
ಇಂದು ರಾಜ್ಯದೆಲ್ಲೆಡೆ ಸಂಭ್ರಮದ ಸರ್ವಜ್ಞ ಜಯಂತಿ ಆಚರಣೆ
Sarvajna Jayanti celebrated with fervor across the state today
ಗಂಗಾವತಿ:20 ಸರ್ವಜ್ಞ ಕವಿಯು ತಮ್ಮ ತ್ರಿಪದಿಗಳ ಮೂಲಕ ಜೀವನದ ಅನುಭವ ಕಲಿಸಿಕೊಟ್ಟು, ಬದುಕಿನ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು ಎಂದು ಕುಂಬಾರ ಸಮಾಜದ ಯುವ ಮುಖಂಡ ಶರಣಪ್ಪ ಕುಂಬಾರ ಹೇಳಿದ್ದಾರೆ.

16ನೇ ಶತಮಾನದಲ್ಲಿ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ವಚನಕಾರ, ದಾರ್ಶನಿಕ, ಕುಂಬಾರ ಕವಿ ಸರ್ವಜ್ಞನ ಜಯಂತಿ ಆಚರಣೆಯನ್ನು ಇಂದು ಮಾಡಲಾಗುತ್ತಿದೆ.
ಹಾವೇರಿ ಜಿಲ್ಲೆಯ ಅಬಲೂರು ಸರ್ವಜ್ಞನ ಜನ್ಮಸ್ಥಳ. ಜನರ ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ಚಿಕಿತ್ಸಕ ನೋಟದೊಂದಿಗೆ ತಿದ್ದಿದ ಸಮಾಜ ಸುಧಾರಕ. ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಇವುಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಭಾಷೆ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿವೆ.
ಶುಕ್ರವಾರದಂದು ಗಂಗಾವತಿ ತಾಲೂಕು ಗಂಗಾವತಿ ನಗರದ ವಿರುಪಾಪೂರು ಆನೆಗೊಂದಿ ರೋಡ ಹತ್ತಿರ ಕುಂಬಾರ ಸಮಾಜದ ಸರ್ಕಲ್ ನಲ್ಲಿ ಕುಂಬಾರ ಸಂಘದಿಂದ ನಡೆದ ಕವಿ ಸರ್ವಜ್ಞ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡುತಿದ್ದರು.
ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವನು. ಸಮಾಜದ ಜ್ಞಾನವನ್ನು ಅರಿತವನು. ಸರ್ವಜ್ಞ ಕವಿಯು, ವಿದ್ಯೆ, ಕೃಷಿ ಹಾಗೂ ಜೀವನದ ಕುರಿತ ಆಳವನ್ನು ಅಳೆಯುವುದರ ಮೂಲಕ ದೊಡ್ಡ ವ್ಯಕ್ತಿತ್ವವನ್ನು ಹೊಂದಿದ್ದರು. ಅವರ ತ್ರಿಪದಿಗಳಲ್ಲಿ ಒಳ ಅರಿವು ಜಾಸ್ತಿ ಇದ್ದು, ಶ್ರೀಸಾಮಾನ್ಯರಿಗೂ ಅರ್ಥವಾಗುವಂತಿರುತ್ತದೆ. ಸರ್ವಜ್ಞರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವಂಥ ಕೆಲಸವನ್ನು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕುಂಬಾರ ಸಮಾಜದ ಹಿರಿಯ ಮುಖಂಡರಾದ ಪಕೀರಪ್ಪ ಕುಂಬಾರ, ಸಮಾಜದ ಮುಖಂಡರಾದ ರುದ್ರಪ್ಪ ಕುಂಬಾರ, ವೀರಭದ್ರಪ್ಪ ಕೆ. ಕೊಟ್ರೇಶ್ ಕೆ. ರಮೇಶ ಕೆ, ನಾಗರಾಜ್ ಉಪ್ಪಿ, ಗವಿಸಿದ್ದಪ್ಪ ಕುಂಬಾರ, ಬಸವರಾಜ, ರುದ್ರೇಶ, ಸುರೇಶ, ಸಂಗಪ್ಪ ಕಂಡಕ್ಟರ್, ಸಿದ್ದಲಿಂಗಪ್ಪ, ಗುಂಡಪ್ಪ ,ಮಂಜುನಾಥ್ ಮತ್ತು ಮಹಿಳಾ ಅಧ್ಯಕ್ಷೆ ಗೌರಮ್ಮ ಕುಂಬಾರ, ಪಾರ್ವತಿ, ಈರಮ್ಮ, ಜಯಶ್ರೀ ,ರೇಣುಕಾ, ಸೇರಿದಂತೆ ಇತರರು ಇದ್ದರು




