ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಉತ್ತಮ ಸಲಹೆ

Mallikarjun
2 Min Read
Some good advice to maintain good health




ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಉತ್ತಮ ಸಲಹೆ

    ಬಹಳಷ್ಟು ಮಂದಿಗೆ ಸಂಜೆಯ ಹೊತ್ತು ಏನಾದರೊಂದು ಹೊಟ್ಟೆಗಿಳಿಸುವ (Evening snacks) ಅಭ್ಯಾಸವಿರುತ್ತದೆ. ಮಧ್ಯಾಹ್ನದ ಊಟ ನಿಧಾನವಾಗಿ ಕರಗುತ್ತಾ ಸಂಜೆ ಐದರ ಮೇಲೆ ಹೊಟ್ಟೆ ಮೆತ್ತಗೆ ಚುರುಗುಟ್ಟಲು ಆರಂಭಿಸುವಾಗ, ಮೆಲ್ಲಗೆ ಆಫೀಸಿನಿಂದ ಏನಾದರೊಂದು ಹೊಟ್ಟೆ ತುಂಬಿಸುವ ಎಂದು ದರ್ಶಿನಿಗೋ, ರಸ್ತೆಬದಿ ಚಾಟ್‌ ಅಂಗಡಿಗೋ ಎಡತಾಕುವುದುಂಟು.

ದಿನವೂ ಗೆಳೆಯರೊಡನೆ ಹರಟೆ ಹೊಡೆಯುತ್ತಾ ಸಿಕ್ಕಾಪಟ್ಟೆ ಹಸಿವು ಎಂದು ಗಬಗಬನೆ ಸಮೋಸವನ್ನೋ, ಪಾವ್‌ ಭಾಜಿಯನ್ನೋ ಅಥವಾ ಬಜ್ಜಿ ಬೋಂಡಾ ಥರದ ಇನ್ನೇನಾದರೂ ಹೊಟ್ಟೆ ತುಂಬಿಸಬಲ್ಲ ತಿನಿಸುಗಳನ್ನು ಯಾವ ನಿಯಂತ್ರಣವೂ ಇಲ್ಲದೆ ತಿಂದು ಒಂದು ಚಹಾ ಕುಡಿದು ಮತ್ತೆ ಬಂದು ಆಫೀಸು ಡೆಸ್ಕಿನಲ್ಲಿ ಕೂತು, ಪಡೆದ ಒಂದಷ್ಟು ಶಕ್ತಿಯನ್ನು ಪಡೆದು ಇನ್ನೊಂದೆರಡು ಗಂಟೆ ಕೆಲಸ ಮಾಡಿ ಮನೆಗೆ ಮರಳುವುದುಂಟು.

ಮನೆಗೆ ಬಂದು ಫ್ರೆಶ್ಶಾಗಿ, ಹತ್ತು ಗಂಟೆಗೋ, ಹನ್ನೊಂದಕ್ಕೋ ಊಟ ಮಾಡಿ ಸ್ವಲ್ಪ ಹೊತ್ತು ನೆಟ್‌ಫ್ಲಿಕ್ಸನ್ನೋ, ಪ್ರೈಮನ್ನೋ ಜಾಲಾಡಿ (Binge watch) ನಿದ್ದೆಗೆ ಜಾರುವುದು ಇಂದು ಬಹುತೇಕರಿಗೆ ಅಭ್ಯಾಸವಾಗಿ ಹೋದ ದಿನಚರಿ. ಇದರಿಂದ ಆರೋಗ್ಯಕ್ಕೆ (health tips) ಏನಾಗುತ್ತದೆ? ಗಮನಿಸೋಣ.ಆದರೆ, ಈ ದಿನಚರಿಯಿಂದಲೇ ಆಗಿರುವ ಅಥವಾ ಆಗುತ್ತಿರುವ ಅಡ್ಡ ಪರಿಣಾಮಗಳನ್ನು ಎಂದಾದರೂ ಗಮನಿಸಿದ್ದೀರಾ? ಸಮೋಸಾ, ಪಕೋಡಾ, ಬ್ರೆಡ್‌ ರೋಲ್‌, ನೂಡಲ್ಸ್ ಇತ್ಯಾದಿ ಇತ್ಯಾದಿ ಜಂಕ್‌ ಆಹಾರವನ್ನು ಸಾಮಾನ್ಯವಾಗಿ ಭಾರತೀಯರಿಗೆ ಸಂಜೆಯ ಹೊತ್ತಿನಲ್ಲಿ ತಿಂದು ರೂಢಿ. ಮನೆಯಲ್ಲಿರಲಿ, ಕಚೇರಿಯಲ್ಲಿರಲಿ, ಸಂಜೆಯ ಹೊತ್ತು, ಮನಸ್ಸು ಇಂತಹ ಆಹಾರಕ್ಕಾಗಿ ಹಾತೊರೆಯುತ್ತಿರುತ್ತದೆ. ಆದರೆ, ಬಹಳಷ್ಟು ಮಂದಿ ಇದರಿಂದಾಗಿ, ತಡವಾಗಿ ಉಣ್ಣುವುದು ಅಥವಾ ರಾತ್ರಿಯ ಊಟವನ್ನು ಬಿಡುವುದು ಇತ್ಯಾದಿಗಳನ್ನು ಮಾಡುತ್ತಾರೆ. ದೇಹಕ್ಕೆ ಸರಿಯಾದ ಸಮಯಕ್ಕೆ ಕೊಡಬೇಕಾದ ಪೋಷಕಾಂಶಗಳೂ (Nutrients) ದಕ್ಕುವುದಿಲ್ಲ.

