
ASHA workers protest against delay in monthly salaries and other demands

ಮಾಸಿಕ ವೇತನ ವಿಳಂಬ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಗಂಗಾವತಿ: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ರಿ) ಎಐಯುಟಿಯುಸಿ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ವಿವಿಧ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ನಗರದ ಕೃಷ್ಣದೇವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿ ಮಾನವ ಸರಪಳಿ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಆಶಾ ಮೇಲ್ವಿಚಾರಕರಾದ ಮಂಜುಳಾ ಅವರ ಮುಖಾಂತರ ಮಾನ್ಯ ಅಭಿಯಾನ ನಿರ್ದೇಶಕರು ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ, ಆಶಾ ಕಾರ್ಯಕರ್ತೆಯರು ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದರೂ ಅವರಿಗೆ ನೀಡುತ್ತಿರುವ ಪ್ರೋತ್ಸಾಹಧನ ಅತೀ ಕಡಿಮೆಯಾಗಿದೆ. ಕಳೆದ 3–4 ತಿಂಗಳಿನಿಂದ ಕೇಂದ್ರದ ಪ್ರೋತ್ಸಾಹಧನ ಹಾಗೂ 1–2 ತಿಂಗಳ ರಾಜ್ಯ ಸರ್ಕಾರದ ಗೌರವಧನ ಬಾಕಿಯಿದ್ದು, ಇದರಿಂದ ಆಶಾ ಕಾರ್ಯಕರ್ತೆಯರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಮಾಸಿಕ ವೇತನ ನಿಗದಿ ಮಾಡಬೇಕು, ಬಾಕಿ ಇರುವ ಪ್ರೋತ್ಸಾಹಧನ ಹಾಗೂ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕು, ವಿವಿಧ ಯೋಜನೆಗಳ ಹೆಸರಿನಲ್ಲಿ ಹೆಚ್ಚುವರಿ ಕೆಲಸದ ಒತ್ತಡ ಹಾಕುವುದನ್ನು ನಿಲ್ಲಿಸಬೇಕು, ನಿವೃತ್ತಿ ಸೌಲಭ್ಯ, ಆರೋಗ್ಯ ವಿಮೆ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸಂಘದ ಮನವಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ರೂ.500–1000 ಮಾತ್ರ ಪ್ರೋತ್ಸಾಹಧನ ನೀಡುತ್ತಿರುವುದು ಅವಮಾನಕರವಾಗಿದ್ದು, ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಮಹತ್ವದ ಪಾತ್ರ ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಸೂಕ್ತ ಗೌರವ ಮತ್ತು ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಕೌಶಲ್ಯ, ಗಂಗಾವತಿ ತಾಲೂಕು ಅಧ್ಯಕ್ಷರಾದ ಜ್ಯೋತಿಲಕ್ಷ್ಮಿ, ನಗರ ಘಟಕದ ಅಧ್ಯಕ್ಷರಾದ ವಿಜಯಲಕ್ಷ್ಮಿ, ಕಾರ್ಯದರ್ಶಿಗಳಾದ ರೇಖಾ, ಲಾಲ್ಬೀ, ಮುಖಂಡರುಗಳಾದ ಶರಣಮ್ಮ, ದ್ರಾಕ್ಷಾಯಿಣಿ, ದೇವಮ್ಮ, ಲಕ್ಷ್ಮಿ, ಸಾವಿತ್ರಿ, ಸಂಗೀತ, ಲಲಿತಾ, ಹಂಪಮ್ಮ, ಗೀತಾ, ಹನುಮಕ್ಕ, ಗೌರಮ್ಮ, ಗಿರಿಜಮ್ಮ, ರೇಣುಕಾ, ಸಮೀರ್ ಭಾನು, ಈರಮ್ಮ, ಶಾರದಾ, ಜಯ, ನಿಂಗಮ್ಮ, ಬಸಮ್ಮ, ಕಮಲಾಕ್ಷಿ, ಮಂಜುಳಾ, ರಾಧಾ, ರೇಖಾ, ಮೆರೋನಿಸ್ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು
