In SSLC exams, there was rampant copying, giving answers to those who wanted them, and subject teachers roaming around the exam hall.

ಮೂಡಲಗಿ: ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರಾಜಾರೋಷವಾಗಿ ನಕಲು ಪೂರೈಕೆ, ಗೆ ಬೇಕಾದವರಿಗೆ ಉತ್ತರ ಹೇಳುವಿಕೆ, ಪರೀಕ್ಷಾ ಹಾಲ್ ನಲ್ಲಿ ವಿಷಯ ಶಿಕ್ಷಕರ ತಿರುಗಾಟದಂಥ ಅಪಸವ್ಯಗಳಿಗೆ ಹೆಸರಾಗಿರುವ ಮೂಡಲಗಿ ಶೈಕ್ಷಣಿಕ ವಲಯ ಇದೀಗ ಮತ್ತೊಂದು ಹಗರಣಕ್ಕೆ ಸಾಕ್ಷಿಯಾಗಿದೆ.
ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಎಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ರಸ್ತೆಯ ಮೇಲೆ ಬೇಕಾಬಿಟ್ಟಿಯಾಗಿ ಬೈಕ್ ಮೇಲೆ ಸಾಗಿಸಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಯಾವುದೇ ಭದ್ರತೆಯಿಲ್ಲದೆ ದ್ವಿಚಕ್ರ ವಾಹನದಲ್ಲಿ ಪರೀಕ್ಷಾ ಕಟ್ಟುಗಳನ್ನು ಸಾಗಿಸುತ್ತಿರುವ ದೃಶ್ಯ ಕಂಡುಬಂದಿದ್ದು, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಡಲಗಿಯ ಉಮಾಭಾಯಿ ಪ್ರೌಢಶಾಲಾ ಕೇಂದ್ರದಲ್ಲಿ ಎಸ್ಎಸ್ಎಲ್ಸಿ ಇಂಗ್ಲಿಷ್ ಭಾಷಾ ಪರೀಕ್ಷೆಯ ನಂತರ ಈ ಗಂಭೀರ ಲೋಪ ನಡೆದಿದೆ. ಪರೀಕ್ಷಾ ಸಿಬ್ಬಂದಿ ಎಸ್.ಆರ್. ಬೆಳಗಲಿ ಹಾಗೂ ದರ್ಜೆ ನೌಕರರ ಬೇಜವಾಬ್ದಾರಿತನದಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಯಾವುದೇ ಪೊಲೀಸ್ ಭದ್ರತೆಯಿಲ್ಲದೆ ಕೇವಲ ದ್ವಿಚಕ್ರ ವಾಹನದಲ್ಲಿ ಸಾಗಿಸಲಾಗುತ್ತಿದ್ದಾಗ ಫ್ತೀಡಂ ಟಿವಿಯ ಪ್ರತಿನಿಧಿಯೊಬ್ಬರು ತಡೆದು ಪ್ರಶ್ನೆ ಮಾಡಿದರೂ ಕ್ಯಾರೆ ಎನ್ನದೆ ಉತ್ತರ ಪತ್ರಿಕೆಗಳನ್ನು ಸಾಗಿಸಿರುವ ಘಟನೆಯ ಬಗ್ಗೆ ಟಿವಿ ವರದಿ ಮಾಡಿದೆ.
ನಿಯಮದ ಪ್ರಕಾರ ಉತ್ತರ ಪತ್ರಿಕೆಗಳನ್ನು ಅತ್ಯಂತ ಬಿಗಿ ಭದ್ರತೆಯಲ್ಲಿ ರವಾನಿಸಬೇಕಿದ್ದರೂ, ಇಲ್ಲಿನ ಸಿಬ್ಬಂದಿ ಮಾತ್ರ ಬಾಯಲ್ಲಿ ಎಲೆ ಅಡಿಕೆ ಹಾಕಿಕೊಂಡು ಸಾರ್ವಜನಿಕರ ಟೀಕೆಗೂ ಕ್ಯಾರೆ ಎನ್ನದೆ ಹಾರಿಕೆ ಉತ್ತರ ನೀಡುತ್ತಿರುವುದು ಕಂಡುಬಂದಿದೆ.
ಪ್ರಶ್ನೆ ಪತ್ರಿಕೆಗಳನ್ನು ತರುವಾಗ ತೋರುವ ಬಿಗಿ ಭದ್ರತೆ, ಪರೀಕ್ಷೆ ಮುಗಿದ ಮೇಲೆ ಉತ್ತರ ಪತ್ರಿಕೆಗಳನ್ನು ಮರಳಿಸುವಾಗ ಏಕಿಲ್ಲ? ಎಂಬುದು ಈಗ ಸಾರ್ವಜನಿಕರ ಪ್ರಶ್ನೆಯಾಗಿದೆ. ಉತ್ತರ ಪತ್ರಿಕೆಗಳನ್ನು ಅತೀ ನಿರ್ಲಕ್ಷ್ಯದಿಂದ ಸಾಗಿಸುತ್ತಿದ್ದ ದೃಶ್ಯಗಳು ಸ್ಥಳೀಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಧಿಕಾರಿಗಳ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತಿವೆ. ಈ ಕೂಡಲೇ ಶಿಕ್ಷಣ ಸಚಿವರು ಮಧ್ಯೆ ಪ್ರವೇಶಿಸಿ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೋಷಕರು ಮತ್ತು ಶಿಕ್ಷಣ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಈಗಾಗಲೇ ಪರೀಕ್ಷಾ ಕೇಂದ್ರಗಳಲ್ಲಿ ನಕಲು ಪೂರೈಕೆ ರಾಜಾರೋಷವಾಗಿ ನಡೆಯುತ್ತಿರುವ ಬಗ್ಗೆ ಸ್ಥಳೀಯ ಬಿಇಓರವರ ಗಮನಕ್ಕೆ ತಂದಿದ್ದರೂ ಬಿಇಓ ಪ್ರಕಾಶ ಹಿರೇಮಠರವರು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದರೆ ಕಾಪಿ ಚೀಟಿ ಪೂರೈಕೆಯಿಂದ ನಿಜವಾಗಲೂ ಅಭ್ಯಾಸ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಈ ರೀತಿ ಉತ್ತರ ಪತ್ರಿಕೆಗಳ ರವಾನೆ ಮಾಡಿದರೆ ಅವು ಕಳುವಾದರೆ ಅಥವಾ ದುಷ್ಕರ್ಮಿಗಳ ಕೈಗೆ ಸಿಕ್ಕರೆ ವಿದ್ಯಾರ್ಥಿಗಳ ಗತಿಯೇನು ಎಂಬುದಕ್ಕೆ ಉತ್ತರ ಕೊಡುವವರಾರು ?
ಶಿಕ್ಷಣ ಇಲಾಖೆ ಗಾಢ ನಿದ್ರೆಯಿಂದ ಎಚ್ಚತ್ತುಕೊಳ್ಳಬೇಕಾಗಿದೆ.
