ಅನಿಲ ಸಿಲಿಂಡರ್ ದರ ಏರಿಕೆ ತಕ್ಷಣ ವಾಪಸ್ ಪಡೆಯಲಿ: ಎಸ್‌ಯುಸಿಐ(ಸಿ) ಆಗ್ರಹ
Immediately roll back the gas cylinder price hike: SUCI(C) demands
ಅನಿಲ ಸಿಲಿಂಡರ್ ದರ ಏರಿಕೆ ತಕ್ಷಣ ವಾಪಸ್ ಪಡೆಯಲಿ: ಎಸ್‌ಯುಸಿಐ(ಸಿ) ಆಗ್ರಹ

ಕೊಪ್ಪಳ:ಅಡುಗೆ ಅನಿಲ ಸಿಲಿಂಡರ್ ದರ ಏರಿಕೆಗೆ ಖಂಡನೆ
ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗೃಹಬಳಕೆಯ ಅನಿಲ ಸಿಲಿಂಡರ್‌ಗೆ ರೂ.60 ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗೆ ರೂ.114 ಹೆಚ್ಚಳ ಮಾಡಿರುವ ಕ್ರಮವನ್ನು ಎಸ್‌ಯುಸಿಐ(ಸಿ) ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಕೆ. ಉಮಾ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಅಮೆರಿಕಾ–ಇಸ್ರೇಲ್ ರಾಷ್ಟ್ರಗಳು ಇರಾನ್ ಮೇಲೆ ದಾಳಿ ನಡೆಸಿದ ಪರಿಣಾಮವಾಗಿ ಭಾರತಕ್ಕೆ ಕಚ್ಚಾತೈಲ ಮತ್ತು ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಿ ಈ ಬೆಲೆ ಏರಿಕೆಯನ್ನು ಸಮರ್ಥಿಸಲಾಗುತ್ತಿದೆ. ಆದರೆ ಈ ಕುರಿತು ಕೇಂದ್ರ ಬಿಜೆಪಿ ಸರ್ಕಾರವು ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಸುತ್ತಿದ್ದಾಗ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ ಏಕೆ? ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವಂತೆ ಅಮೆರಿಕಾ ಹಾಕಿದ ಒತ್ತಡಕ್ಕೆ ಮಣಿದಿರುವುದು ಯಾರ ಹಿತಾಸಕ್ತಿಗಾಗಿ? ಇನ್ನೂ 50 ದಿನಗಳಿಗೆ ಬೇಕಾದಷ್ಟು ಕಚ್ಚಾತೈಲ ಸಂಗ್ರಹವಿದೆ ಎಂಬ ವರದಿಗಳು ಇದ್ದಾಗಲೇ ಹಳೆಯ ದರದಲ್ಲಿ ಖರೀದಿಸಿದ ತೈಲದ ಬೆಲೆ ಹೆಚ್ಚಿಸುವುದು ಯಾಕೆ ಎಂಬ ಪ್ರಶ್ನೆ ಎದುರಾಗುತ್ತದೆ.
ಈಗಾಗಲೇ ಜನರ ಜೀವನ ವೆಚ್ಚ ಭಾರೀ ಏರಿಕೆಯಾಗಿದೆ. ಆದರೆ ಅದಕ್ಕೆ ಅನುಗುಣವಾಗಿ ವೇತನ ಹೆಚ್ಚಳವಾಗಿಲ್ಲ, ಉದ್ಯೋಗ ಸೃಷ್ಟಿಯೂ ಆಗಿಲ್ಲ. ದುಡಿಯುವ ಜನರು ಸಾಲ ಮಾಡಿಕೊಂಡೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಇಂಧನ ದರ ಏರಿಕೆ ಮತ್ತಷ್ಟು ಹಣದುಬ್ಬರಕ್ಕೆ ಕಾರಣವಾಗಲಿದೆ.
ಯುದ್ಧದ ಸಂಕಷ್ಟದ ಸಂದರ್ಭದಲ್ಲಿಯೂ ಜನರನ್ನು ದೋಚುವ ಕೇಂದ್ರ ಸರ್ಕಾರದ ಈ ಅಮಾನವೀಯ ಧೋರಣೆಯನ್ನು ಎಸ್‌ಯುಸಿಐ(ಸಿ) ಕಟುವಾಗಿ ವಿರೋಧಿಸುತ್ತದೆ. ತಕ್ಷಣವೇ ಅನಿಲ ಸಿಲಿಂಡರ್ ದರ ಏರಿಕೆಯನ್ನು ವಾಪಸ್ ಪಡೆಯಬೇಕು. ಜೊತೆಗೆ ಕಚ್ಚಾತೈಲ ಖರೀದಿಗೆ ಪರ್ಯಾಯ ಮೂಲಗಳನ್ನು ಕಂಡುಹಿಡಿಯುವಲ್ಲಿ ದೇಶದ ಸಾರ್ವಭೌಮತ್ವವನ್ನು ಸರ್ಕಾರ ಕಾಪಾಡಬೇಕು ಎಂದು ಒತ್ತಾಯಿಸಲಾಗಿದೆ.