ಬಹುತೇಕ ಎಲ್ಲರೂ ಇಂದು ಅನುಭವಿಸುತ್ತಿರುವ ತೂಕ ಹೆಚ್ಚಳ (weight gain), ಬೊಜ್ಜಿನ (cholesterol) ಸಮಸ್ಯೆಗೆ ಇದೂ ಪ್ರಮುಖ ಕಾರಣವಾಗಿದೆ ಎಂದರೆ ನೀವು ನಂಬಲೇಬೇಕು.ಈ ಎಲ್ಲ ಸ್ನ್ಯಾಕ್‌ಗಳನ್ನು ಬಿಡಿ: ಮುಖ್ಯವಾಗಿ, ತಡ ಸಂಜೆಯ ಇಂಥ ಆಹಾರ ಸೇವನೆಯಿಂದ ರಾತ್ರಿಯ ಊಟ ನಿಧಾನವಾಗುತ್ತದೆ. ಬ್ರೆಡ್‌ ರೋಲ್‌, ಸ್ಯಾಂಡ್‌ವಿಚ್‌, ಪಕೋಡಾ, ನೂಡಲ್ಸ್‌, ಸಮೋಸ ಇತ್ಯಾದಿಗಳಿಂದ ದೇಹಕ್ಕೆ ಮೈದಾ, ಅತಿಯಾದ ಎಣ್ಣೆಯಂಶ, ಆಲೂಗಡ್ಡೆ ಇತ್ಯಾದಿಗಳು ಸೇರಿ, ನಿಧಾನವಾಗಿ ಜೀರ್ಣಕ್ರಿಯೆ ಶುರುವಾಗುತ್ತದೆ. ಇದರಿಂದ ಹಸಿವು ಮಾಯವಾಗಿ, ರಾತ್ರಿ ಹತ್ತು ಹನ್ನೊಂದರ ವೇಳೆಗೆ ಹಸಿವಾಗುತ್ತದೆ. ಪರಿಣಾಮ ತಡವಾಗಿ ಊಟದಿಂದ ಮತ್ತೆ ಆರೋಗ್ಯ ಹದ ತಪ್ಪುತ್ತದೆ. ತೂಕ, ಬೊಜ್ಜು ಹೆಚ್ಚುತ್ತದೆ.ಅಷ್ಟೇ ಅಲ್ಲ, ಇಂಥ ಆಹಾರಗಳಲ್ಲಿ ಪೋಷಕಾಂಶ ಕಡಿಮೆ, ಬದಲಾಗಿ ಸಕ್ಕರೆ, ಕಾರ್ಬೋಹೈಡ್ರೇಟ್‌ ಪ್ರಮಾಣ ಹೆಚ್ಚು. ಇದರಿಂದ ಪಿತ್ತಕೋಶ, ಹೃದಯ, ಮೆದೋಜೀರಕಾಂಗ ಇತ್ಯಾದಿಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

ಅಲ್ಲದೆ ಇಂತಹ ಬೀದಿಬದಿಯ ತಿಂಡಿಗಳು ಮನೆಯ ತಿಂಡಿಯಷ್ಟು ಆರೋಗ್ಯಕರವೂ ಅಲ್ಲ. ಪದೇ ಪದೇ ಕರಿದ ಎಣ್ಣೆಯಲ್ಲೇ ಕರಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗುತ್ತದೆ. ಈ ಕಾರಣಗಳಿಂದ ಇಂದು ಬಹುತೇಕರು ಅನುಭವಿಸುವ ಬೊಜ್ಜಿನ ಸಮಸ್ಯೆ, ತೂಕದಲ್ಲಿ ಹೆಚ್ಚಳ, ಫ್ಯಾಟಿ ಲಿವರ್‌, ಮಧುಮೇಹ, ನಿದ್ದೆಯ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆಗಳು, ಅಧಿಕ ಕೊಲೆಸ್ಟೆರಾಲ್‌, ಸಂಧಿವಾತ ಸೇರಿದಂತೆ ನಾನಾ ಸಮಸ್ಯೆಗಳು ಆರಂಭವಾಗುತ್ತದೆ.

Share This Article
Leave a Comment