
ರೈತರಿಗೆ ಸಮಸ್ಯೆಗಳಾಗದಂತೆ ಕೆಲಸ ನಿರ್ವಹಿಸಬೇಕು: ಸಚಿವ ಶಿವರಾಜ ಎಸ್. ತಂಗಡಗಿ
Work should be carried out so that farmers do not face problems: Minister Shivaraj S. Thangadgi

ಕೊಪ್ಪಳ ಫೆಬ್ರವರಿ 23, (ಕರ್ನಾಟಕ ವಾರ್ತೆ): ಪವನ ಶಕ್ತಿ ಕೆಲಸವನ್ನು ರೈತರ ಜಮೀನುಗಳಿಗೆ ಸಮಸ್ಯೆಗಳಾಗದಂತೆ ನಿರ್ವಹಿಸುವುದರ ಜೊತೆಗೆ ಅವರ ಸಮಸ್ಯೆಗಳಿಗೆ ತಕ್ಷಣ ಸಂಬAಧಿಸಿದ ಕಂಪನಿಯವರು ಸ್ಪಂದಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.
ಸೋಮವಾರದಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆದ ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ 2022- 27 ಅನ್ನು ಅನುಷ್ಠಾನಗೊಳಿಸಲು ಜಿಲ್ಲೆಯಲ್ಲಿ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಲು ಅಧಿಕಾರಿಗಳು ಹಾಗೂ ವಿಂಡ್ ಎನರ್ಜಿ ಕಂಪನಿಗಳ ಮುಖ್ಯಸ್ಥರು/ ವ್ಯವಸ್ಥಾಪಕರೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ರಸ್ತೆಗಳಲ್ಲಿ 60 ರಿಂದ 70 ಟನ್ ಭಾರೀ ವಾಹನಗಳ ಸಂಚಾರದಿAದ ರಸ್ತೆಗಳು ಹಾಳಾಗುತ್ತಿರುವುದರ ಜೊತೆಗೆ ರೈತರ ಜಮೀನುಗಳಿಗೂ ಸಮಸ್ಯೆಗಳಾಗುತ್ತಿವೆ ಮತ್ತು ಸಂಬAಧಿಸಿದ ಕಂಪನಿಯವರು ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳಿವೆ. ಅವುಗಳನ್ನು ಮರುಕಳಿಸದಂತೆ ನೋಡಿಕೊಳ್ಳಬೇಕು. ನಮಗೆ ವಿಂಡ್ ಎನರ್ಜಿ ಬೇಕು, ಹಾಗಂತ ತಮ್ಮ ಮನಸ್ಸಿಗೆ ಬಂದAತೆ ಮಾಡುವುದಲ್ಲ. ಜನರಿಗೆ ಏನಾದರೂ ಸಮಸ್ಯೆಗಳಾದರು ಅವರು ಮೊದಲು ಕೇಳುವುದು ನಮಗೆ, ನಿಮಗಲ್ಲ ಎಂದು ವಿಂಡ್ ಎನರ್ಜಿ ಕಂಪನಿಯ ಮುಖ್ಯಸ್ಥರು ಹಾಗೂ ವ್ಯವಸ್ಥಾಪಕರಿಗೆ ಹೇಳಿದರು.
ತಾವು ಎಷ್ಟು ಫ್ಯಾನ್‌ಗಳನ್ನು ಹಾಕಲು ಪರ್ಮಿಶನ್ ಪಡೆದಿದ್ದೀರಾ, ಎಷ್ಟು ಹಾಕುತ್ತಿದ್ದೀರಾ ಎನ್ನುವ ಮಾಹಿತಿಯನ್ನು ನೀಡಬೇಕು. ಇದಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ, ಪಿ.ಆರ್.ಇ.ಡಿ, ಪೊಲೀಸ್, ಜೆಸ್ಕಾಂ, ಅರಣ್ಯ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿ ಅವರು ಕಂಪನಿಯವರು ಪಡೆದ ಅನುಮತಿ ಪರಿಶೀಲಿಸುವುದರ ಜೊತೆಗೆ ಸಿಎಸ್‌ಆರ್ ಅನುದಾನದಲ್ಲಿ ಹಾಳಾದ ರಸ್ತೆಗಳನ್ನು ಎಷ್ಟು ಸರಿಯಾಗಿ ಮಾಡಿದ್ದಾರೆ ಎನ್ನುವ ಕುರಿತು ಮಾಹಿತಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಆದಷ್ಟು ಬೇಗನೆ ಇನ್ನೊಂದು ಸಭೆ ಕರೆಯಲಿದ್ದು, ಆ ಸಭೆಯಲ್ಲಿ ಇಲ್ಲಿಯವರೆಗೆ ಜಿಲ್ಲೆಯ ಎಲ್ಲೆಲ್ಲಿ ರೈತರ ದೂರುಗಳು ಬಂದಿವೆ ಎನ್ನುವ ಕುರಿತು ಮಾಹಿತಿ ಕೊಡಬೇಕು ಹಾಗೂ ಎಲ್ಲಾ ಕಂಪನಿಯವರು ಸಮಗ್ರ ಮಾಹಿತಿಯೊಂದಿಗೆ ತಪ್ಪದೆ ಸಭೆಗೆ ಹಾಜರಿರಬೇಕೆಂದು ಹೇಳಿದರು.
