ಬಡವರಿಗೆ ನೆಮ್ಮದಿಯ ಬದುಕು ನೀಡಿದ ದಕ್ಷ ಅಧಿಕಾರಿ
ಮೀಟರ್ ದಂಧೆಕೋರರಿಗೆ ಸಿಂಹಸ್ವಪ್ನವಾದ ಎಸ್.ಪಿ. ನಾಯ್ಕ್
An efficient officer who gave a comfortable life to the poor
S.P. Naik, a dream come true for meter traders

ಕುಕನೂರು, ಮಾ.28: ಪೊಲೀಸರು ಎಂದರೆ ಮಾರು ದೂರ ಓಡಿಹೋಗುವ ಇಂದಿನ ಕಾಲದಲ್ಲಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಬಹಳ ಅಪರೂಪವಾಗಿದ್ದಾರೆ. ಸದಾ ಜನಪರ ಕಾಳಜಿಯಿಂದಾಗಿ ಜನಮನ ಗೆದ್ದಿರುವ ಬೇವೂರು ಠಾಣೆಯ ದಕ್ಷ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಪಿ. ನಾಯ್ಕ್ ಅವರು ಈ ಭಾಗದ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಸಾರ್ವಜನಿಕರ ನಂಬುಗೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಸ್.ಪಿ. ನಾಯ್ಕ್ ಅವರು ಕಳೆದ ನಾಲ್ಕೈದು ತಿಂಗಳ ಹಿಂದೆ ವರ್ಗಾವಣೆಗೊಂಡು ಬೇವೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಭಾಗದಲ್ಲಿ ಹಳ್ಳ ಹಿಡಿದಿದ್ದ ಕಾನೂನು ಸುವ್ಯವಸ್ಥೆಯನ್ನು ಕೇವಲ ನಾಲ್ಕು ತಿಂಗಳಲ್ಲಿಯೇ ತಹಬದಿಗೆ ತಂದಿದ್ದಾರೆ. ಅಕ್ರಮ ಚಟುವಟಿಕೆಗಳಿಗಿಂತ ಹೆಚ್ಚಾಗಿ ಈ ಭಾಗದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಮಿತಿಮೀರಿತ್ತು. ಅದರಲ್ಲೂ ಕುದರಿಮೋತಿಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿಗೆ ಬೇಸತ್ತು ಸಾಕಷ್ಟು ಜನ ಊರು ಬಿಟ್ಟು ಬೆಂಗಳೂರು, ಇನ್ನಿತರೆಡೆ ವಲಸೆ ಹೋಗಿದ್ದರು. ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಅದೆಷ್ಟರ ಮಟ್ಟಿಗೆ ಇತ್ತೆಂದರೆ ಇವರ ಹಿಂಸೆ ತಾಳಲಾಗದೇ ಕೆಲವರು ವಿಷ ಸೇವಿಸಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದರು. ಇದೆಲ್ಲಾ ಗಮನಕ್ಕೆ ಬರುತ್ತಿದ್ದಂತೆಯೇ ಕಾರ್ಯಚರಣೆಗೆ ಇಳಿದ ಎಸ್.ಪಿ.ನಾಯ್ಕ್ ಅವರು ಮೀಟರ್ ಬಡ್ಡಿ ದಂಧೆಕೋರರನ್ನು ಹೆಡೆಮುರಿಕಟ್ಟಿ ಕಾನೂನಿನ ಪಾಠ ಕಲಿಸಿದ್ದಾರೆ. ಬಡವರ ರಕ್ತ ಹೀರುತ್ತಿದ್ದ ದಂಧೆಕೋರರಿಗೆ ಸಿಂಹಸ್ವಪ್ನವಾಗಿರುವ ಎಸ್.ಪಿ. ನಾಯ್ಕ್ ಬಡವರ ಪಾಲಿನ ರಕ್ಷಕನಂತಾಗಿದ್ದಾರೆ.
