
ಸಹೋದರನೇ ನಾಲ್ಕು ತಿಂಗಳ ಗರ್ಭಿಣಿ ಸಹೋದರಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಘಟನೆಗೆ AIMSS ಖಂಡನೆ
AIMSS condemns the incident where a brother attempted to murder his four-month pregnant sister by chopping her with an axe

ಕೊಪ್ಪಳ ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ಬೇರೆ ಜಾತಿಯ ಯುವಕನನ್ನು ಮದುವೆಯಾಗಿದ್ದಕ್ಕೆ ಸಹೋದರನೇ ನಾಲ್ಕು ತಿಂಗಳ ಗರ್ಭಿಣಿ ಸಹೋದರಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಘಟನೆಗೆ AIMSS ಖಂಡನೆ
ಪತ್ರಿಕೆಗಳಲ್ಲಿ ವರದಿಯಾದಂತೆ ಕುರುಬ ಜನಾಂಗಕ್ಕೆ ಸೇರಿದ ಮೀನಾಕ್ಷಿ ಒಂದು ವರ್ಷದ ಹಿಂದೆ ನಾಯಕ ಸಮುದಾಯಕ್ಕೆ ಸೇರಿದ ಯುವಕನ ಜೊತೆ ಮದುವೆಯಾಗಿದ್ದರು. ಸಂಬಂಧಿಕರ ಮದುವೆ ಕಾರಣ ಊರಿಗೆ ಬಂದಿದ್ದಾಗ ಆರೋಪಿ ಸಹೋದರ ಮಂಜುನಾಥ ಮನೆಯಲ್ಲಿ ಇದ್ದ ಮೀನಾಕ್ಷಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಬರಿಗೊಂಡ ಯುವತಿ ಮದುವೆ ಮಂಟಪದ ಕಡೆ ಓಡಿ ಬಂದಿದ್ದು, ಈ ವೇಳೆ ನೂರಾರು ಜನರ ಸಮ್ಮುಖದಲ್ಲಿಯೇ ಕೊಡಲಿಯಿಂದ ತಲೆಗೆ, ಬೆನ್ನು ಮತ್ತು ಎಡಗೈಗೆ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಯುವತಿಯನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರದಿಯಾಗಿದೆ. ಸರ್ಕಾರ ಈ ಕೂಡಲೇ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ಖಾತ್ರಿಪಡಿಸಬೇಕು ಮತ್ತು ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಬೇಕೆಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಕೊಪ್ಪಳ ಜಿಲ್ಲಾ ಸಂಘಟನಾ ಸಮಿತಿಯು ಆಗ್ರಹಿಸುತ್ತದೆ.
ಮರ್ಯಾದಾಗೇಡು ಹತ್ಯೆಗೆ ಮುಖ್ಯ ಕಾರಣವೆಂದರೆ ಜಾತಿ ಪದ್ಧತಿಯ ಕಪಿಮುಷ್ಠಿ. ಅಂತರ್ಜಾತಿಯ, ಅಂತರ್ ಧರ್ಮಿಯ ಮದುವೆಗಳ ಬಗ್ಗೆ ಇರುವ ಅತೀವ ಅಸಹನೆಯಿಂದಾಗಿ ನೂರಾರು ಯುವ ಜೋಡಿಗಳು ಹತ್ಯೆಗೀಡಾಗುತ್ತಿದ್ದಾರೆ. ಒಂದು ಸಮುದಾಯ ಅಥವಾ ಕುಟುಂಬದ ಘನತೆಯನ್ನು ಉಳಿಸಿಕೊಳ್ಳಲು ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿಯೂ ಇಂತಹ ಘಟನೆಗಳು ಪದೇ ಪದೇ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಕೂಡಲೇ ಎಚ್ಚೆತ್ತುಕೊಂಡು ಸಮಾಜವನ್ನು ಪ್ರಜಾತಾಂತೀಕರಣಗೊಳಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು, ಹಾಗೆಯೇ ಮರ್ಯಾದಾಗೇಡು ಹತ್ಯೆಗಳನ್ನು ತಡೆಗಟ್ಟಲು ಮಾನ್ಯ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸಬೇಕೆಂದು AIMSS ಮನವಿ ಮಾಡುತ್ತದೆ.
ಹಕ್ಕೊತಾಯಗಳು
1.ಘಟನೆಯನ್ನು ಕೊಲೆ ಯತ್ನ ಎಂದು ಪರಿಗಣಿಸಿ ಪ್ರಕರಣವನ್ನು ಕೂಡಲೇ ದಾಖಲಿಸಿಕೊಂಡು ತನಿಖೆ ನಡೆಸಬೇಕು.
2.ಆರೋಪಿಗೆ ಕಠಿಣ ನಿದರ್ಶನೀಯ ಶಿಕ್ಷೆ ಖಾತ್ರಿಪಡಿಸಬೇಕು.
3.ಮರ್ಯಾದಾಗೇಡು ಹತ್ಯೆಗಳನ್ನು ತಡೆಗಟ್ಟಲು ಮಾನ್ಯ ಕಾಯ್ದೆಯನ್ನು ಈ ಕೂಡಲೇ ಜಾರಿಗೊಳಿಸಬೇಕು.
4.ಸಮಾಜವನ್ನು ಪ್ರಜಾತಾಂತ್ರೀಕರಣಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ಹಮ್ಮಿಕೊಳ್ಳಬೇಕು.




