪರಸ್ಪರ ವಿಶ್ವಾಸ ಮತ್ತು ಒಗ್ಗಟ್ಟು ಅಚಲವಾಗಿ ಉಳಿದಿರುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಮಹಾಂತೇಶ್ ಅವರ ಪತ್ನಿ ಸುಷ್ಮೀತಾ, ಮಕ್ಕಳು, ಸಹೋದರ ಪ್ರಕಾಶ, ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಾದ ಎಫ್. ರಾಘವೇಂದ್ರ, ಮಲ್ಲಿಕಾರ್ಜುನ ಗಡದ್, ಶಿವಕುಮಾರ ಅಂಗಡಿ, ಶರಣಬಸವ ಮಾ.ಪಾ., ರಾಮು ಯಾದವ್, ದಿಲೀಪ್ ಪವಾರ್, ಅಲಿಬಾಬ, ಆಸೀಫ್ ಅಹಮ್ಮದ್, ಸತೀಶ್ ಸ್ವಾಮಿ, ಎಂ.ಕೆ. ಉಲ್ಲಾಸ, ಮಲ್ಲಿಕಾರ್ಜುನ ಅಯೋಧ್ಯ, ವೆಂಕಟೇಶ ಕುಲಕರ್ಣಿ, ಸೋಮು ಮೇದಾರ್ , ರಾಜೇಶ್ ವಕೀಲ್, ಮಹಾಂತೇಶ್, ಮೋಹನ್, ಜಯರಾಮ್, ಇನಾಯತ್ ಖಾನ್, ಬಸವರಾಜ ಕುಂಬಾರ್, ಶಿವಕುಮಾರ್ ಆರಾಳ್, ವೀರಕುಮಾರ್, ಯಮನೂರು ರಾಠೋಡ್, ನಾಗರಾಜ ಖಾಜಿ, ಶಿವು, ಪ್ರಶಾಂತ್ ಸೇರಿದಂತೆ ಅನೇಕ ಸ್ನೇಹಿತರು ಉಪಸ್ಥಿತರಿದ್ದರು.
ಸಹಪಾಠಿಯ ಕುಟುಂಬದ ಸಂಕಷ್ಟದಲ್ಲಿ ನೆರವಿನ ಹಸ್ತ ಚಾಚಿದ 1998-99ನೇ ಸಾಲಿನ ಎಸ್.ಎಸ್.ಎಲ್.ಸಿ. ಬ್ಯಾಚ್‌ನ ವಿದ್ಯಾರ್ಥಿಗಳ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಸ್ನೇಹ, ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಮೌಲ್ಯಗಳಿಗೆ ಇದು ಉತ್ತಮ ಮಾದರಿಯಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
