ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣೆ

Health check-up for NREGA workers

ಜಾಹೀರಾತು

ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಿ
ಸಹಾಯಕ ನಿರ್ದೇಶಕರು ಶ್ರೀ ಹೆಚ್.ವಿಜಯಕುಮಾರ್ ಸಲಹೆ


ಕೊಟ್ಟೂರು : ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಪ್ರತಿಯೊಬ್ಬರೂ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಟ್ಟೂರು ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರು (ಗ್ರಾ.ಉ) ಮಾನ್ಯ ಶ್ರೀ ಹೆಚ್.ವಿಜಯಕುಮಾರ್ ಅವರು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ವಿಜಯನಗರ, ತಾಲ್ಲೂಕು ಪಂಚಾಯಿತಿ ಕೊಟ್ಟೂರು, ಗ್ರಾಪಂ ರಾಂಪುರ ಹಾಗೂ ಆರೋಗ್ಯ ಇಲಾಖೆ, ಕೆಹೆಚ್ ಪಿಟಿ ಸಹಯೋಗದಲ್ಲಿ ಜಾಗಟಗೆರೆ ಗ್ರಾಮದ ಹೊರವಲಯದಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಸೋಮವಾರ ಆಯೋಜಿಸಿದ್ದ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿಯ ಮಾನ್ಯ ಶ್ರೀ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ದೇಶನ ಹಾಗೂ ತಾಪಂ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಡಾ.ಬಿ.ಆನಂದ್ ಕುಮಾರ್ ಅವರ ಮಾರ್ಗದರ್ಶನ ದಂತೆ ಇಂದು ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಲಾಗಿದೆ. ಪ್ರಸಕ್ತ ವರ್ಷ ಹೆಚ್ಚಿನ ಬಿಸಿಲು ಇದೆ. ಬಿಸಿಲಿನ ತಾಪಮಾನ ದಿಂದ ಕೂಲಿಕಾರರಿಗೆ ತೆಲೆ ಸುತ್ತು, ರಕ್ತದ ಒತ್ತಡ ಹೆಚ್ಚಳ ಹೀಗೆ ನಾನಾ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಳದಲ್ಲಿ ರಕ್ತದೊತ್ತಡ, ಶುಗರ್, ವಾಂತಿ, ಭೇದಿ ಪ್ರಕರಣದ ಬಗ್ಗೆ ತಪಾಸಣೆ ಮಾಡಲಾಗುತ್ತಿದೆ. ಎಲ್ಲ ಕೂಲಿಕಾರರು ತಪಾಸಣೆಗೆ ಒಳಗಾಗಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಆರೋಗ್ಯ ಇಲಾಖೆಯ ಸಿಹೆಚ್ಒ ಶೋಭಾ ಅವರು ಮಾತನಾಡಿ, ಬಿಸಿಲಿನ ಸಂದರ್ಭದಲ್ಲಿ ಕೆಲಸ ಮಾಡುವುದರಿಂದ ಬಿಪಿ ಹೆಚ್ಚಾಗಿರುತ್ತದೆ. ಇದರಿಂದ ತಲೆ ಸುತ್ತು ಬಂದು ಬೀಳುವ ಸಾಧ್ಯತೆ ಇರುತ್ತದೆ. ಶಿಬಿರದಲ್ಲಿ ಕ್ಯಾನ್ಸರ್ ಪರೀಕ್ಷೆಯನ್ನು ಸಹಾ ಮಾಡಲಾಗುತ್ತಿದೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ ಹೀಗಾಗಿ ತಂಬಾಕು ಸೇವನೆಯನ್ನು ಬಿಡಬೇಕು.
ಶುದ್ಧ , ಕಾಯಿಸಿ ಆರಿಸಿದ ನೀರನ್ನು ಸೇವನೆ ಮಾಡಬೇಕು. ಕಲುಷಿತ ನೀರು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜೀವಹಿಸಬೇಕು ಎಂದು ಹೇಳಿದರು.
ಗ್ರಾಪಂ ಅಭಿವೃದ್ದಿ ಅಧಿಕಾರಿ ಶ್ರೀ ಸಿ.ಉಮಾಪತಿ, ಸದಸ್ಯರಾದ ಶ್ರೀ ನಾಗರಾಜ್, ತಾಂತ್ರಿಕ ಸಂಯೋಜಕರಾದ ಶ್ರೀಕಾಂತ್ ಡಿ.ಎಂ., ಐಇಸಿ ಸಂಯೋಜಕ ಪ್ರಭುಕುಮಾರ್, ತಾಂತ್ರಿಕ ಸಹಾಯಕ ರವಿಕುಮಾರ್ ನಾಯ್ಕ, ಬಿಎಫ್ಟಿ ಗಂಗಾಧರ್, ಸಾವಿತ್ರಮ್ಮ, ಮೇಟಿ ರುದ್ರೇಶ್, ಸೇರಿದಂತೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಕೂಲಿಕಾರರು ಇದ್ದರು.
((((ಕೋಟ್))))
ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರ ಆರೋಗ್ಯ ದೃಷ್ಟಿಯಿಂದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಲಾಗುತ್ತಿದೆ. ಕೂಲಿಕಾರರು ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಂಡು ಆರೋಗ್ಯಯುತ ಜೀವನ ತಮ್ಮದಾಗಿಸಿಕೊಳ್ಳಬೇಕು.
ಡಾ.ಬಿ.ಆನಂದ್ ಕುಮಾರ್,
ಕಾರ್ಯನಿರ್ವಾಹಕ ಅಧಿಕಾರಿಗಳು, ತಾಪಂ ಕೊಟ್ಟೂರು

Leave a Reply

Your email address will not be published. Required fields are marked *