ಕುಟುಂಬದ ಮೂಲ ಬೇರು ಗಟ್ಟಿಯಾಗಿದ್ದರೆ ಮಕ್ಕಳು ಸಮಾಜಕ್ಕೆ ಆಸ್ತಿಯಾಗುತ್ತಾರೆ: ಅರಳು ಮಲ್ಲಿಗೆ ಪಾರ್ಥಸಾರಥಿ

ಕುಟುಂಬದ ಮೂಲ ಬೇರು ಗಟ್ಟಿಯಾಗಿದ್ದರೆ ಮಕ್ಕಳು ಸಮಾಜಕ್ಕೆ ಆಸ್ತಿಯಾಗುತ್ತಾರೆ: ಅರಳು ಮಲ್ಲಿಗೆ ಪಾರ್ಥಸಾರಥಿ
If the family's roots are strong, children become an asset to society: Aralu Mallige Parthasarathy
ಬೆಂಗಳೂರು,ನ.25; ಮನೆಗಳಲ್ಲಿ ಮೌಲ್ಯಯುತ ಸಂಸ್ಕಾರವಿದ್ದರೆ ಸಮಾಜ ಮುಖಿ ಕೆಲಸಗಳಿಗೆ ಪ್ರೇರಣೆ ದೊರೆಯುತ್ತದೆ. ಕುಟುಂಬದ ಮೂಲ ಬೇರುಗಳು ಗಟ್ಟಿಯಾಗಿದ್ದರೆ ಮಕ್ಕಳು ಸಮಾಜಕ್ಕೆ ಆಸ್ತಿಯಾಗುತ್ತಾರೆ ಎಂದು ಹಿರಿಯ ಸಾಹಿತಿ ಅರಳು ಮಲ್ಲಿಗೆ ಪಾರ್ಥಸಾರಥಿ ಹೇಳಿದ್ದಾರೆ.
ವಿಠಲ ಪ್ರತಿಷ್ಠಾನ, ಕಲಬುರಗಿಯ ಶಿವಪುರ ಪ್ರಕಾಶನ ಮತ್ತು ಸ್ವರ ಫೌಂಡೇಷನ್ ನಿಂದ ಎನ್.ಆರ್. ಕಾಲೋನಿಯ ಡಾ. ಸಿ. ಅಶ್ವತ್ಥ್ ಸಭಾಂಗಣದಲ್ಲಿ ಕವಿ, ಲೇಖಕ, ನಾಟಕಕಾರ, ಸಂಘಟಕ, ಪ್ರಕಾಶಕ ಮತ್ತು ಹೋರಾಟಗಾರರಾಗಿದ್ದ ದಿವಂಗತ ವಿಠ್ಠಲರಾವ ಕುಲಕರ್ಣಿ ಅವರ ಸಮಗ್ರ ಸಾಹಿತ್ಯ, ಬದುಕು, ವ್ಯಕ್ತಿತ್ವ ಮತ್ತು ಜನಪರ ಹೋರಾಟದ ಸಾಧನೆಯ ಕುರಿತಾದ “ವಿಠಲರಾವ್ ಸಂಸ್ಕರಣಾ ಗ್ರಂಥ” ಬಿಡುಗಡೆ ಮಾಡಿ ಮಾತನಾಡಿದ ಅವರು, ಉನ್ನತ ಪದವಿಗಳನ್ನು ಪಡೆದಾಗ ಅಹಂ ಹುಟ್ಟುತ್ತದೆ. ಆದರೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುವುದನ್ನು ವಿಠಲರಾವ್ ಅವರು ನಮಗೆ ಕಲಿಸಿಕೊಟ್ಟಿದ್ದಾರೆ. ಕಡು ಬಡತನದಿಂದ ಬಂದ ಅವರು ಸತತ ಪ್ರಯತ್ನದ ಮೂಲಕ ಉನ್ನತ ಸ್ಥಾನಕ್ಕೆ ತಲುಪಿದ್ದಾರೆ. ಓರ್ವ ವ್ಯಕ್ತಿ ಅಳಿದ ಮೇಲೂ ಉಳಿಯಬೇಕು ಎಂಬುದನ್ನು ಸಂಸ್ಕರಣಾ ಗ್ರಂಥ ನಮಗೆ ತಿಳಿಸುತ್ತದೆ. ವಿಠಲ ರಾವ್ ಅವರು ತಮ್ಮ ಕುಟುಂಬದ ಮೇಲೆ ಗಾಢ ಪ್ರಭಾವ ಬೀರಿದ್ದಾರೆ ಎಂದರು.
ಹಿರಿಯ ಪತ್ರಕರ್ತ ಶ್ರೀಶಾ ಮಾತನಾಡಿ, ನಗರಗಳಲ್ಲಿ ವಾಸಿಸುವವರಲ್ಲಿ ಆತ್ಮೀಯತೆ ಕಡಿಮೆಯಾಗುತ್ತಿದ್ದು, ಸಾಮರಸ್ಯದ ಮೇಲೆ ಪರಿಣಾಮ ಬೀರುತ್ತಿದೆ. ವಾತ್ಸಲ್ಯವಿದ್ದಾಗ ಮಾನಸಿಕ ತಜ್ಞರ ಅಗತ್ಯವಿಲ್ಲ. ಹಿರಿಯರು ಕಿರಿಯರಿಗೆ ಹೇಳಿಕೊಡುವ ವ್ಯಕ್ತಿತ್ವದ ಪಾಠ ಮಕ್ಕಳ ಬೆಳವಣಿಗೆಯಲ್ಲಿ ಗಮನಾರ್ಹ ಪಾತ್ರ ವಹಿಸುತ್ತದೆ ಎಂದರು.
ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ವಿಠ್ಠಲ ಪ್ರತಿಷ್ಠಾನದ ವಿಠ್ಠಲ ಪ್ರಶಸ್ತಿಯನ್ನು ಬೆಂಗಳೂರಿನ ಡಾ. ವೆಂಕಟೇಶರಾವ .ಪಿ ಅವರಿಗೆ ನಿವೃತ್ತ ಐಎಎಸ್ ಅಧಿಕಾರಿ ಡಾ. ಮುದ್ದುಮೋಹನ್ ಅವರು ಪ್ರದಾನ ಮಾಡಿದರು.
ಯೋಗರತ್ನ ಡಾ. ಎಸ್. ಎನ್. ಓಂಕಾರ, ಶುಭಾ ಗೋವಿಂದರಾವ ದೇಶಪಾಂಡೆ, ಭಾಗ್ಯಶ್ರೀ ವಿಠ್ಠಲರಾವ ಶೇಖರ ಮತ್ತಿತರರು ಉಪಸ್ಥಿತರಿದ್ದರು.
ವಿಠ್ಠಲ ಗ್ರಂಥದ ಭಾವಗೀತೆಗಳ ಗಾಯನವನ್ನು ಶುಭಾ, ಭಾಗ್ಯಶ್ರೀ, ಅರ್ಜುನ ಹಾಗು ನಿಹಾರಿಕಾ ನಡೆಸಿಕೊಟ್ಟರು. ಪ್ರವೀಣ ಹಾಗು ಪ್ರದೀಪ ದೇಶಪಾಂಡೆ ಅವರು ತಬಲ, ಕೀಬೋರ್ಡ್ ಸಾಥ್ ನೀಡಿದರು.




