
ಯಲಬುರ್ಗಾದಲ್ಲಿ ಮಕ್ಕಳ ಹಕ್ಕುಗಳು, ಕಾನೂನಗಳು ಹಾಗೂ ಮಕ್ಕಳ ರಕ್ಷಣೆಯ ಜಾಗೃತಿ

Awareness on children's rights, laws and child protection in Yelaburga

ಕೊಪ್ಪಳ ಫೆಬ್ರುವರಿ 10 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಮತ್ತು ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್, ಯಲಬುರ್ಗಾ ಇವರುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಯಲಬುರ್ಗಾ ಪಟ್ಟಣದ ಡಾ. ಬಾಬು ಜಗಜೀವನರಾವ್ ಸಮುದಾಯ ಭವನದಲ್ಲಿ “ಮಕ್ಕಳ ಹಕ್ಕುಗಳು, ಮಕ್ಕಳಿಗೆ ಸಂಬಂಧಿಸಿದ ಕಾನೂನಗಳು ಹಾಗೂ ಮಕ್ಕಳ ರಕ್ಷಣೆ” ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ ರಾಮತ್ನಾಳ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಹಲ್ಲೆ, ಕಿರುಕುಳ ಮತ್ತು ಅಂತರ ಜಾಲತಾಣಗಳಿಂದ ಮಕ್ಕಳ ಮೇಲಿನ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ಸರಕಾರವು “ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ-2012”ನ್ನು ಜಾರಿಯಲ್ಲಿ ತಂದಿರುತ್ತದೆ. ಆದ್ದಾಗ್ಯೋ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ಪ್ರಮಾಣ ಕಡಿಮೆಯಾಗದಿದ್ದರಿಂದಾಗಿ, ಈ ಕಾಯ್ದೆಯನ್ನು ಮತ್ತಷ್ಟು ಕಠಿಣವಾಗಿ ಹಾಗೂ ಅಪರಾಧಿಗಳನ್ನು ಶಿಕ್ಷಿಸಲು 2019ರಲ್ಲಿ ತಿದ್ದುಪಡಿಯನ್ನು ತಂದಿರುತ್ತದೆ. ಅದರನ್ವಯ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕನಿಷ್ಟ 20 ವರ್ಷದಿಂದ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ವೆ 2019-20ರನ್ವಯ ಜಿಲ್ಲೆಯಲ್ಲಿ 18 ವರ್ಷದೊಳಗೆ ಮದುವೆಯಾದ ವಯಸ್ಕ ಮಹಿಳೆಯರ ಪ್ರಮಾಣ 27.1% ರಷ್ಟಿದೆ. ರಾಜ್ಯದ ಪ್ರಮಾಣ 21.4%, ಇದು ರಾಜ್ಯದ ಸರಾಸರಿಗಿಂತಲೂ 6%ದಷ್ಟು ಹೆಚ್ಚಾಗಿರುವುದು. ಜಿಲ್ಲೆಯಲ್ಲಿ 18 ರಿಂದ 19 ವರ್ಷದೊಳಗಿನ ಬಾಲಗರ್ಭಿಣಿಯರಾಗಿರುವ ಪ್ರಮಾಣ 8.5% ಇದ್ದು, ರಾಜ್ಯದ ಸರಾಸರಿ 7% ಇದೆ. 1.5% ಅಧಿಕವಾಗಿದ್ದು, ಇದು ತೀವ್ರ ಕಳವಳಕಾರಿಯಾದ ವಿದ್ಯಮಾನವಾಗಿದೆ. ಜಿಲ್ಲೆಯಲ್ಲಿ ಇನ್ನೂ ಸಹ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಗರ್ಭಿಣಿಯರಾಗುತ್ತಿರುವುದನ್ನು ಇದು ತಿಳಿಸುತ್ತಿದೆ. ಈ ಕಾಯ್ದೆಯನ್ವಯ ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗಿನ ಲೈಂಗಿಕ ಸಂಪರ್ಕಗಳು ಸಹ ದಂಡನೆಯವಾಗಿದೆ. ಜಿಲ್ಲೆಯಲ್ಲಿ ಹಲವಾರು ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವುದನ್ನು ಗಮನಿಸಿದೆ. ಅದ್ದಾಗ್ಯೋ ಸಹ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹವನ್ನು ಮಾಡುತ್ತಿರುವುದು ತೀವ್ರ ವಿಷಾಧನೀಯವಾಗಿದೆ ಎಂದರು.
