ಬೇಸಿಗೆಯಲ್ಲಿ ಆರೋಗ್ಯದ ರಕ್ಷಣೆ: ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಪ್ರಮುಖ ಸಲಹೆ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Health protection in summer: Important advice from the Health Department to the public

ಬೇಸಿಗೆಯಲ್ಲಿ ಆರೋಗ್ಯದ ರಕ್ಷಣೆ: ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಪ್ರಮುಖ ಸಲಹೆ

ಜಾಹೀರಾತು


ಕೊಪ್ಪಳ ಏಪ್ರಿಲ್ 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಾದ್ಯಂತ ಪ್ರಸ್ತುತ ದಿನಗಳಲ್ಲಿ ಬಿಸಿಲಿನ ಪ್ರಕರತೆ ಮತ್ತು ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವಯೋವೃದ್ದರು ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸಾರ್ವಜನಿಕರಿಗೆ ಆರೋಗ್ಯ ಕುರಿತು ಪ್ರಮುಖ ಸಲಹೆಗಳನ್ನು ನೀಡಲಾಗಿದೆ.
 ಸಾರ್ವಜನಿಕರು ಬೇಸಿಗೆ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಮುಖ ಆರೋಗ್ಯ ಸಲಹೆಗಳನ್ನು ಪಾಲಿಸುವುದು ಅತ್ಯವಶ್ಯಕವಾಗಿದ್ದು, ಅವುಗಳು ಇಂತಿವೆ.
ನೀರಿನ ಸೇವನೆ: ಈ ಸಮಯದಲ್ಲಿ ಹೆಚ್ಚು ನೀರಿನ ಸೇವನೆ ಮಾಡಬೇಕು. ಬಾಯಾರಿಕೆ ಇಲ್ಲದಿದ್ದರೂ ಸಹ ದಿನವಿಡೀ ಸಾಕಷ್ಟು ನೀರು ಕುಡಿಯುತ್ತಿರಬೇಕು.
ತಂಪು ಪಾನೀಯಗಳ ಆಯ್ಕೆ: ಬೇಸಿಗೆ ಸಮಯದಲ್ಲಿ ನಿಂಬೆ ನೀರು, ಮಜ್ಜಿಗೆ, ಎಳೆನೀರು ಮತ್ತು ಮನೆಯಲ್ಲಿ ತಯಾರಿಸಿದ ಪಾನೀಯಗಳನ್ನು ಹೆಚ್ಚಾಗಿ ಬಳಸುವುದು ಸೂಕ್ತವಾಗಿದೆ.
ಆಹಾರ ಕ್ರಮ: ಸೌತೆಕಾಯಿ, ಕಲ್ಲಂಗಡಿ, ಕಿತ್ತಳೆ ಹಾಗೂ ದ್ರಾಕ್ಷಿಯಂತಹ ನೀರಿನ ಅಂಶ ಹೆಚ್ಚಿರುವ ಹಣ್ಣು- ತರಕಾರಿಗಳನ್ನು ಹೆಚ್ಚು ಸೇವಿಸಬೇಕು.
ಬಟ್ಟೆ ಧರಿಸುವುದು: ಹಗುರವಾದ, ತಿಳಿ ಬಣ್ಣದ ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವುದು ಸೂಕ್ತ.
ಹೊರಹೋಗುವಾಗ ಜಾಗ್ರತೆ: ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಛತ್ರಿ, ಟೋಪಿ, ಕಪ್ಪು ಕನ್ನಡಕ ಹಾಗೂ ಚಪ್ಪಲಿಗಳನ್ನು ಬಳಸಬೇಕು.
ಪ್ರಥಮ ಚಿಕಿತ್ಸೆ: ಬಿಸಿಲಿನಿಂದ ಯಾರಾದರೂ ಪ್ರಜ್ಞೆ ತಪ್ಪಿದರೆ, ತಕ್ಷಣ ಅವರಿಗೆ ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಒದ್ದೆ ಬಟ್ಟೆಯಿಂದ ಅವರ ಮೈ ಒರೆಸಬೇಕು ಹಾಗೂ ವೈದ್ಯರನ್ನು ಸಂಪರ್ಕಿಬೇಕು.
ಸಭೆ-ಸಮಾರಂಭ: ಹೊರಾಂಗಣ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟು ಬೆಳಗ್ಗೆ ಅಥವಾ ಸಂಜೆ ಆಯೋಜಿಸಿ, ಜನರಿಗೆ ನೆರಳು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು.
ಪ್ರಾಣಿಗಳ ರಕ್ಷಣೆ: ಬೇಸಿಗೆಯಲ್ಲಿ ಸಾಕು ಪ್ರಾಣಿಗಳ ಮೇಲೆಯು ನಿಗಾ ವಹಿಸುವುದು ಅತ್ಯವಶ್ಯಕವಾಗಿದ್ದು, ಅವುಗಳನ್ನು ನೆರಳಿನಲ್ಲಿರಿಸಿ. ಪ್ರಾಣಿಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸಬೇಕು.
ವಾಹನಗಳ ಜಾಗ್ರತೆ: ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕು ಪ್ರಾಣಿಗಳನ್ನು ಒಬ್ಬರೇ ಬಿಟ್ಟು ಹೋಗಬೇಡಿ.
ತಪ್ಪಿಸಬೇಕಾದವು: ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಅತಿಯಾದ ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ಸೇವಿಸಬೇಡಿ.
 ವಿಶೇಷವಾಗಿ ಕೆರೆ, ಬಾವಿ ಅಥವಾ ಕಾಲುವೆಗಳ ಹತ್ತಿರ ಮಕ್ಕಳು ಹೋಗದಂತೆ ನೋಡಿಕಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಟಿ. ಲಿಂಗರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article