ಸದಾ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ಸಾಹದ ಚಿಲುಮೆಯೆಂತಿರುವ ಎಸ್.ಪಿ. ನಾಯ್ಕ್, ಆಗಾಗ ತಮ್ಮ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸುವುದರ ಜೊತೆಗೆ ದುಷ್ಚಟಗಳಿಂದ ದೂರವಿದ್ದು ಗುರಿ ಸಾಧನೆಯ ಬಗ್ಗೆ ಮಕ್ಕಳಿಗೆ ಬೋಧನೆ ಮಾಡುವ ಮೂಲಕ ಎಳೆ ವಯಸ್ಸಿನಲ್ಲಿಯೇ ಮಕ್ಕಳನ್ನು ಸತ್ಪ್ರಜೆಗಳನ್ನಾಗಿಸುವ ಪ್ರಯತ್ನ ನಡೆಸಿದ್ದಾರೆ. ಯಾರೊಂದಿಗೂ ಗಟ್ಟಿಯಾಗಿ ಅವಾಚ್ಯವಾಗಿ ಮಾತನಾಡದ ಎಸ್.ಪಿ. ನಾಯ್ಕ್ ಠಾಣೆಗೆ ಆಗಮಿಸುವ ಪ್ರತಿಯೊಬ್ಬರೊಂದಿಗೂ ಸೌಮ್ಯವಾಗಿ ವ್ಯವಹರಿಸುವ ಮೂಲಕ ತಾನೊಬ್ಬ ಜನಸ್ನೇಹಿ ಪೊಲೀಸ್ ಎಂಬುವುದನ್ನು ಸಾರ್ವಜನಿಕರಲ್ಲಿ ಮನದಟ್ಟು ಮಾಡಿದ್ದಾರೆ.
ಇವರು ಇಲ್ಲಿಗೆ ಬಂದು ಕೇವಲ ನಾಲ್ಕು ತಿಂಗಳುಗಳು ಆಗಿದ್ದರೂ ಕೂಡ ಸಾಕಷ್ಟು ಅಕ್ರಮ ಚಟುವಟಿಕೆಗಳು ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಮಟ್ಕಾ, ಇಸ್ಪೇಟ್, ಅಕ್ರಮ ಮದ್ಯೆ ಮಾರಾಟ, ಮರಮ್ಮು, ಮರಳು ಸಾಗಾಣಿಕೆ ಸೇರಿದಂತೆ ಸಮಾಜದ ಕೆಲ ಅನಿಷ್ಠಗಳನ್ನೆಲ್ಲ ತೊಡೆದು ಹಾಕುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಹೆಲ್ಮೆಟ್ ಇಲ್ಲದೇ ರಸ್ತೆಯಲ್ಲಿ ಸಾಗುವ ವಾಹನ ಸವಾರರನ್ನು ನಿಲ್ಲಿಸಿ ಅವರೊಂದಿಗೆ ಮೃದುವಾಗಿ ಚರ್ಚಿಸಿ ಗುಲಾಬಿ ಹೂವುಗಳನ್ನು ನೀಡುವ ಮೂಲಕ ಹೆಲ್ಮೆಟ್ ಧಾರಣೆ ಎಷ್ಟು ಮುಖ್ಯ ಜೊತೆಗೆ ಮಾನವ ಜೀವ ಎಷ್ಟು ಅಮೂಲ್ಯ ಎಂಬುವುದನ್ನು ಮನದಟ್ಟು ಮಾಡುತ್ತಾರೆ. ಇನ್ನೊಂದು ಪ್ರಮುಖ ವಿಷಯವೆಂದರೆ ಕೇವಲ ನಾಲ್ಕು ತಿಂಗಳಲ್ಲಿ 200ಕ್ಕೂ ಹೆಚ್ಚು ಮೊಬೈಲ್ಗಳನ್ನು ಕಳೆದುಕೊಂಡ ಮಾಲಕರಿಗೆ ಪತ್ತೆಹಚ್ಚಿ ನೀಡುವಲ್ಲಿ ಶ್ರಮವಸಿದ್ದಾರೆ.