ಸಮುದಾಯಗಳಲ್ಲಿ, ಪಾಲಕರಲ್ಲಿ ಈ ಕಾಯ್ದೆಯ ಕುರಿತು ಮತ್ತಷ್ಟು ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಎಲ್ಲಾ ಬಾಲ್ಯವಿವಾಹ ನಿಷೇದಾಧಿಕಾರಿಗಳು ಮತ್ತಷ್ಟು ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕಾಗಿದೆ. ನಿರ್ಲಕ್ಷö್ಯತನ ತೊರುವ ಅಧಿಕಾರಗಳ ವಿರುದ್ಧ ಸರ್ವೋಚ್ಛ ನ್ಯಾಯಾಲಯದ ನಿದೇಶನದಂತೆ ಭಾರತೀಯ ಸುರಕ್ಷಿತಾ ಸಂಹಿತೆ 199(ಸಿ) ಅಡಿಯಲ್ಲಿ ಶಿಸ್ತು ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಶಿಪ್ಪಾರಸು ಮಾಡಲಾಗುವುದು ಎಂದು ಎಚ್ಚರಿಸುತ್ತಾ ಈ ಕಾಯ್ದೆಯ ಬಗ್ಗೆ ಅರಿತುಕೊಂಡು ಸಮುದಾಯದಲ್ಲಿ ಮತ್ತಷ್ಟು ಜಾಗೃತಿಯನ್ನು ಮೂಡಿಸಿ, ತನ್ಮೂಲಕ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಯಲಬುರ್ಗಾ ತಹಶೀಲ್ದಾರ ಮುರಳೀದರರಾವ್ ಕುಲಕರ್ಣಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದಿ, ಯಲಬುರ್ಗಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟ್ಟದೇಶ ಮಾಳೆಕೊಪ್ಪ, ಕಾರ್ಮಿಕ ನಿರೀಕ್ಷಕರಾದ ನಿವೇದಿತಾ, ತಾಲೂಕು ವೈದ್ಯಾಧಿಕಾರಿ ಡಾ. ನೇತ್ರಾವತಿ ಹಿರೇಮಠ, ಪ್ರೌಢ ಶಾಲಾ ವಿಭಾಗ ವಲಯ ಸಂಪನ್ಮೂಲ ವ್ಯಕ್ತಿ ಶರಣಗೌಡ ಪೊಲೀಸ್ ಪಾಟೀಲ್ ಹಾಗೂ ಇನ್ನೀತರೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ (ಸಾಂಸ್ಥಿಕ) ರವಿಕುಮಾರ ಪವಾರ ಸ್ವಾಗಿತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ರಕ್ಷಣಾಧಿಕಾರಿ (ಅಸಾಂಸ್ಥಿಕ) ರವಿ ಬಡಿಗೇರ ನಿರೂಪಿಸಿದರು. ಲೀಗಲ್ ಕಂ ಪ್ರೋಬೇಷನ ಆಫೀಸರ್ ಶಿವಲೀಲಾ ವನ್ನೂರು ಅವರು “ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ ಬಗ್ಗೆ ಹಾಗೂ ಪ್ರತಿಭಾ ಕಾಶಿಮಠ ಅವರು “ಬಾಲ್ಯವಿವಾಹ ನಿಷೇಧ ಕಾಯ್ದೆಯ” ಬಗ್ಗೆ ಜಾಗೃತಿ ಮೂಡಿಸಿದರು. ರಮೇಶ ವಂದಿಸಿದರು.
****