ಕರ್ನಾಟಕ ವಿಧಾನಸಭೆ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲ ಮಾತನಾಡಿ, ವಿಂಡ್ ಎನರ್ಜಿಯ ಭಾರೀ ವಾಹನಗಳ ಸಂಚಾರದಿAದ ರಸ್ತೆಗಳು ಎಷ್ಟು ಹಾಳಾಗಿವೆ ಎಂದರೆ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ತಗೊಂಡು ಹೋಗಲಿಕ್ಕೂ ಆಗದ ಪರಿಸ್ಥಿತಿ ಬಂದಿದೆ. ವಾಹನಗಳು ಹೊಲದಲ್ಲಿ ಸಂಚರಿಸುತ್ತಿರುವುದರಿAದ ಧೂಳಿನಿಂದ ಬೆಳೆಗಳು ಹಾಳಾಗಿವೆ. ಈ ಕುರಿತು ಮೊನ್ನೆ ನಾಗರಾಳ ಗ್ರಾಮದಲ್ಲಿ ಗಲಾಟೆ ಆಯಿತು. ರಸ್ತೆಗಳು ಹಾಳಾಗುತ್ತಿರುವುದರಿಂದ ರೈತರು ದಿನಾಲು ಗೋಳಿಡುತ್ತಾರೆ. ಫ್ಯಾನ್‌ಗಳನ್ನು ಹಾಕಲು ಎಷ್ಟು ಪರ್ಮಿಷನ್ ಪಡೆದಿದ್ದಾರೆ ಎನ್ನುವ ಮಾಹಿತಿ ನಮಗೆ ಬೇಕು. ನಾನು ಈ ಕುರಿತು ಬರುವ ಅಧಿವೇಶನದಲ್ಲಿ ಧ್ವನಿ ಎತ್ತದೆ ಬಿಡಲ್ಲ ಎಂದು ಹೇಳಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ಕೆ. ರಾಜಶೇಖರ ಬಸವರಾಜ ಹಿಟ್ನಾಳ ಮಾತನಾಡಿ, ಜಿಲ್ಲೆಯಲ್ಲಿ ವಿಂಡ್ ಎನರ್ಜಿಗೆ 5,400 ಎಕರೆ ಜಮೀನು ಹೋಗುತ್ತದೆ. ಮುಂದೆ ಇದರ ಪರಿಣಾಮ ಏನಾಗುತ್ತದೆ ಎಂಬ ಕುರಿತು ನಾವು ವಿಚಾರ ಮಾಡಬೇಕಿದೆ. ಕಂಪನಿಯವರು ತಮ್ಮ ಕಂಡೀಶನ್‌ಗಳು ಏನಿವೆ ಎನ್ನುವುದನ್ನು ತಿಳಿಸಬೇಕು. ಇತ್ತೀಚೆಗೆ ಕವಲೂರಿನಲ್ಲಿ ಇದೇ ವಿಷಯಕ್ಕೆ ಗಲಾಟೆ ನಡೆಯಿತು. ರೈತರು ಬಂದು ಜಗಳ ಮಾಡಿದರು. ಅವರ ಸಮಸ್ಯೆಗಳಿಗೆ ಯಾಕೆ ತಾವು ಸರಿಯಾಗಿ ಸ್ಪಂದಿಸುತ್ತಿಲ್ಲ. ರೈತರ ಹೊಲ ಮತ್ತು ರಸ್ತೆಗಳು ಹಾಳಾಗುತ್ತಿವೆ. ಸಿಎಸ್‌ಆರ್ ಅನುದಾನದಲ್ಲಿ ರಸ್ತೆಗಳನ್ನು ಸರಿಪಡಿಸುವ ಕೆಲಸ ಮಾಡಬೇಕೆಂದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ವಿಂಡ್ ಎನರ್ಜಿ ಕಂಪನಿಗಳ ಮುಖ್ಯಸ್ಥರು/ವ್ಯವಸ್ಥಾಪಕರು ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.