ಬೇವೂರು ಠಾಣಾ ವ್ಯಾಪ್ತಿಯಲ್ಲಿ ಸದ್ಯಕ್ಕೆ ಅಕ್ರಮ ದಂಧೆಕೋರರಿಗೆ ನಿದ್ದೆ ಇಲ್ಲದಂತಾಗಿದೆ. ಜನಸ್ನೇಹಿಯಾಗಿ ಅಕ್ರಮ ದಂಧೆಕೋರರಿಗೆ ಸಿಂಹಸ್ವಪ್ನವಾಗಿ ಕಾನೂನು ಪರಿಪಾಲನೆ ಮಾಡುತ್ತಿರುವ ಎಸ್.ಪಿ. ನಾಯ್ಕ್ ಎಂದರೆ ಬೇವೂರು ಠಾಣೆಯ ಪ್ರತಿಯೊಬ್ಬ ಸಿಬ್ಬಂದಿಗೂ ಅಚ್ಚುಮೆಚ್ಚು. ಕರ್ತವ್ಯದ ವಿಷಯದಲ್ಲಿ ಸದಾ ಜಾಗೃತರಾಗಿರುವ ಎಸ್.ಪಿ. ನಾಯ್ಕ್ ಬಡವರ ಪರ ಎಂಬುವುದು ಸಾರ್ವಜನಿಕ ವಲಯದಲ್ಲಿ ಖ್ಯಾತಿ ಪಡೆದರೆ, ಆಂತರಿಕವಾಗಿ ಇವರು ನ್ಯಾಯಪರ ಎಂಬುವುದು ಪಾರದರ್ಶಕ ಸತ್ಯ.
ಕೋಟ್
ಕುದರಿಮೋತಿಯಲ್ಲಿ ಮೀಟರ್ ದಂಧೆಕೋರರ ಹಾವಳಿ ಮಿತಿಮೀರಿತ್ತು. ಆದರೆ, ಎಸ್.ಪಿ. ನಾಯ್ಕ್ ಅವರ ಪಾರದರ್ಶಕ ಕಾರ್ಯಾಚರಣೆಯಿಂದ ಸದ್ಯಕ್ಕೆ ದಂಧೆಕೋರರಿಗೆ ಕಡಿವಾಣ ಬಿದ್ದಿದೆ. ಶೇಕಡಾ 5 ರಿಂದ 10 ರೂಪಾಯಿ ಬಡ್ಡಿ ಕಟ್ಟುತ್ತಿದ್ದ ಬಡವರು ನಿಟ್ಟುಸಿರುವ ಬಿಟ್ಟಿದ್ದಾರೆ. ಜೊತೆಗೆ ಬೇವೂರು ಠಾಣಾ ವ್ಯಾಪ್ತಿಯಲ್ಲಿ ಎಲ್ಲಾ ಅಕ್ರಮ ದಂಧೆಗಳಿಗೆ ಕಡಿವಾಣ ಬಿದ್ದಿದೆ. ಎಸ್.ಪಿ. ನಾಯ್ಕ್ ಅವರಂತಹ ಜನಸ್ನೇಹಿ ಅಧಿಕಾರಿಗಳು ಹೆಚ್ಚಾದರೆ ಪೊಲೀಸ್ ಇಲಾಖೆಯಲ್ಲಿ ಸಾರ್ವಜನಿಕರ ನಂಬಿಕೆ ಇನ್ನಷ್ಟು ಹೆಚ್ಚಾಗುತ್ತದೆ.
- ಪಂಪನಗೌಡ ಮಾಲೀಪಾಟೀಲ್, ಸ್ಥಳೀಯರು
